ಕನ್ನಡ ಅನ್ನದ ಭಾಷೆಯಾಗಲಿ

Prasthutha: November 4, 2021
📏ಮೀಟುಗೋಲು

ಮತ್ತೊಮ್ಮೆ ಕನ್ನಡಿಗರು ಸಂಭ್ರಮಿಸುವ ನವೆಂಬರ್ ತಿಂಗಳು ಅಂದರೆ ಕನ್ನಡ ರಾಜ್ಯೋತ್ಸವದ ತಿಂಗಳ ಆಗಮನವಾಗಿದೆ. ಕನ್ನಡ ನಾಡು, ನುಡಿ, ಸಂಸ್ಕೃತಿ, ಕುರಿತಂತೆ ಈ ತಿಂಗಳಲ್ಲಿ ಹೆಚ್ಚಿನ ಚರ್ಚೆ, ಕಾರ್ಯಕ್ರಮ ನಡೆಯಬೇಕು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಆಚರಣೆ ಕೇವಲ ಸಾಂಪ್ರದಾಯಿಕ ಕಾರ್ಯಕ್ರಮಕ್ಕೆ ಸೀಮಿತವಾಗಿ ಒಂದು ದಿನದ ಕನ್ನಡ ಸಂಭ್ರಮವಾಗಿ ಮುಗಿಯುತ್ತದೆ. ಇತ್ತೀಚೆಗೆ ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ ವಿಷಯಗಳಲ್ಲಿ ಹೆಚ್ಚಿನ ನಿರ್ಲಕ್ಷ್ಯ ಕಂಡುಬರುತ್ತಿದೆ. ಇದಕ್ಕೆ ಸ್ವತಃ ಕನ್ನಡಿಗರೇ ಕಾರಣ ಮತ್ತು ಅವರು ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು ಕೂಡ ಕಾರಣ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾ ಪ್ರಾದೇಶಿಕ ಭಾಷೆಗಳಿಗೂ ಸಮಾನ ಸ್ಥಾನಮಾನವಿದ್ದರೂ ಹಿಂದಿ ಭಾಷೆಯನ್ನು ಮಾತ್ರ ಕೊಂಡಾಡುವ ಕೇಂದ್ರದ ಬಿಜೆಪಿ ಸರಕಾರದ ಹುನ್ನಾರವನ್ನು ಅರ್ಥ ಮಾಡಿಕೊಳ್ಳಲು ಹೆಚ್ಚಿನ ಜ್ಞಾನ ಅಗತ್ಯವಿಲ್ಲ. ಎಲ್ಲಾ ಅಧಿಕಾರಗಳನ್ನು ಕೇಂದ್ರೀಕರಿಸುವ ಗುರಿಯನ್ನು ಹೊಂದಿರುವ ಬಿಜೆಪಿ, ಈ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಗುರಿ ಹೊಂದಿದೆ. ಇಂತಹ ಹುನ್ನಾರ, ಷಡ್ಯಂತರಗಳನ್ನು ಈ ಹಿಂದೆಯೇ ತಮಿಳು, ಮಲಯಾಳಂ ಭಾಷೆಗಳು ಅರಿತು ಅವುಗಳ ವಿರುದ್ಧ ಸೆಟೆದು ನಿಂತು ತನ್ನ ತನವನ್ನು ಕಾಪಾಡಿಕೊಂಡು ಬಂದಿವೆ. ಈ ಎರಡೂ ಭಾಷೆಗಳ ತವರೂರಾದ ತಮಿಳುನಾಡು ಮತ್ತು ಕೇರಳದಲ್ಲಿ ತಳಮಟ್ಟದಲ್ಲಿ ರೂಪುಗೊಂಡ ಚಳವಳಿಯ ಪರಿಣಾಮವಾಗಿ ಅಲ್ಲಿನ ಜನಪ್ರತಿನಿಧಿಗಳು ಕೂಡ ಅನಿವಾರ್ಯವಾಗಿ ಈ ಹೋರಾಟಕ್ಕೆ ಬೆಂಬಲ ನೀಡಬೇಕಾಯಿತು. ಆದರೆ ಕರ್ನಾಟಕದಲ್ಲಿ ಈ ಕೆಲಸ ಸಮರ್ಪಕವಾಗಿ ನಡೆದಿಲ್ಲ. ಕೆಲವು ಕನ್ನಡ ಪರ ಸಂಘಟನೆಗಳು ಈ ಬಗ್ಗೆ ಧ್ವನಿ ಎತ್ತಿದರಾದರೂ ಆ ಧ್ವನಿ ಕ್ಷೀಣವಾಗಿತ್ತು. ಇದು ತಲುಪುವಲ್ಲಿಗೆ ತಲುಪಲೇ ಇಲ್ಲ. ಕನ್ನಡವನ್ನು ಕನ್ನಡಿಗರೇ ನಿರ್ಲಕ್ಷ್ಯ ಮಾಡಿದರೆ ಅದನ್ನು ಹೊರಗಿನವರು ರಕ್ಷಿಸುತ್ತಾರೆಯೇ?.

