ರಫೇಲ್ ಹಗರಣ ಕುರಿತು ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಯಲಿ: ಪವನ್ ಖೇರಾ

Prasthutha|

ಬೆಂಗಳೂರು: ರಫೇಲ್ ಹಗರಣದಲ್ಲಿ ನಡೆದಿರುವ ಭ್ರಷ್ಟಾಚಾರ, ಲಂಚ ಹಾಗೂ ಒಳಸಂಚನ್ನು ಮೋದಿ ಸರ್ಕಾರ ಪದೇ ಪದೇ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಎಐಸಿಸಿ ವಕ್ತಾರರಾದ ಪವನ್ ಖೇರಾ ಆರೋಪಿಸಿದ್ದಾರೆ.

- Advertisement -


ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಿರುವ ಡಿ.ಕೆ. ಶಿವಕುಮಾರ್ ಹಾಗೂ ಇತರ ನಾಯಕರ ಮೇಲೆ ದಾಳಿ ಮಾಡುವ ಇಡಿ, ಸಿಬಿಐ ಇಲಾಖೆಗಳು ರಫೇಲ್ ಹಗರಣದಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಾಕಷ್ಟು ಪುರಾವೆಗಳಿದ್ದರೂ ಪ್ರಕರಣ ದಾಖಲಿಸುತ್ತಿಲ್ಲ ಯಾಕೆ? ಈ ಸಂಸ್ಥೆಗಳು ಭ್ರಷ್ಟಾಚಾರದ ವಿರುದ್ಧ ಹೋರಾಡುವುದಿಲ್ಲವೇ? ಎಂದು ಪ್ರಶ್ನಿಸಿದರು.


ರಾಷ್ಟ್ರೀಯ ಭದ್ರತೆಗೆ ವಿರುದ್ಧವಾಗಿ ಕೇಂದ್ರ ಸರ್ಕಾರ ರಫೇಲ್ ಒಪ್ಪಂದಕ್ಕೆ ಮುಂದಾಗಿದೆ. ಹೀಗಾಗಿ ಈ ಪ್ರಕರಣದ ವಿಚಾರಣೆಯನ್ನು ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಯಬೇಕಿದೆ ಎಂದು ಕಾಂಗ್ರೆಸ್ ಮತ್ತೊಮ್ಮೆ ಆಗ್ರಹಿಸುತ್ತದೆ ಎಂದು ಹೇಳಿದರು.

- Advertisement -


ಮಧ್ಯವರ್ತಿ ಸುಶೇನ್ ಗುಪ್ತಾ ಅವರು ಯುಪಿಎ ಅವಧಿಯಲ್ಲಿಯೂ ಇದ್ದರೂ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಸುಶೇನ್ ಗುಪ್ತಾ ಅವರನ್ನು ಡಸ್ಸಾಲ್ಟ್ ಸಂಸ್ಥೆ 2000ನೇ ಇಸವಿಯಲ್ಲಿ ನೇಮಕ ಮಾಡಿಕೊಂಡಿತ್ತು. ಆಗ ಯಾರ ಸರ್ಕಾರವಿತ್ತು? ಅಟಲ್ ಬಿಹಾರ್ ವಾಜಪೇಯಿ ಅವರ ಸರ್ಕಾರವಿತ್ತು. 2000ದಿಂದ 2005ರವರೆಗೆ ಸುಶೇನ್ ಗುಪ್ತಾ ಅವರಿಗೆ ಹೆಚ್ಚಿನ ಪ್ರಮಾಣದಲ್ಲಿ ಹಣ ಸಂದಾಯ ಮಾಡಲಾಗಿತ್ತು. ಆದರೆ ನಾವು ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ ಎಂದು ಆರೋಪ ಮಾಡುವುದಿಲ್ಲ. ಕಾರಣ ಆ ಅವಧಿಯಲ್ಲಿ ಸರ್ಕಾರ ಡಸ್ಸಾಲ್ಟ್ ಜತೆ ಯಾವುದೇ ಒಪ್ಪಂದವನ್ನೇ ಮಾಡಿಕೊಂಡಿಲ್ಲ. ಜತೆಗೆ ಅಟಲ್ ಜಿ ಅವರ ಸರ್ಕಾರ ಹಾಗೂ ಸುಶೇನ್ ಗುಪ್ತಾ ಅವರ ನಡುವೆ ಯಾವುದೇ ಹಣಕಾಸಿನ ವ್ಯವಹಾರವೂ ನಡೆದಿಲ್ಲ. ಅದೇ ರೀತಿ ಯುಪಿಎ ಅವಧಿಯಲ್ಲೂ ಯಾವುದೇ ಒಪ್ಪಂದಗಳು ನಡೆದಿಲ್ಲ, ಹಣಕಾಸಿನ ವ್ಯವಹಾರವೂ ನಡೆದಿಲ್ಲ. ಆದರೆ, ಮೋದಿ ಅವರ ಸರ್ಕಾರದಲ್ಲಿ ಒಪ್ಪಂದ ಆಗಿದ್ದು, ಪ್ರತಿ ಹಂತದಲ್ಲೂ ಮೋದಿ ಅವರು ಹಸ್ತಕ್ಷೇಪ ಮಾಡಿ ಡಸ್ಸಾಲ್ಟ್ ಗೆ ನೆರವು ನೀಡಿದ್ದಾರೆ. ಸುಶೇನ್ ಗುಪ್ತಾ ಅವರ ಮನೆಯಲ್ಲಿ ವಶಪಡಿಸಿಕೊಳ್ಳಾದ ದಾಖಲೆಗಳು 2015ರ ದಿನಾಂಕವನ್ನು ಹೊಂದಿದೆ. ಆಗ ಮೋದಿ ಅವರ ಸರ್ಕಾರ ಅಧಿಕಾರದಲ್ಲಿತ್ತು’ ಎಂದು ಉತ್ತರಿಸಿದರು.


