ಅಸಂವಿಧಾನಿಕ ತೀರ್ಪಿಗೆ ಅಸಮ್ಮತಿ ಸೂಚಿಸಿ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯೋಣ: ಕ್ಯಾಂಪಸ್ ಫ್ರಂಟ್

Prasthutha|

ಬೆಂಗಳೂರು: ಹಿಜಾಬ್ ವಿಚಾರವಾಗಿ ಮಾನ್ಯ ಉಚ್ಚ ನ್ಯಾಯಾಲಯವು ನೀಡಿದ ತೀರ್ಪು ಅಸಂವಿಧಾನಿಕವಾಗಿದ್ದು, ನ್ಯಾಯದ ನಿರೀಕ್ಷೆಯಲ್ಲಿದ್ದ ರಾಜ್ಯದ ಮುಸಲ್ಮಾನ ಸಮುದಾಯದ ವಿದ್ಯಾರ್ಥಿನಿಯರಿಗೆ ಈ ತೀರ್ಪು ಬಹಳ ಖೇದಕರವಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಉಪಾಧ್ಯಕ್ಷ ಅಡ್ವಕೇಟ್ ರೋಶನ್ ನವಾಝ್ ಹೇಳಿದ್ದಾರೆ.

- Advertisement -

ಬೆಂಗಳೂರಿನ ಪತ್ರಿಕಾ ಭವನದಲ್ಲಿ ಇಂದು ಕ್ಯಾಂಪಸ್ ಫ್ರಂಟ್ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನವಾಝ್, ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವುದರ ಬದಲಾಗಿ ಸರಕಾರದ ಆದೇಶಗಳನ್ನೇ ಎತ್ತಿ ಹಿಡಿಯುವ ಮುಖಾಂತರ ಅನ್ಯಾಯದ ತೀರ್ಪನ್ನು ಉಚ್ಚ ನ್ಯಾಯಾಲಯದ ತ್ರಿ ಸದಸ್ಯ ಪೀಠವು ಪ್ರಕಟಿಸಿದೆ.ಈ ಅಸಂವಿಧಾನಿಕ ತೀರ್ಪಿಗೆ ಅಸಮ್ಮತಿ ಸೂಚಿಸಿ ಸಂವಿಧಾನದ ಆಶಯಗಳನ್ನು ನಾವೆಲ್ಲರೂ ಎತ್ತಿಹಿಡಿಯೋಣ ಎಂದು ಅವರು ಕರೆ ನೀಡಿದ್ದಾರೆ.

ಇಸ್ಲಾಂನಲ್ಲಿ ಕಡ್ಡಾಯಗೊಳಿಸಿದ ಶಿರವಸ್ತ್ರವನ್ನು ಇಸ್ಲಾಂನ ಕಡ್ಡಾಯ ಆಚರಣೆಯೇ ಅಲ್ಲ ಎಂದು ನ್ಯಾಯಾಲಯವು ತೀರ್ಪು ನೀಡುವ ಮುಖಾಂತರ ರಾಜ್ಯದ ಮುಸಲ್ಮಾನ ಸಮುದಾಯಕ್ಕೆ ಬಹಳ ಆಘಾತವನ್ನು ನೀಡಿದೆ. ಸಂವಿಧಾನದ ಯಾವುದೇ ಆಶಯಗಳನ್ನು ಎತ್ತಿ ಹಿಡಿಯದೆ ಆ ಮುಖಾಂತರ ತೀರ್ಪು ನೀಡಬೇಕಾಗಿದ್ದ ನ್ಯಾಯಾಲಯವು ಅಸಂವಿಧಾನಿಕವಾಗಿ ಈ ತೀರ್ಪನ್ನು ಪ್ರಕಟಿಸಿದೆ ಎಂದರು.

