ಮೀಸಲಾತಿ ಬದಲಾವಣೆ ಹಿಂದೆ ಮುಸ್ಲಿಮರು ಗಲಾಟೆಗೆ ಮುಂದಾಗಲಿ, ಆ ಮೂಲಕ ತನ್ನ ಬೇಳೆ ಬೇಯಿಸಿಕೊಳ್ಳುವುದು ಸರಕಾರದ ದುರುದ್ದೇಶವಾಗಿತ್ತು: ಕುಮಾರಸ್ವಾಮಿ

Prasthutha|

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದರೆ, ಸರಕಾರಿ ನೇಮಕಾತಿ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸುತ್ತೇವೆ ಹಾಗೂ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆ ಪಿ ಎಸ್ ಸಿ) ಸರಿಯಾದ ಚಿಕಿತ್ಸೆ ನೀಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

- Advertisement -


ಇಂದು ಬೆಳಗ್ಗೆ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಮೀಸಲಾತಿ ಎಂದು ಬಿಜೆಪಿ ಸರಕಾರ ಜನರನ್ನು ಯಾಮಾರಿಸುತ್ತಿದೆ. ಆದರೆ, ಸರಕಾರಿ ಹುದ್ದೆಗಳನ್ನು ಲಕ್ಷ, ಕೋಟಿ ಲೆಕ್ಕದಲ್ಲಿ ಮಾರಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದರೆ, ಈ ನೇಮಕಾತಿ ವ್ಯವಸ್ಥೆಯನ್ನು ಸರಿ ಮಾಡುತ್ತೇನೆ. ನೇಮಕಾತಿ ಮಾಡುವ ಸಂಸ್ಥೆಗಳಿಗೆ ತಕ್ಕ ಶಾಸ್ತಿ ಮಾಡಿ ವ್ಯವಸ್ಥೆಯನ್ನು ಸುಧಾರಿಸುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಾಟ ನಡೆದ ಘಟನೆಯನ್ನು ಗಮನಿಸಿದ್ದೇನೆ. ರಾಜ್ಯ ಸರಕಾರ ಲಘುವಾಗಿ ಪರಿಗಣಿಸದೆ ಗಂಭೀರವಾಗಿ ಪರಿಶೀಲನೆ ಮಾಡಿಕೊಳ್ಳಬೇಕು. ಹಾಗೆ ನೋಡಿದರೆ ಇದಕ್ಕೆ ಸರಕಾರವೇ ಕಾರಣ ಎಂದರು.


ಮೀಸಲು ವಿಷಯದಲ್ಲಿ ಜೆಡಿಎಸ್ ನಿಲುವು ಸಂವಿಧಾನದ ಪರ. ಸಂವಿಧಾನದಲ್ಲಿರುವ ಮಾರ್ಗಸೂಚಿಯಂತೆ ಮೀಸಲಾತಿ ಇರಬೇಕು. ಸಮಾಜ ಹಾಳು ಮಾಡುವ, ಜಾತಿಗಳ ಮಧ್ಯೆ ತಂದಿಡುವ ಕೆಲಸ ಆಗಬಾರದು. ಹತ್ತು ಜಿಲ್ಲೆಯಲ್ಲಿ ಬಡತನ ರೇಖೆಗಿಂತಲೂ ಕೆಳಗಿರುವವರು ಇದ್ದಾರೆ. ಹೀಗಿದ್ದರೂ ಯಾವುದೇ ಮುಂದಾಲೋಚನೆ ಇಲ್ಲದೆ, ಬೇಜವಾಬ್ದಾರಿಯಿಂದ ಆದೇಶ ಹೊರಡಿಸಿದ್ದು ಯಾಕೆ? ಕೇವಲ ಮತಕ್ಕಾಗಿ, ಚುನಾವಣೆಗಾಗಿ ಹೀಗೆ ಮಾಡಿದೆ ಬಿಜೆಪಿ ಸರಕಾರ ಎಂದು ಅವರು ಕಿಡಿಕಾರಿದರು.
ಸಮಾಜವನ್ನು ಒಡೆಯಬೇಕು ಎನ್ನುವುದು ದುರುದ್ದೇಶದಿಂದಲೇ ಬಿಜೆಪಿ ಸರಕಾರ ಮೀಸಲು ನಾಟಕ ಅಡಿದೆ. ಮುಸ್ಲಿಮರು ಗಲಾಟೆಗೆ ಮುಂದಾಗಲಿ, ಆ ಮೂಲಕ ತನ್ನ ಬೇಳೆ ಬೇಯಿಸಿಕೊಳ್ಳುವ ಈ ಸರಕಾರದ ದುರುದ್ದೇಶವಾಗಿತ್ತು. ಒಂದು ವೇಳೆ ಮುಸ್ಲಿಮರು ಬೀದಿಗಿಳಿದಿದ್ದರೆ ಪರಿಸ್ಥಿತಿ ಏನಾಗಿರುತ್ತಿತ್ತು? ಅಮಾಯಕ ಜನ ಬಲಿಯಾಗಿದ್ದರೆ ಯಾರು ಹೊಣೆ ಆಗುತ್ತಿದ್ದರು? ರಕ್ತಪಾತ ಮಾಡಲು ಬಿಜೆಪಿಯವರು ಕುತಂತ್ರ ಹೂಡಿದ್ದಾರೆ. ಸಂಘರ್ಷ ಆಗಬೇಕು ಅಷ್ಟೆ ಅವರಿಗೆ. ಆದರೆ, ಮುಸ್ಲಿಮರು ತಾಳ್ಮೆ ಇರಲಿ. ಹುಡುಗಾಟಿಕೆಯಿಂದ ಮಾಡಿರುವ ಈ ಮೀಸಲಾತಿಗೆ ಬೆಂಬಲ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಅವರು ಹೇಳಿದರು.

