ಹೊಸದಿಲ್ಲಿ : ನ್ಯಾಯಾಂಗವು ನ್ಯಾಯ ಮತ್ತು ಸ್ವಾತಂತ್ರ್ಯದ ರಕ್ಷಕನಾಗಿ ತನ್ನ ಸಾಂವಿಧಾನಿಕ ಪಾತ್ರವನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದು ರಾಷ್ಟ್ರೀಯ ನಾಯಕರ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಮುಸ್ಲಿಂ ಧಾರ್ಮಿಕ ಆಚರಣೆಗಳಿಗೆ ಧಕ್ಕೆ ತರುವ ಮತ್ತು ಮುಸ್ಲಿಂ ಧಾರ್ಮಿಕ ಸ್ಥಳಗಳನ್ನು ವಶಪಡಿಸಿಕೊಳ್ಳುವ ಸಂಘ ಪರಿವಾರದ ಪ್ರಯತ್ನಗಳಿಗೆ ಸಂಪೂರ್ಣ ತಡೆ ನೀಡಲು ಸುಪ್ರೀಂ ಕೋರ್ಟ್ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಪಾಪ್ಯುಲರ್ ಫ್ರಂಟ್ ಒತ್ತಾಯಿಸಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ನಾಯಕರ ಸಭೆ ಕೇರಳದ ಮಲಪ್ಪುರಂನಲ್ಲಿ ನಡೆದಿದ್ದು, ದೇಶದ ಪ್ರಸ್ತುತ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಬಾಬರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಒಂದು ಕಳಂಕವಾಗಿ ಉಳಿದಿದ್ದರೂ, ಬಾಬರಿ ಮಸೀದಿಯ ಮೇಲಿನ ಮುಸ್ಲಿಂ ಹಕ್ಕಿನ ವಿರುದ್ಧ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ದೇಶಾದ್ಯಂತ ಶಾಂತಿ ಮತ್ತು ಸೌಹಾರ್ದತೆಗೆ ಕಾರಣವಾಗಲಿದೆ ಎಂದು ಕೆಲವರು ನಂಬಿದ್ದರು. ಆದಾಗ್ಯೂ, ಶಾಂತಿಯ ಹೆಸರಿನಲ್ಲಿ ನ್ಯಾಯದ ತ್ಯಾಗದಿಂದ ಶಾಂತಿ ಸ್ಥಾಪನೆ ಮಾಡಲು ಸಾಧ್ಯವಾಗಿಲ್ಲ ಎಂಬುದನ್ನು ದೇಶದ ಇತ್ತೀಚಿನ ಬೆಳವಣಿಗೆಗಳು ತೋರಿಸುತ್ತಿವೆ. ಹಲವು ದಶಕಗಳಿಂದ ಕೋಮು ಧ್ರುವೀಕರಣದಲ್ಲಿ ತೊಡಗಿರುವ ಸಂಘ ಪರಿವಾರ, ಮುಸ್ಲಿಂ ವಿರೋಧಿ ಹಿಂಸಾಚಾರ ಮತ್ತು 1992ರ ಬಾಬರಿ ಮಸೀದಿಯ ನಾಶಕ್ಕೆ ಕಾರಣವಾದ ಅವರ ಉದ್ದೇಶ ಮತ್ತು ವಿಧಾನಗಳು ಬದಲಾಗಿಲ್ಲ. ಅವರು ಅಯೋಧ್ಯೆ ಚಳವಳಿಯ ಹಳೆಯ ಮಾದರಿಯನ್ನು ಪುನರಾವರ್ತಿಸಲು ಇತರ ಮುಸ್ಲಿಂ ಪ್ರಾರ್ಥನಾ ಸ್ಥಳಗಳ ವಿರುದ್ಧ ಹೊಸ ಚಳುವಳಿಗಳು ಮತ್ತು ಅಭಿಯಾನಗಳನ್ನು ಪ್ರಾರಂಭಿಸಿದ್ದಾರೆ. ಮಥುರಾದ ಶಾಹಿ ಈದ್ಗಾ ಮತ್ತು ವಾರಣಾಸಿ ಗ್ಯಾಪಿ ವಾಪಿ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿ ಮತ್ತು 1991ರ ಪೂಜಾ ಸ್ಥಳಗಳ ಕಾಯ್ದೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವುದು ಆರ್ ಎಸ್ ಎಸ್ ಕಾರ್ಯತಂತ್ರದ ಮುಂದುವರಿದ ಭಾಗವಾಗಿದೆ.
