PFI ಮೇಲೆ ರಾಜ್ಯ ಪೊಲೀಸರ ದಾಳಿಯ ಸತ್ಯಾಂಶ ಜನರ ಮುಂದಿಡಲಿ: ಹೆಚ್.ಡಿ. ಕುಮಾರಸ್ವಾಮಿ ಆಗ್ರಹ

Prasthutha|

ಸರಕಾರ ಸತ್ಯ ಹೇಳದಿದ್ದರೆ, ಹಗರಣಗಳಿಂದ ಜನರ ದಿಕ್ಕು ತಪ್ಪಿಸಲು ಈ ದಾಳಿ ನಡೆದಿದೆ ಎಂದು ಭಾವಿಸಬೇಕಾಗುತ್ತದೆ ಎಂದ ಮಾಜಿ ಸಿಎಂ

- Advertisement -

ಬೆಂಗಳೂರು: ಪಿಎಫ್ಐ ಸಂಘಟನೆ ಮೇಲೆ ರಾಜ್ಯ ಪೊಲೀಸರು ದಾಳಿ ನಡೆಸಿ ಆ ಸಂಘಟನೆಯ ಹಲವರನ್ನು ಬಂಧಿಸಿದ್ದು, ಆ ಬಗ್ಗೆ ರಾಜ್ಯದ ಜನತೆಯ ಮುಂದೆ ವಾಸ್ತವಾಂಶ ಇಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ಈ ಬಗ್ಗೆ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದರು ಅವರು, ರಾಜ್ಯ ಸರಕಾರದ ಮೇಲೆ ಅನೇಕ ಆರೋಪಗಳಿವೆ. ನಾನು ಸ್ವತಃ ಬಿಎಂಎಸ್ ಶಿಕ್ಷಣ ಟ್ರಸ್ಟ್ ನಲ್ಲಿ ನಡೆದಿರುವ ಅಕ್ರಮ ಬಗ್ಗೆ ಸದನದಲ್ಲಿಯೇ ದಾಖಲೆಗಳ ಸಮೇತ ಮಾಹಿತಿ ನೀಡಿದ್ದೆ. ಇದಲ್ಲದೆ ಅನೇಕ ಹಗರಣ, ಅಕ್ರಮಗಳ ಬಗ್ಗೆ ಜನರು ರೋಸಿ ಹೋಗಿದ್ದಾರೆ. ಒಂದು ವೇಳೆ ಪಿಎಫ್ಐ ಮೇಲೆ ನಡೆದಿರುವ ದಾಳಿ ಕುರಿತು ನೈಜ ಮಾಹಿತಿ ಕೊಡದಿದ್ದರೆ ಆರೋಪ ಮತ್ತು ಹಗರಣಗಳ ಕುರಿತು ಜನರ ಗಮನ ಬೇರೆಡೆಗೆ ಸೆಳೆಯಲು ಈ ದಾಳಿ ನಡೆಸಲಾಗಿದೆ ಎಂದು ಭಾವಿಸಬೇಕಾಗುತ್ತದೆ ಎಂದು ಕುಟುಕಿದರು.

- Advertisement -

ಎರಡು ದಿನಗಳಿಂದ ಕರ್ನಾಟಕವೂ ಸೇರಿ ರಾಷ್ಟ್ರಮಟ್ಟದಲ್ಲಿ ಪಿಎಫ್ಐ ಮೇಲೆ NIA ನಿಂದ ದಾಳಿ ಆಗಿತ್ತು. ಆ ದಾಳಿ ಸಮಯದಲ್ಲಿ ಪಿಎಫ್ಐ ಸಂಘಟನೆಗಳ ವ್ಯಕ್ತಿಗಳ ಬಂಧನವೂ ಆಗಿತ್ತು. ಮತ್ತೆ ಕಳೆದ ರಾತ್ರಿ ರಾಜ್ಯದ ನಾನಾ ಭಾಗದಲ್ಲಿ ಮಧ್ಯರಾತ್ರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.