- Advertisement -

ಬಿಜೆಪಿ ಸರಕಾರವು ಸರಕಾರಿ ನೌಕರಿಯನ್ನು ಯಾವ ರೀತಿ ಕೊಡ್ತಾ ಇದೆ ಎನ್ನುವುದು ಜಗಜ್ಜಾಹೀರು. ಹಣ ಪಡೆದು ನೌಕರಿ ಕೊಡ್ತಾ ಇದ್ದಾರೆ. ಮೀಸಲಾತಿ ಮೇಲೆ ನೌಕರಿ ಕೊಡ್ತಾ ಇಲ್ಲ. ಹಾಗಾದರೆ, ಮೀಸಲಾತಿ ತಗೊಂಡು ಏನ್ ಮಾಡೋದು ? ಹಣ ಕೊಟ್ಟವರಿಗೆ ಸರಕಾರಿ ನೌಕರಿ ಮಾರಾಟ ಆಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಬಾರಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಇಂಥ ಅವೈಜ್ಞಾನಿಕ, ತಾರತಮ್ಯದ ಮೀಸಲಾತಿ ವ್ಯವಸ್ಥೆಯನ್ನು ತೆಗೆದು ಹಾಕುತ್ತೇವೆ. ಅಷ್ಟೆ ಅಲ್ಲ, ಈ ಹಣ ಫಿಕ್ಸ್ ಮಾಡಿ ನೌಕರಿ ಕೊಡ್ತೀರಲ್ಲಾ, ಅದನ್ನು ನಿರ್ನಾಮ ಮಾಡುತ್ತೇವೆ. ಈ ವ್ಯವಸ್ಥೆಯಲ್ಲಿ ಸ್ವಚ್ಚ ಮಾಡಬೇಕು ಅಂದರೆ ಮಾಡಬೇಕು ಕೆಪಿಎಸ್ ಸಿ ಯನ್ನು ಸ್ವಚ್ಚ ಮಾಡಬೇಕು. ಅದನ್ನು ನಾವು ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.


ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಬಂಧನ ವಿಚಾರಕ್ಕೆ ಸಂಬಂಧಿಸಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಯಾವಾಗಲೋ ಅವರ ಬಂಧನ ಆಗಬೇಕಿತ್ತು. ಸತ್ಯಾಂಶ ಏನಿದೆ ನೋಡಬೇಕಲ್ಲವೇ? ತಾವು ಅಡಿಕೆ ಬೆಳೆಗಾರ ಅಂತ ಹೇಳ್ತಾ ಇದ್ದಾರೆ. ಪ್ರತಿ ವರ್ಷ ನೂರಾರು ಕೋಟಿ ವ್ಯವಹಾರ ಮಾಡ್ತೀವಿ ಅಂತಾರೆ. ಅಷ್ಟು ವ್ಯವಹಾರ ಮಾಡಿದರೂ ಅಷ್ಟು ದೊಡ್ಡ ಮೊತ್ತದ ನಗದು ಇಟ್ಟುಕೊಳ್ಳುವ ಹಾಗಿಲ್ಲವಲ್ಲ. ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯ ಈ ಬಗ್ಗೆ ಗಮನ ಕೊಡಬೇಕಲ್ವೇ? ಇನ್ನೇನು ನಾಟಕ ನಡೆಯುತ್ತೆ ನೋಡೋಣ ಎಂದು ಮರ್ಮಿಕವಾಗಿ ಹೇಳಿದರು ಮಾಜಿ ಮುಖ್ಯಮಂತ್ರಿಗಳು.
80 ಕ್ಷೇತ್ರ ದಾಟಲ್ಲ:
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಕೇವಲ ಅಬ್ಬರ ಮಾಡುತ್ತಿವೆ ಅಷ್ಟೇ, ಆದರೆ ಈ ಎರಡೂ ಪಕ್ಷಗಳು 80 ಕ್ಷೇತ್ರ ದಾಟಲ್ಲ. ಈ ಬಗ್ಗೆ ಅಧಿಕಾರಿಗಳೇ ಚರ್ಚೆ ಮಾಡ್ತಾ ಇದ್ದಾರೆ. ಪಕ್ಷಗಳು ಒಳಗೆ ನಡೆಯುತ್ತಿರುವುದು ಬೇರೆ, ಹೊರಗೆ ನಡೆಯುತ್ತಿರುವುದು ಬೇರೆ ಎಂದು ಹೇಳಿದರು ಕುಮಾರಸ್ವಾಮಿ ಅವರು.
ಈ ಸಂದರ್ಭದಲ್ಲಿ ಯಶವಂತಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜವರಾಯಿ ಗೌಡ ಮುಂತಾದವರು ಉಪಸ್ಥಿತರಿದ್ದರು.

Join Whatsapp