ಯುಪಿಎ ಅವಧಿಯಲ್ಲಿ ಯಾವುದೇ ಒಪ್ಪಂದ ನಡೆದಿರಲಿಲ್ಲ. ನಾವು ಆಗ ಟೆಂಡರ್ ಕರೆದಿದ್ದೆವು, ಡಸ್ಸಾಲ್ಟ್ ಎಲ್ 1 ಆಗಿ ಆಯ್ಕೆಯಾಗಿತ್ತು. ನಾವು ಯುದ್ಧವಿಮಾನ ಖರೀದಿ ದರವನ್ನು ಕಡಿಮೆ ಮಾಡುವುದರಲ್ಲಿ ಯಶಸ್ವಿಯಾಗಿದ್ದೆವು. ಯುದ್ಧವಿಮಾನದ ತಂತ್ರಾಂಶ ಹಸ್ತಾಂತರಕ್ಕೆ ಒಪ್ಪಿಸಿದ್ದೆವು. ಭಾರತೀಯ ಸಹಭಾಗಿಯಾಗಿ ಎಚ್ಎಎಲ್ ಅನ್ನು ಆಯ್ಕೆ ಮಾಡಲಾಗಿತ್ತು. ಈ ಎಲ್ಲ ‘ಅಂಶಗಳಿಂದಾಗಿ ಸಾಕಷ್ಟು ಸಮಯಾವಕಾಶ ತೆಗೆದುಕೊಂಡಿತ್ತು. ಆದರೆ ನಂತರದ ದಿನಗಳಲ್ಲಿ ನಾವು ಚುನಾವಣೆಯಲ್ಲಿ ಸೋತೆವು. ಇನ್ನು ಅಗಸ್ಟಾ ವೆಸ್ಟ್ ಲ್ಯಾಂಡ್ ಎಂಬ ಕಂಪನಿ ವಿರುದ್ಧ ಒಂದು ದೂರು ಬಂದ ಹಿನ್ನೆಲೆಯಲ್ಲಿ ಮನಮೋಹನ್ ಸಿಂಗ್ ಅವರು ಆ ಒಪ್ಪಂದ ರದ್ದುಗೊಳಿಸಿದ್ದು ಮಾತ್ರವಲ್ಲ, ಜತೆಗೆ ಆ ದೂರಿನ ಮೇಲೆ ತನಿಖೆಗೂ ಆಗ್ರಹಿಸಿದರು.