- Advertisement -

ಅಸಂವಿಧಾನಿಕ ಹಾಗೂ ಅಸಮ್ಮತಿಯ ತೀರ್ಪು ಎಂದು ಹೇಳಲು ಪ್ರಮುಖ ಕಾರಣಗಳನ್ನು ಕ್ಯಾಂಪಸ್ ಫ್ರಂಟ್ ಸುದ್ದಿಗೋಷ್ಟಿಯಲ್ಲಿ ಮುಂದಿಟ್ಟಿದೆ :-

ಉಚ್ಚ ನ್ಯಾಯಾಲಯವು ವಾದ ಮತ್ತು ಪ್ರತಿವಾದವನ್ನು ಆಲಿಸಿ ನಾಲ್ಕು ಸವಾಲುಗಳನ್ನು ಸೃಷ್ಟಿಸಿ ಅದಕ್ಕೆ ಉತ್ತರಿಸಿದೆ. ಇದರಲ್ಲಿ ಮೊದಲನೆಯ ಪ್ರಶ್ನೆ ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗವೇ ಎಂದು ಪ್ರಶ್ನಿಸಿ ಅದಕ್ಕೆ ಇಲ್ಲ ಎಂದು ಉತ್ತರಿಸಿದೆ. ಇದು ಸಂಪೂರ್ಣವಾಗಿ ಸುಪ್ರೀಂ ಕೋರ್ಟಿನ ಆದೇಶವನ್ನು ಉಲ್ಲಂಘಿಸುವ ರೀತಿಯಲ್ಲಿದೆ. ಯಾಕೆಂದರೆ ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶದ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆ ಇನ್ನು ಬಾಕಿ ಇದೆ. ಈ ಹಿಂದೆ ವಿಚಾರಣೆ ನಡೆಸಿದ ನ್ಯಾಯಾಧೀಶರ ಪೀಠಗಳು ಎತ್ತಿದ ಪ್ರಶ್ನೆಗಳಿಗೆ ಇನ್ನೂ ಸಹ ಅಂತಿಮ ತೀರ್ಪು ಬರದೆ ಇರುವಾಗ ಅದರ ನಾಲ್ಕು ಮತ್ತು ಐದನೇ ಪ್ರಶ್ನೆಗೆ ಸಂಬಂಧಿಸಿದಂತೆ ಇದೆ ಧಾರ್ಮಿಕ ನಂಬಿಕೆ, ಆಚರಣೆಯ ಬಗ್ಗೆ ಅನುಚ್ಛೇದ 25 ರ ಅಡಿಯಲ್ಲಿನ ವ್ಯಾಪ್ತಿ ಏನು ಎಂಬುದರ ಬಗ್ಗೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಕುರಿತಾಗಿ ಅನುಚ್ಛೇದ 26 ರ ಪ್ರಕಾರ ಧಾರ್ಮಿಕ ನಿದರ್ಶನಗಳ ಮತ್ತು ಮೂಲಭೂತ ಹಕ್ಕುಗಳ ಮಧ್ಯದಲ್ಲಿರುವ ಸಂಬಂಧಗಳ ಕುರಿತಾಗಿ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವಾಗ ಹೈಕೋರ್ಟ್ ಅದೇ ಮಾದರಿಯ ಪ್ರಶ್ನೆಗಳಿಗೆ ಉತ್ತರಿಸಲು ಹೇಗೆ ಸಾಧ್ಯ.

ಅದೇ ರೀತಿ ಕುರ್ಹಾನ್ ನ ಸೂರಃ ಅನ್ನೂರು 31 ನೇ ಅಧ್ಯಾಯದಲ್ಲಿ ಬಹಳ ಸ್ಪಷ್ಟವಾಗಿರುವ ಮಹಿಳೆಯರು ತಮ್ಮ ತಲೆಕೂದಲನ್ನು ಇತರರಿಗೆ ತೋರ್ಪಡಿಸಬಾರದು ಹಾಗಾಗಿ ಶಿರವಸ್ತ್ರ ಕಡ್ಡಾಯವೆಂದು ಉಲ್ಲೇಖಿಸಿದೆ ಆದರೆ ತೀರ್ಪಿನ 65 ರಿಂದ 68 ನೇ ಪುಟದಲ್ಲಿ ಅಬ್ದುಲ್ಲಾ ಯೂಸುಫ್ ಅಲಿ ಎಂಬವರು ಮಾಡಿದ ವ್ಯಾಖ್ಯಾನವನ್ನೇ ಅಂತಿಮವಾಗಿ ಪರಿಗಣಿಸಿ ಯಾವುದೇ ವಿದ್ವಾಂಸರಲ್ಲಿ ಅಭಿಪ್ರಾಯ ಕೇಳದೆ ಅದರಲ್ಲಿ ತಪ್ಪಾಗಿ ವ್ಯಾಖ್ಯಾನಿಸಿದ ಕುರ್ಹಾನ್ ಸೂಕ್ತವನ್ನು ಪರಿಗಣಿಸಿ ಶಿರವಸ್ತ್ರ ಇಸ್ಲಾಂಮಿನಲ್ಲಿ ಕಡ್ಡಾಯವಲ್ಲ ಹಾಗೂ ಕುರ್ಹಾನಿನ ಬಕರ ಸೂರಃ 256 ನೇ ಸೂಕ್ತದಲ್ಲಿ ಉಲ್ಲೇಖಿಸಿದ “ಇಸ್ಲಾಂ ಧರ್ಮಕ್ಕೆ ಆಹ್ವಾನಿಸುವುದರಲ್ಲಿ ಬಲವಂತಿಕೆ ಇಲ್ಲ” ಎಂಬುದನ್ನು ಇದಕ್ಕೆ ಜೋಡಿಸಿ “ಇಸ್ಲಾಂ ಧರ್ಮದಲ್ಲಿ ಬಲವಂತಿಕೆ ಇಲ್ಲ” ಆದ್ದರಿಂದ ಶಿರವಸ್ತ್ರ ಕಡ್ಡಾಯವಲ್ಲವೆಂದು ತಪ್ಪಾಗಿ ಅರ್ಥೈಸಿದ್ದಾರೆ.

