ಬಾಂಬ್ ಹಾಕುವುದಾಗಿ ಭಟ್ಕಳ ಪೊಲೀಸ್ ಠಾಣೆಗೆ ಬೆದರಿಕೆ ಪತ್ರ

Prasthutha|

ಕಾರವಾರ: ಬಾಂಬ್ ಹಾಕುವುದಾಗಿ ಪೋಸ್ಟ್ ಕಾರ್ಡ್ ನಲ್ಲಿ ಹುಸಿ ಬೆದರಿಕೆ ಹಾಕಿರುವ ಪತ್ರ ಭಟ್ಕಳ ಪೊಲೀಸ್ ಠಾಣೆ ತಲುಪಿರುವುದು ತಡವಾಗಿ ಬೆಳಕಿಗೆ ಬಂದಿದೆ.

- Advertisement -

ಬೆದರಿಕೆ ಕಾರ್ಡ್ ಬರೆದ ಆರೋಪಿ ಹೊಸಪೇಟೆಯ ಹನುಮಂತಪ್ಪನನ್ನು ಚೆನ್ನೈ ಪೊಲೀಸರು ಈಗಾಗಲೇ ಬಂಧಿಸಿದ್ದು, ಆತನನ್ನು ವಶಕ್ಕೆ ಪಡೆಯಲು ಭಟ್ಕಳ ಪೊಲೀಸರು ಕಾನೂನು ಪ್ರಕ್ರಿಯೆ ಪ್ರಾರಂಭಿಸಿದ್ದಾರೆ.

“ಚೆನ್ನೈ ಕಲೆದಾ-ನೆಕ್ಟ್ಸ್ ಟಾರ್ಗೆಟ್ ಡಿಸೆಂಬರ್ 25 ಆ್ಯಂಡ್ ಹ್ಯಾಪಿ ನ್ಯೂ ಇಯರ್ 2023 ಬ್ಲಾಸ್ಟ್” ಎಂದು ಇಂಗ್ಲೀಷ್’ನಲ್ಲಿ ಬರೆದ ಪೋಸ್ಟ್ ಕಾರ್ಡ್ ಡಿಸೆಂಬರ್’ನಲ್ಲಿ ಭಟ್ಕಳ ಪೊಲೀಸ್ ಠಾಣೆಗೆ ತಲುಪಿತ್ತು. ಸೂಕ್ಷ್ಮ ವಿಷಯವಾಗಿದ್ದರಿಂದ ಬಹಿರಂಗ ಮಾಡದೇ ಪೊಲೀಸರು ತನಿಖೆ ನಡೆಸಿದ್ದರು. ಪೋಸ್ಟ್ ಕಾರ್ಡ್ ಧರ್ಮಸ್ಥಳದಿಂದ ಪೋಸ್ಟ್ ಆಗಿದ್ದು, ಭಯೋತ್ಪಾದಕ ಚಟುವಟಿಕೆಗೂ ಇದಕ್ಕೂ ಯಾವುದೇ ಲಿಂಕ್ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

- Advertisement -

ಆರೋಪಿ ಚೆನ್ನೈ’ನಲ್ಲಿ ಲ್ಯಾಪ್ ಟಾಪ್ ಕಳ್ಳತನ ಮಾಡಿ ಅಂಗಡಿಯೊಂದಕ್ಕೆ ಅದನ್ನು ಮಾರಲು ಹೋಗಿದ್ದ ಸಂದರ್ಭದಲ್ಲಿ ಅನುಮಾನಗೊಂಡ  ಅಂಗಡಿ ಮಾಲೀಕ ಐಡಿ ಕಾರ್ಡ್ ಕೊಡು ಎಂದು ಕೇಳಿದ್ದಾನೆ. ಈ ವೇಳೆ ಅಲ್ಲಿಂದ ತಪ್ಪಿಸಿಕೊಂಡು ಬಂದ ಹನುಮಂತಪ್ಪ, ಅಂಗಡಿ ಮಾಲೀಕನ ಮೇಲಿನ ಸಿಟ್ಟಿನಿಂದ ಆತನ ಮೊಬೈಲ್ ನಂಬರ್ ಹಾಕಿ ಬಾಂಬ್ ಬೆದರಿಕೆ ಪತ್ರ ಹಾಕಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ.

ಆತನೇ ಭಟ್ಕಳಕ್ಕೂ ಬಾಂಬ್ ಬೆದರಿಕೆ ಪತ್ರ ಬರೆದಿದ್ದಾನೆ ಎಂಬ ಮಾಹಿತಿ ಇದ್ದು, ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಲಾಗಿದೆ. ಚೆನ್ನೈ ನ್ಯಾಯಾಲಯದಿಂದ ಬಾಡಿ ವಾರಂಟ್ ಮೇಲೆ ಆತನನ್ನು ಪಡೆಯುವ ಕಾನೂನು ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಆತನ ವಿಚಾರಣೆಯ ನಂತರ ಹೆಚ್ಚಿನ ಅಂಶಗಳು ಬೆಳಕಿಗೆ ಬರಲಿವೆ ಎಂದು ಭಟ್ಕಳ ಪೊಲೀಸರು ತಿಳಿಸಿದ್ದಾರೆ.

Join Whatsapp