ಒಂದು ಕಂಪನಿ ಮಧ್ಯವರ್ತಿಗೆ ಹಣ ಪಾವತಿಸುತ್ತಿದೆ ಎಂದರೆ, ಮಧ್ಯವರ್ತಿಗೆ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡಿದೆ ಎಂದರೆ ಆ ಮಧ್ಯವರ್ತಿಗೆ ಸರ್ಕಾರದಲ್ಲಿರುವವರ ಜತೆ ನಿಕಟ ಸಂಪರ್ಕವಿದೆ ಎಂದರ್ಥ. ಈ ರೀತಿ ಸಂಪರ್ಕ ಇಲ್ಲದಿದ್ದರೆ ಮಾಜಿ ಸಚಿವ ಅರುಣ್ ಜೇಟ್ಲಿ ಅವರ ಇಲಾಖೆಯ ಗೌಪ್ಯ ದಾಖಲೆಗಳು ಮಧ್ಯವರ್ತಿಯ ಮನೆಯಲ್ಲಿ ಸಿಗುತ್ತಿರಲಿಲ್ಲ. ಈ ಪ್ರಕರಣದಲ್ಲಿ ನಾವು ತಪ್ಪು ಮಾಡಿದ್ದೇವೆ ಎಂದಾದರೆ, ನಾವು ತನಿಖೆಗೆ ಆಗ್ರಹಿಸುತ್ತಿರುವಾಗ ಸರ್ಕಾರ ಪಲಾಯನ ಮಾಡುತ್ತಿರುವುದೇಕೆ? ನಾವು ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಆಗ್ರಹಿಸುತ್ತಿದ್ದೇವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಓಡಿ ಹೋಗುತ್ತಿರುವುದೇಕೆ? ನಾವು ತಪ್ಪು ಮಾಡಿದ್ದರೆ ನಾವು ಹೆದರಬೇಕಿತ್ತಲ್ಲವೇ? ನಾವು ಯಾವುದೇ ತನಿಖೆಗೆ ಹೆದರುತ್ತಿಲ್ಲ. ಹಾಗಾದರೆ ಇಲ್ಲಿ ತಪ್ಪಿತಸ್ಥರು ಯಾರು?. ಯಾವುದೇ ಜನಸಾಮಾನ್ಯನ ಕೈಗೆ ಸಿಗಬಾರದಂತಹ ಸೂಕ್ಷ್ಮ ದಾಖಲೆಗಳು ಮಧ್ಯವರ್ತಿಗೆ ಸಿಕ್ಕಿದ್ದಾದರೂ ಹೇಗೆ? ಭಾರತದ ಪರವಾಗಿ ಮಾತುಕತೆಗೆ ನೇಮಕವಾಗಿದ್ದ ತಂಡವು ಪ್ರಧಾನಿಗಳು ಈ ಒಪ್ಪಂದದ ಸಂಧಾನದಲ್ಲಿ ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳಿ ಎಂದು ರಕ್ಷಣಾ ಸಚಿವರಿಗೆ ಪತ್ರ ಬರೆದಿದೆ. ಇದರಿಂದ ಪ್ರಧಾನಮಂತ್ರಿಗಳು ಈ ಒಪ್ಪಂದದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು ಎಂಬುದು ಸಾಬೀತಾಗುತ್ತದೆ.

ಡಸ್ಸಾಲ್ಟ್ ಸಂಸ್ಥೆ ಯುದ್ಧ ವಿಮಾನ ದರವನ್ನು ಹೆಚ್ಚಿಸಲು ಸುಶೇನ್ ಗುಪ್ತಾ ನೆರವಾಗಿದ್ದ ಎಂಬುದು ದಾಖಲೆಗಳ ಮೂಲಕ ಸ್ಪಷ್ಟವಾಗಿದೆ. ಪ್ರಧಾನಿಗಳು ಇದಕ್ಕೆ ನೆರವಾಗಿದ್ದಾರೆ ಎಂಬುದು ಸಾಬೀತಾಗುತ್ತದೆ’ ಎಂದರು.ಸಲ್ಮಾನ್ ಖುರ್ಶಿದ್ ಅವರ ಹೇಳಿಕೆ ವಿಚಾರವಾಗಿ ಕೇಳಿದ ವಿಚಾರವಾಗಿ ಉತ್ತರಿಸಿದ ಅವರು, ‘ಸಲ್ಮಾನ್ ಖುರ್ಶಿದ್ ಅವರು ನಮ್ಮೆಲ್ಲರ ವಾದವನ್ನೇ ಪುನರುಚ್ಛರಿಸಿದ್ದಾರೆ. ಈ ಸರ್ಕಾರದ ಆಡಳಿತದಲ್ಲಿ ಕೇವಲ ದೇಶದ ಸಂವಿಧಾನ ಮಾತ್ರ ಅಪಾಯಕ್ಕೆ ಸಿಲುಕಿಲ್ಲ. ಭವ್ಯ ಹಿಂದೂ ಸಂಸ್ಕೃತಿ, ಭಾರತೀಯ ಪರಂಪರೆ ಕೂಡ ಅಪಾಯಕ್ಕೆ ಸಿಲುಕಿದೆ. ನಮ್ಮ ನಾಗರೀಕತೆಯ ಮೌಲ್ಯಗಳನ್ನು ನಾವು ರಕ್ಷಿಸಿಕೊಳ್ಳಬೇಕಿದೆ’ ಎಂದರು.
ಇನ್ನು ಬಾಟ್ಲ್ ಹೌಸ್ ಎನ್ ಕೌಂಟರ್ ವಿಚಾರವಾಗಿ ಖುರ್ಶಿದ್ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಆ ಹೇಳಿಕೆಯನ್ನು ನಾನು ನೋಡಿಲ್ಲ. ಆಗ ನಾವು ದೆಹಲಿಯಲ್ಲಿ ಅಧಿಕಾರದಲ್ಲಿದ್ದೆವು. ಬಾಟ್ಲಾ ಹೌಸ್ ನಲ್ಲಿ ಏನೆಲ್ಲಾ ನಡೆಯಿತು ಎಂದು ನಾವು ನೋಡಿದ್ದೇವೆ. ಆ ಸಮಯದಲ್ಲಿ ನಾವು ನಮ್ಮ ಅತ್ಯಂತ ಧೈರ್ಯಶಾಲಿ ಪೊಲೀಸ್ ಅಧಿಕಾರಿಯನ್ನು ಕಳೆದುಕೊಂಡೆವು. ನಾವು ಆ ಪೊಲೀಸ್ ಅಧಿಕಾರಿಗಳ ಜತೆ ನಿಂತಿದ್ದೇವೆ’ ಎಂದರು.