ಇನ್ನೊಂದು ಪ್ರಶ್ನೆಗೆ ಉತ್ತರಿಸುತ್ತಾ ಹೈಕೋರ್ಟ್ ಹೇಳಿರುವ ಆದೇಶದ ಪ್ರಕಾರ ಸರಕಾರ ತಗೆದುಕೊಂಡಿರುವ ಎಲ್ಲಾ ನಿರ್ಣಯಗಳು ಕಾನೂನಾತ್ಮಕವಾಗಿವೆ ಎಂದು ಹೈಕೋರ್ಟ್ ಹೇಳುತ್ತೆ ಹಾಗಾದರೆ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಮಾರ್ಗ ಸೂಚಿ 2021-2022 ರ ಮಾರ್ಗ ಸೂಚಿಯ ಅಧ್ಯಾಯ 6 ರಲ್ಲಿರುವ ಅಂಶದ ಅನುಸಾರವಾಗಿ ಯಾವುದೇ ಸಮವಸ್ತ್ರ ಕಡ್ಡಾಯಗೊಳಿಸಿರುವುದಿಲ್ಲ, ಒಂದು ವೇಳೆ ಯಾವುದೇ ಕಾಲೇಜಿನ ಆಡಳಿತ ಸಮಿತಿ  ಅಥವಾ ಅಲ್ಲಿನ ಪ್ರಾಂಶುಪಾಲರು ಸಮವಸ್ತ್ರವನ್ನು ಕಡ್ಡಾಯಗೊಳಿಸಿದರೆ ಅದು ಕಾನೂನು ಬಾಹಿರ ಮತ್ತು ಅಪರಾಧವೆಂದು ಉಲ್ಲೇಖಿಸಲಾಗಿದೆ. ಹೀಗಿರುವಾಗ ಸಮವಸ್ತ್ರ ಕಡ್ಡಾಯಗೊಳಿಸಿದ ಉಡುಪಿಯ ಕಾಲೇಜಿನ ಆಡಳಿತ ಸಮಿತಿ ಮತ್ತು ಪ್ರಾಂಶುಪಾಲರ ಮೇಲೆ ಕ್ರಮ ವಹಿಸಬೇಕಿತ್ತು ಆದರೆ ಇದ್ಯಾವುದೂ ಗಮನಿಸದೆ ಸರಕಾರ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಅಂದರೆ ಫೆಬ್ರವರಿ 5 ಕ್ಕೆ ಹೊರಡಿಸಿದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಪ್ರಾರಂಭಿಕ ವರ್ಷದಲ್ಲಿ ರೂಪಿಸಿದ ಒಂದು ನಿಯಮಕ್ಕೆ ವಿರುದ್ಧವಾಗಿ ಇನ್ನೊಂದು ಸುತ್ತೋಲೆ ಹೊರಡಿಸವುದು ಎಷ್ಟು ಸರಿ ಇದು ಕಾನೂನಾತ್ಮಕವೇ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.ಅದೇ ರೀತಿ 31/01/2014 ರಂದು ಸರಕಾರ ಹೊರಡಿಸಿದ CDC ಸಮಿತಿಯ ನಿಯಮದ ಪ್ರಕಾರ CDC ಸಮಿತಿಗೆ ಕಾಲೇಜು ಸಮವಸ್ತ್ರದ ವಿಷಯದಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರವಿಲ್ಲ, ಆದರೆ ನ್ಯಾಯಾಲಯವು CDC ಸಮಿತಿಗೆ ಹೇಗೆ ಸಮವಸ್ತ್ರ ರೂಪಿಸಲು ಅಧಿಕಾರ ನೀಡುತ್ತೆ ಹಾಗೂ ಇದು ಇನ್ನೂ ಅಧಿಕಾರದ ದುರ್ಬಳಕೆಗೆ ಎಡೆಮಾಡಿಕೊಡುತ್ತದೆ. ಅದೇ ರೀತಿ ತೀರ್ಪಿನಲ್ಲಿ ಸಂವಿಧಾನದ ವಿದಿ 19(1)(a) ಹಾಗೂ ವಿದಿ 21 ನೇ ಹಕ್ಕುಗಳನ್ನು ಪರಿಗಣಿಸಲಿಲ್ಲ, ಮುಂದುವರೆದು ಸಮವಸ್ತ್ರದ ವಿಚಾರವಾಗಿ ಇದು ಪ್ರಾಚೀನ ಕಾಲದ ಗುರುಕುಲ ಪದ್ದತಿಯಿಂದ ಬಂದಿರುವಂತಹದು ಎಂಬ ಬ್ರಾಹ್ಮಣವಾದದ ಗುರುಕುಳ ಪದ್ದತಿಯನ್ನು ಎತ್ತಿಹಿಡಿದಿರುವಂತಹದು ಖೇದಕರ.

