ಬಲ್ಲಿಯಾ: ಧ್ವನಿವರ್ಧಕಗಳನ್ನು ಆಝಾನ್ ಗೆ ಬಳಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಉತ್ತರ ಪ್ರದೇಶದ ಸಚಿವ ಆನಂದ್ ಸ್ವರೂಪ್ ಶುಕ್ಲಾ ಅವರು ಬಲ್ಲಿಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಪತ್ರ ವೊಂದನ್ನು ಬರೆದಿದ್ದಾರೆ. ಅಲಹಾಬಾದ್ ಹೈಕೋರ್ಟ್ ಆದೇಶದ ಪ್ರಕಾರ ಮಸೀದಿಗಳಲ್ಲಿ ಧ್ವನಿವರ್ಧಕಗಳ ಪ್ರಮಾಣವನ್ನು ನಿಗದಿಪಡಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
‘ಆಝಾನ್ ದಿನಕ್ಕೆ ಐದು ಬಾರಿ ಮತ್ತು ಇಡೀ ದಿನ ನೀಡಲಾಗುತ್ತದೆ. ಇದರ ಪರಿಣಾಮವಾಗಿ ನಾನು ಯೋಗ, ಧ್ಯಾನ, ಪೂಜೆ ಮತ್ತು ಸರ್ಕಾರಿ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತೇನೆ’ ಎಂದು ಶುಕ್ಲಾ ತಮ್ಮ ಕ್ಷೇತ್ರದ ಕಾಜಿಪುರ ಮದೀನಾ ಮಸೀದಿಯನ್ನು ಉಲ್ಲೇಖಿಸಿ ಪತ್ರದಲ್ಲಿ ತಿಳಿಸಿದ್ದಾರೆ.
ಮಸೀದಿಯ ಸುತ್ತಮುತ್ತ ಹಲವಾರು ಶಾಲೆಗಳಿರುವುದರಿಂದ ವಿಧ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ ಎಂದು ಸಚಿವರು ಹೇಳಿದ್ದಾರೆ. ‘ಧ್ವನಿವರ್ಧಕಗಳ ಮೂಲಕ ಧಾರ್ಮಿಕ ಪ್ರಚಾರ ನಡೆಯುತ್ತದೆ. ಮಸೀದಿ ಗಳ ನಿರ್ಮಾಣಕ್ಕೆ ದೇಣಿಗೆ ನೀಡುವ ಮಾಹಿತಿಯನ್ನೂ ಕೂಡ ಅತ್ಯಂತ ಜೋರಾಗಿ ಪ್ರಸಾರ ಮಾಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ರೋಗಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಸಾಮಾನ್ಯ ಸಾರ್ವಜನಿಕರು ವಿಪರೀತ ಶಬ್ದ ಮಾಲಿನ್ಯವನ್ನು ಎದುರಿಸುತ್ತಿದ್ದಾರೆ’ ಎಂದು ಶುಕ್ಲಾ ಪತ್ರದಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಅಲಹಾಬಾದ್ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಸಂಗಿತಾ ಶ್ರೀವಾಸ್ತವ ಅವರು ಪ್ರಯಾಗರಾಜ್‌ನ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಹತ್ತಿರದ ಮಸೀದಿಯಿಂದ ಕೇಳಿ ಬರುವ ಅಝಾನ್ನಿಂದಾಗಿ ನಿದ್ರಾಭಂಗವಾಗುತ್ತಿದೆ. ಅದರಿಂದ ದಿನವಿಡೀ ತಲೆನೋವಾಗುತ್ತಿರುವುದರಿಂದ ಕೆಲಸದ ಸಮಯದಲ್ಲಿ ಕಷ್ಟವಾಗುತ್ತದೆ ಎಂದು ದೂರಿದ್ದರು.