ಇಂತಹ ದಾವೆಗಳ ಹಿಂದಿರುವ ಹಿಂಸಾತ್ಮಕ ವಿಭಜಕ ಕಾರ್ಯಸೂಚಿಯನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕುಗಳ ಮೇಲಿನ ಆಕ್ರಮಣಗಳಿಗೆ ಮತ್ತಷ್ಟು ಅವಕಾಶ ಕಲ್ಪಿಸದಂತೆ ಸುಪ್ರೀಂಕೋರ್ಟ್ ದೃಢ ನಿಲುವನ್ನು ತೆಗೆದುಕೊಳ್ಳಬೇಕೆಂದು ಪಾಪ್ಯುಲರ್ ಫ್ರಂಟ್ ನ್ಯಾಯಾಂಗವನ್ನು ಒತ್ತಾಯಿಸಿದೆ.
ಸಂಘಟನೆಯ ರಾಷ್ಟ್ರೀಯ ನಾಯಕರ ಸಭೆ ಅಂಗೀಕರಿಸಿದ ಮತ್ತೊಂದು ನಿರ್ಣಯದಲ್ಲಿ, ವಿಧಾನಸಭಾ ಚುನಾವಣೆ ನಡೆಯುತ್ತಿರುವ ರಾಜ್ಯಗಳ ಜನರು, ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳನ್ನು ಸೋಲಿಸುವಂತೆ ಪಾಪ್ಯುಲರ್ ಫ್ರಂಟ್ ಕರೆ ನೀಡಿದೆ. ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ, ಮತ್ತು ಪುದುಚೇರಿ ಜನರು ಮುಂದಿನ ವಾರಗಳಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. ಒಂದೆಡೆ, ಬೆಲೆ ಏರಿಕೆ, ನಿರುದ್ಯೋಗ, ಬಡತನದಿಂದ ಹೆಚ್ಚಿನ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮತ್ತೊಂದೆಡೆ, ಇದರ ವಿರುದ್ಧ ಧ್ವನಿ ಎತ್ತದಂತೆ ಆರ್ ಎಸ್ ಎಸ್ ನಿಯಂತ್ರಿತ ಬಿಜೆಪಿ ಸರ್ಕಾರವು ಕ್ರೂರ ಕಾನೂನುಗಳು ಮತ್ತು ಕ್ರಮಗಳನ್ನು ಹೇರುವ ಮೂಲಕ ಜನರ ಪ್ರಜಾಪ್ರಭುತ್ವದ ಹಕ್ಕುಗಳನ್ನು ದಮನ ಮಾಡುತ್ತಿದೆ. ಜನರ ಪ್ರಜಾಪ್ರಭುತ್ವ ಮಾದರಿಯ ಮತ್ತು ಶಾಂತಿಯುತ ಚಳವಳಿಗಳನ್ನು ಬಲ ಪ್ರಯೋಗಿಸಿ ಹತ್ತಿಕ್ಕಲಾಗುತ್ತಿದೆ. ಕೇಂದ್ರ ಸರ್ಕಾರದ ನೀತಿಗಳನ್ನು ಬಹಿರಂಗವಾಗಿ ವಿರೋಧಿಸಿದ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಅಪರಾಧ ತನಿಖಾ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯದಂತಹ ಸಂಸ್ಥೆಗಳು ಗುರಿಯಾಗಿಸುತ್ತಿವೆ. ಮೋದಿ ಸರ್ಕಾರ ಆರು ವರ್ಷಗಳ ಅಧಿಕಾರಾವಧಿಯಲ್ಲಿ, ಕಳೆದ 7 ದಶಕಗಳಲ್ಲಿ ಭಾರತ ನಿರ್ಮಿಸಿದ್ದನ್ನು ನಾಶಮಾಡುವಲ್ಲಿ ಯಶಸ್ವಿಯಾಗಿದೆ. ಇದು ಈಗ ಜಾಗತಿಕವಾಗಿ ಒಪ್ಪಿಕೊಂಡ ವಾಸ್ತವವಾಗಿದೆ.