ಗಣರಾಜ್ಯೋತ್ಸವದ ಸಮಯದಲ್ಲಿ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತರಿಗೆ ಪಂಜಾಬ್ ಸರ್ಕಾರ ಪರಿಹಾರ ಘೋಷಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಈ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ ಯಾರು ಭಾಗಿಯಾಗಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಅಲ್ಲದೆ ಆ ಪ್ರಕರಣದಲ್ಲಿ ಅಮಾಯಕರನ್ನು ಸಿಲುಕಿಸಲಾಗಿದೆ. ಹೀಗಾಗಿ ಈ ಸರ್ಕಾರದಿಂದ ದಬ್ಬಾಳಿಕೆಗೆ ಒಳಗಾಗಿರುವ ಎಲ್ಲ ಮುಗ್ದ ರೈತರ ಪರವಾಗಿ ಕಾಂಗ್ರೆಸ್ ಪಕ್ಷ ನಿಲ್ಲುತ್ತದೆ. ಕೇವಲ ರೈತರು ಮಾತ್ರವಲ್ಲ, ರೋಹಿತ್ ವೆಮುಲಾರಂತಹ ವಿದ್ಯಾರ್ಥಿಗಳಿಂದ ಹಿಡಿದು ಎಲ್ಲ ವರ್ಗದವರ ಬೆನ್ನಿಗೆ ಕಾಂಗ್ರೆಸ್ ಪಕ್ಷ ನಿಲ್ಲುತ್ತದೆ’ ಎಂದು ಉತ್ತರಿಸಿದರು.
ದೆಹಲಿ ವಾಯು ಮಾಲೀನ್ಯ ನಿಯಂತ್ರಣಕ್ಕೆ ಸುಪ್ರೀಂ ಕೋರ್ಟ್ 2 ದಿನಗಳ ಲಾಕ್ ಡೌನ್ ಸಲಹೆ ನೀಡಿ ದೆಹಲಿ ಹಾಗೂ ಕೇಂದ್ರ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ದೆಹಲಿ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿವೆ.

ಅರವಿಂದ ಕೇಜ್ರಿವಾಲ್ ಅವರು ಪಂಜಾಬ್ ನಲ್ಲಿ ಮತ ಕೇಳುವಾಗ ಪಟಾಕಿ ಸುಡುವ ಬಗ್ಗೆ ಮಾತನಾಡುತ್ತಾರೆ. ದೆಹಲಿಯಲ್ಲಿ ಮತ ಕೇಳುವಾಗ ಪಂಜಾಬ್ ರೈತರು ತಮ್ಮ ಕೃಷಿತ್ಯಾಜ್ಯಗಳಿಗೆ ಹಚ್ಚುವ ಬೆಂಕಿ ಬಗ್ಗೆ ಮಾತನಾಡುತ್ತಾರೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡಿರುವುದು ಸ್ವಾಗತಾರ್ಹ. ಅವರಿಗೆ ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ಇದ್ದರೆ ಅವರು ಬಗೆಹರಿಸಬೇಹುದು. ನಾವು ಅಧಿಕಾರದಲ್ಲಿದ್ದಾಗ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳನ್ನು ತೆರವುಗೊಳಿಸಿ, ಸಿಎನ್ ಜಿ ಜಾರಿಗೊಳಿಸಿದ್ದೆವು. ವಸತಿ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ತೆರವು ಗೊಳಿಸಿದ್ದೆವು. ಆಗ ನಮ್ಮ ಕ್ರಮಕ್ಕೆ ಮಾಲೀನ್ಯ ಸಮಸ್ಯೆ ನಿಯಂತ್ರಣಕ್ಕೆ ಬಂದಿತ್ತು. ಆದರೆ ಕಳೆದ ಆರೇಳು ವರ್ಷಗಳಲ್ಲಿ ಸರ್ಕಾರ ಯಾವುದೇ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ’ ಎಂದರು.

Join Whatsapp