ಈ ತೀರ್ಪಿನಲ್ಲಿ ಅಂತಿಮವಾಗಿ ತೆಗೆದ ನಿರ್ಣಯಗಳಲ್ಲಿ ಸಮವಸ್ತ್ರ ನಿಗದಿಪಡಿಸಿದ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಮಾತ್ರ ಅನ್ವಯವೆಂದು ಉಲ್ಲೇಖಿಸಿದೆ ಆದರೆ ಇದನ್ನೇ ಅಸ್ತ್ರವಾಗಿಸಿಕೊಂಡು ರಾಜ್ಯದ ಬಹುತೇಕ ಪದವಿ ಕಾಲೇಜುಗಳಲ್ಲೂ ಶಿರವಸ್ತ್ರ ನಿಷೇಧ ಮಾಡಿ ತರಗತಿಗೆ ಹಾಗೂ ಪರೀಕ್ಷೆಗಳಿಗೆ ಅನುಮತಿ ನಿರಾಕರಿಸುತ್ತಿರುವುದು ಕಂಡುಬರುತ್ತಿದೆ.

ಈ ಎಲ್ಲಾ ಅಂಶಗಳನ್ನು ಗಮನಿಸುವಾಗ ಇದು ಅಸಂವಿಧಾನಿಕವಾದ ತೀರ್ಪು ಎಂದು ಸ್ಪಷ್ಟವಾಗುತ್ತಿದ್ದು, ಈ ಮುಖಾಂತರ ಜನಸಾಮಾನ್ಯರಿಗೆ ನ್ಯಾಯಾಲಯದ ಮೇಲೆ ಇದ್ದಂತಹ ನಂಬಿಕೆ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ, ಈ ತೀರ್ಪು ರಾಜ್ಯದ ಮುಸಲ್ಮಾನ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ತೀರ್ಪಿಗೆ ಅಸಮ್ಮತಿ ಸೂಚಿಸಿ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ  ಅಭಿಪ್ರಾಯಪಟ್ಟಿದೆ.

ಪತ್ರಿಕಾಗೋಷ್ಠಿಯಲ್ಲಿ ಸಿಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಫರಾಝ್ ಗಂಗಾವತಿ, ರಾಜ್ಯ ಸಮಿತಿ ಸದಸ್ಯ ಝುಬೈರ್ ಬೆಂಗಳೂರು, ಸಿಎಫ್ ಐ ಬೆಂಗಳೂರು ಜಿಲ್ಲಾಧ್ಯಕ್ಷ ಆಕಿಬ್ ಉಪಸ್ಥಿತರಿದ್ದರು.

Join Whatsapp