ಎರಡು ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಗಳು ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ಭಾರತದ ವರ್ಚಸ್ಸನ್ನು ಅತ್ಯಂತ ಕೆಳಮಟ್ಟಕ್ಕೆ ಇಳಿಸಿರುವ ಅಂಶವು ಜನರ ಕಣ್ಣು ತೆರೆಯುವಂತಿದೆ. ಅಮೆರಿಕದ ಸಂಶೋಧನಾ ಸಂಸ್ಥೆಯಾದ ಫ್ರೀಡಂ ಹೌಸ್ ಭಾರತವನ್ನು “ಭಾಗಶಃ ಸ್ವಾತಂತ್ರ್ಯ”ದ ದೇಶಗಳ ಪಟ್ಟಿಗೆ ಸೇರಿಸಿದ್ದರೆ, ಸ್ವಿಸ್ ಮೂಲದ ವಿ-ಡೆಮ್ ಸಂಸ್ಥೆಯು ತನ್ನ ವರದಿಯಲ್ಲಿ ಭಾರತವನ್ನು “ಚುನಾವಣಾ ನಿರಂಕುಶಾಧಿಕಾರಿ” ದೇಶಗಳ ಪಟ್ಟಿಗೆ ಸೇರಿಸಿದೆ.
ಭಾಗವತ್-ಮೋದಿ-ಶಾ ಸರ್ಕಾರಕ್ಕೆ ತಮ್ಮ ಜನ ವಿರೋಧಿ, ಬಡವರ ವಿರೋಧಿ ಮತ್ತು ವಿಭಜಕ ನೀತಿಗಳ ವಿರುದ್ಧ ಸ್ಪಷ್ಟ ಎಚ್ಚರಿಕೆ ನೀಡುವ ಸಲುವಾಗಿ ಈ ರಾಜ್ಯಗಳ ಜನರು ಬಿಜೆಪಿಗೆ ಸೋಲಿನ ರುಚಿ ತೋರಿಸಲು ತಮ್ಮ ಮತಗಳನ್ನು ಬಳಸಿಕೊಳ್ಳಬೇಕೆಂದು ಈ ಸಭೆಯು ಕರೆ ನೀಡಿದೆ. ನಮ್ಮ ಜಾತ್ಯತೀತ, ಪ್ರಜಾಪ್ರಭುತ್ವ ಗಣರಾಜ್ಯ, ಆರ್ ಎಸ್ಎಸ್ ನ ಸಿದ್ಧಾಂತ ಮತ್ತು ಕಾರ್ಯಸೂಚಿಯಡಿ ಕತ್ತು ಹಿಸುಕಲ್ಪಟ್ಟು, ಅಂತಿಮ ಉಸಿರು ಬಿಡಲು ಹೆಣಗಾಡುತ್ತಿರುವುದನ್ನು ಎಲ್ಲಾ ಸಂಬಂಧಪಟ್ಟ ನಾಗರಿಕರು ಮತ್ತು ಗುಂಪುಗಳು, ಸಂಸ್ಥೆಗಳು, ಸಂಘಟನೆಗಳು ಮತ್ತು ಪಕ್ಷಗಳಿಗೆ ಪಾಪ್ಯುಲರ್ ಫ್ರಂಟ್ ನಾಯಕರ ಸಭೆ ನೆನಪಿಸಿದೆ. ಆರ್ ಎಸ್ ಎಸ್ ಸೂಚನೆಯ ಮೇರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದರಿಂದ ಭಾರತ, ಮುಂದಿನ ದಿನಗಳಲ್ಲಿ ಸಂಪೂರ್ಣ ಅರಾಜಕತೆ ಮತ್ತು ಕೋಲಾಹಲದ ಪರಿಸ್ಥಿತಿಗೆ ಹೋಗಲಿದೆ ಎಂದು ಪಾಪ್ಯುಲರ್ ಫ್ರಂಟ್ ಎಚ್ಚರಿಸಿದೆ.