ರಾಜ್ಯ ಪೊಲೀಸರು ನಡೆಸಿದ ದಾಳಿಯಲ್ಲಿ ಸಂಘಟನೆಯ ಕಾರ್ಯಕರ್ತರು, ಜಿಲ್ಲಾ ಅಧ್ಯಕ್ಷರ‌ ಬಂಧನವಾಗಿದೆ. ಮಧ್ಯರಾತ್ರಿಯಲ್ಲಿ ಕಾರ್ಯಾಚರಣೆ ಎನ್ನುವುದು ಸರಕಾರದ ಆದೇಶವೋ ಅಥವಾ ಪೊಲೀಸರ ಮಾಹಿತಿ ಆಧಾರದ ದಾಳಿಯ ಆಗಿದೆಯೋ ಗೊತ್ತಿಲ್ಲ. ಆದರೆ ಕಾರ್ಯಾಚರಣೆ ಬಗ್ಗೆ ನಾಡಿನ ಜನರ ಮುಂದೆ ನಿಜವಾದ ವಾಸ್ತವವಾದ ಅಂಶವನ್ನು ಸರಕಾರ ಇಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಏಕಾಏಕಿ ಈ ಬೆಳವಣಿಗೆಯಿಂದ ರಾಜ್ಯದಲ್ಲಿ ಯಾವುದೇ ಸಮಾಜದ ಮೇಲೆ ಅತಂಕ, ಭಯ ಸೃಷ್ಟಿ ಆಗಬಾರದು. ಇತ್ತೀಚೆಗೆ ಅನೇಕ ಸಂಘಟನೆಗಳು ತಮ್ಮ ಅಜೆಂಡಾ ಪೂರೈಸಲು ಕೆಲಸ ಮಾಡುತ್ತಿವೆ. ಅವುಗಳಿಗೆ ಅರ್ಥಿಕ ಶಕ್ತಿ ಹೇಗೆ ಬರ್ತಿದೆ? ಕೆಲ ಘಟನೆಗಳ ಹಿಂದೆ ಯಾವ ಸಂಘಟನೆಗಳಿವೆ ಎನ್ನುವುದನ್ನು ತನಿಖೆಯಿಂದ ಹೊರಬರಬೇಕು ಎಂದು ಕುಮಾರಸ್ವಾಮಿ ನುಡಿದರು.

ಕಳೆದ ರಾತ್ರಿ ಏಕಾಏಕಿ ದಾಳಿ ಆಗಿರೋದು‌ ಸಣ್ಣ ಪುಟ್ಟ ಕಾರ್ಯಕರ್ತರಿಗೆ ಆತಂಕ ಉಂಟು ಮಾಡಿದೆ ಎನ್ನುವುದು ನಿಜ. ಈ ದಾಳಿಯ ವೇಳೆ ಏನು ಸಿಕ್ಕಿದೆ. ಯಾವ ದಾಖಲೆ ಇದೆ ಎಂಬುದನ್ನು ಜನರ ಮುಂದೆ ಇಡಬೇಕು. ದಾಳಿಯ ಬಗ್ಗೆ ಸತ್ಯ ಹೇಳದೇ ಹೋದರೆ ಕಾಂಗ್ರೆಸ್ ನ ಪೇ‌ ಸಿಎಂ ಅಭಿಯಾನ ಡೈವರ್ಟ್ ಮಾಡೋಕೆ ಸರಕಾರ ಹೀಗೆ ಮಾಡಿದೆ ಎಂಬ ಅನುಮಾನ ಜನರಿಗೆ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿಗಳು ಸ್ಪಷ್ಟವಾಗಿ ತಿಳಿಸಿದ್ದಾರೆ.

ನಿಜವಾಗಿಯೂ ಸಮಾಜಘಾತುಕ ಶಕ್ತಿ ಬಗ್ಗೆ ಮಾಹಿತಿ ಇದ್ದರೆ ಜನರ ಮುಂದೆ ಇಡಬೇಕು. ನೆಪಗಳನ್ನು ಹೇಳಿ ಸರಕಾರ ನುಣುಚಿಕೊಳ್ಳಬಾರದು. ವಾಸ್ತವ ಅಂಶಗಳನ್ನು ಜನರ ಮುಂದೆ ಸರಕಾರ ಇಡಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.

ಮಧ್ಯರಾತ್ರಿ ಕಾರ್ಯಾಚರಣೆಯಲ್ಲಿ ಯಾರು ಯಾರನ್ನು ಬಂಧನ ಮಾಡಿದ್ದಾರೆ. ಅವರ ಸಮಾಜಘಾತುಕ ಕೆಲಸ ಏನು? ಎಂಬುದನ್ನು ಅಂತ ಸರಕಾರ ಜನರ ಮುಂದೆ ಇಡದೇ ಹೋದರೆ ಸರಕಾರವೇ ಅನುಮಾನಗಳಿಗೆ ಎಡೆ ಮಾಡಿಕೊಟ್ಟಂತೆ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿಗಳು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರಾದ ಹೆಚ್.ಎಂ.ರಮೇಶ್ ಗೌಡ, ಶಾರದಾ ಪೂರ್ಯ ನಾಯಕ್, ತಿಮ್ಮರಾಯಪ್ಪ ಹಾಗೂ ಹಿರಿಯ ಮುಖಂಡ ಹರಿಹರದ ಶಿವಶಂಕರ್ ಮುಂತಾದವರು ಉಪಸ್ಥಿತರಿದ್ದರು.

Join Whatsapp