ಸರ್ಕಾರದ ಬೆಂಬಲದೊಂದಿಗೆ ಹಿಂದುತ್ವ ಪಡೆಗಳು ಉದ್ದೇಶಪೂರ್ವಕವಾಗಿ ಸೃಷ್ಟಿಸುವ ದ್ವೇಷ, ಅನುಮಾನ, ವಿಭಜನೆ, ಅಭದ್ರತೆ ಮತ್ತು ಹಿಂಸಾಚಾರದಿಂದ, ಕೇವಲ ಧಾರ್ಮಿಕ ಅಲ್ಪಸಂಖ್ಯಾತರು ಮಾತ್ರ ಆಘಾತಕ್ಕೆ ಒಳಗಾಗುವುದಿಲ್ಲ. ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಇತರ “ಆಂತರಿಕ ಶತ್ರುಗಳು” ಎಂದು ಘೋಷಿಸಲ್ಪಟ್ಟವರ ಮೇಲಿನ ಧಾರ್ಮಿಕ ಫ್ಯಾಶಿಸಂನ ಯುದ್ಧವು, ಅಂತಿಮವಾಗಿ ದಾರಿತಪ್ಪಿದ, ಪ್ರಚೋದಿಸಲ್ಪಟ್ಟ ಬಹುಸಂಖ್ಯಾತರ ಜೀವವನ್ನು ಕೂಡ ಉಳಿಸುವುದಿಲ್ಲ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ.
ಈ ನಿರ್ಣಾಯಕ ಮತ್ತು ಐತಿಹಾಸಿಕ ಸನ್ನಿವೇಶದಲ್ಲಿ, ವಿನಾಶಕಾರಿ ಆರ್ ಎಸ್ ಎಸ್ ಪ್ರಭಾವದಿಂದ ಭಾರತ ಮತ್ತು ಅದರ ಜನರನ್ನು ರಕ್ಷಿಸಲು ವಿವಿಧ ಹಿಂದೂ ಧಾರ್ಮಿಕ ವಿಭಾಗಗಳು, ಸಮುದಾಯಗಳು, ಸ್ವಾಮೀಜಿಗಳು ಮತ್ತು ಮುಖಂಡರು ಒಗ್ಗಟ್ಟಾಗಬೇಕು ಎಂದು ಪಾಪ್ಯುಲರ್ ಫ್ರಂಟ್ ನ ರಾಷ್ಟ್ರೀಯ ನಾಯಕರ ಸಭೆ ಮನವಿ ಮಾಡಿದೆ.
ಅಧ್ಯಕ್ಷ ಒಎಂಎ ಸಲಾಂ ಅವರ ಅಧ್ಯಕ್ಷೀಯ ಭಾಷಣದೊಂದಿಗೆ ಎರಡು ದಿನಗಳ ಸಭೆಗೆ ಚಾಲನೆ ದೊರೆಯಿತು. ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ವರದಿ ಮಂಡಿಸಿದ್ದು, ದೇಶಾದ್ಯಂತ ಕೊರೊನಾ ಸಾಂಕ್ರಾಮಿಕ ನಿರ್ಬಂಧಗಳು ಮತ್ತು ಸಾಮಾನ್ಯ ಚಟುವಟಿಕೆಗಳಿಗೆ ಅಡ್ಡಿಪಡಿಸುವ ಸರ್ಕಾರದ ದಮನಕಾರಿ ಕ್ರಮಗಳ ಹೊರತಾಗಿಯೂ ಸಂಘಟನೆಯು ಅಭೂತಪೂರ್ವ ಬೆಳವಣಿಗೆಯ ದರವನ್ನು ದಾಖಲಿಸಿದೆ ಎಂದು ತಿಳಿಸಿದರು.
ಕೋವಿಡ್ ಪರಿಹಾರ ಚಟುವಟಿಕೆಗಳಲ್ಲಿ, ವಿಶೇಷವಾಗಿ ಕೋವಿಡ್ ನಿಂದ ಸಾವನ್ನಪ್ಪಿದ ನೂರಾರು ಮಂದಿಯ ಅಂತ್ಯಸಂಸ್ಕಾರವನ್ನು ಅತ್ಯಂತ ಗೌರವಯುತವಾಗಿ ನಡೆಸಿದ, ವಿವಿಧ ರಾಜ್ಯಗಳ ಸದಸ್ಯರು ಮತ್ತು ಯೂನಿಟ್ ಸದಸ್ಯರ ಕಾರ್ಯವನ್ನು ನಾಯಕರ ಸಭೆ ಮುಕ್ತ ಕಂಠದಿಂದ ಶ್ಲಾಘಿಸಿದೆ. ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ವಿವಿಧ ಪ್ರದೇಶಗಳ ಇತರ ನಾಯಕರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.