ಕರ್ನಾಟಕ ಸಂಪತ್ಭರಿತ ರಾಜ್ಯವಾದರೂ ಇಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿಯೇ ಇದೆ. ಇಲ್ಲಿ ಬಹುರಾಷ್ಟ್ರೀಯ ಕಂಪನಿಗಳು, ಬೃಹತ್ ಕೈಗಾರಿಕೆಗಳು, ಐಟಿ-ಬಿಟಿ ಕಂಪನಿಗಳು, ಕೇಂದ್ರೀಯ ಉದ್ಯಮಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ಕನ್ನಡಿಗನಿಗೆ ಇದರಿಂದ ಹೆಚ್ಚಿನ ಲಾಭವಾಗಿಲ್ಲ. ಭಾಷೆಯ ಹೆಸರಿನಲ್ಲಿ ಆತನನ್ನು ದೂರ ಇಡಲಾಗಿದೆ. ಇದನ್ನು ಅನ್ಯಾಯ ಮತ್ತು ತಾರತಮ್ಯ ಎಂದು ಕರೆಯದೆ ವಿಧಿಯಿಲ್ಲ. ಸ್ಥಳೀಯರಿಗೆ ಉದ್ಯೋಗ ಕೊಡಬೇಕು ಎಂಬ ನಿಯಮ ಜಾರಿಯಲ್ಲಿದ್ದರೂ ಅದರ ಸಮರ್ಪಕ ಅನುಷ್ಠಾನವಾಗಿಲ್ಲ. ಹಾಗಾಗಿ ಇಂತಹ ಉದ್ಯಮಗಳ ದೊಡ್ಡ ದೊಡ್ಡ ಹುದ್ದೆಗಳು ಕನ್ನಡೇತರರ ಪಾಲಾಗಿವೆ. ಅದನ್ನು ಕನ್ನಡಿಗರಿಗೆ ದೊರಕಿಸಿಕೊಡುವ ಇಚ್ಛಾಶಕ್ತಿ ಯಾವ ರಾಜಕೀಯ ಪಕ್ಷಗಳಿಗೂ ಇಲ್ಲ. ಕನ್ನಡದ ವಿಷಯ ಬಂದಾಗ ಆಡಳಿತ ಕೂಡ ಗಂಭೀರವಾಗಿ ಪರಿಗಣಿಸದಷ್ಟು ವಾತಾವರಣ ರಾಜ್ಯದಲ್ಲಿ ಸೃಷ್ಟಿಯಾಗಿದೆ. ಕೇಂದ್ರ ಸರಕಾರ ಜಾರಿಗೆ ತಂದ ಕಾನೂನುಗಳು ಜನರ ಹಿತಾಸಕ್ತಿಗೆ ವಿರುದ್ಧವಾಗಿದ್ದರೂ ರಾಜ್ಯ ಬಿಜೆಪಿ ಸರ್ಕಾರ ತರಾತುರಿಯಲ್ಲಿ, ಚರ್ಚೆಯಿಲ್ಲದೆ ಅತ್ಯುತ್ಸಾಹದಿಂದ ಜಾರಿಗೆ ತರುತ್ತಿದೆ.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಪ್ರಾದೇಶಿಕ ಭಾಷೆಗಳ ಕಡೆಗಣನೆ ಆಗಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಈ ಪ್ರಕ್ರಿಯೆ ಹೆಚ್ಚು ತೀವ್ರತೆ ಪಡೆದುಕೊಂಡಿದೆ. ಹಿಂದಿ ಭಾಷೆಗೆ ಇನ್ನಿಲ್ಲದ ಮಾನ್ಯತೆ ನೀಡಲಾಗುತ್ತಿದೆ. ಹಿಂದಿಯೇ ಪರಮೋಚ್ಚ ಎಂಬ ಧೋರಣೆಯನ್ನು ಪ್ರದರ್ಶಿಸಲಾಗುತ್ತಿದೆ. ರೈಲ್ವೆ, ಬ್ಯಾಂಕಿಂಗ್, ಸೇನಾ ನೇಮಕಾತಿಗಳಲ್ಲಿ ಹಿಂದಿಯೇತರಿಗೆ ಅವಕಾಶ ಕಡಿಮೆಯಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ. ಒಂದು ದೇಶ, ಒಂದು ಧರ್ಮದ ಸಿದ್ಧಾಂತವನ್ನು ಪ್ರತಿಪಾದಿಸುವ ಬಿಜೆಪಿ ಸರಕಾರ, ಒಂದು ಭಾಷೆ ನೀತಿಯನ್ನು ನಿಧಾನವಾಗಿ ಜಾರಿಗೆ ತರುತ್ತಿದೆ. ಇದರ ಒಂದು ಭಾಗವಾಗಿಯೇ ನೀಟ್ ಪರೀಕ್ಷೆ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಇದರ ವಿರುದ್ಧ ದೊಡ್ಡ ಮಟ್ಟದ ಹೋರಾಟ ಅನಿವಾರ್ಯವಾಗಿದೆ. ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ಕನ್ನಡದ ಕತ್ತನ್ನು ಹಿಸುಕುವ ಕೃತ್ಯಗಳು ಇನ್ನಷ್ಟು ಹೆಚ್ಚಾಗಿ ಕನ್ನಡಿಗರು ದೈನೇಸಿ ಸ್ಥಿತಿಗೆ ತಲುಪಬಹುದು.

ತಾಯ್ನುಡಿ ಕನ್ನಡ ಸ್ವರಾಜ್ಯದಲ್ಲೇ ಪರಕೀಯವಾದ ಭಾವನೆ ಕನ್ನಡಿಗರಲ್ಲಿ ಮೂಡುತ್ತಿದೆ. ರಾಜ್ಯದ ಉದ್ಯೋಗಗಳೆಲ್ಲವೂ ಪರಭಾಷಿಗರ ಪಾಲಾಗುತ್ತಿರುವುದನ್ನು ತಡೆಯದೆ ಇದ್ದರೆ ಮುಂದಿನ ಪೀಳಿಗೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದೆ. ಕನ್ನಡ ಅನ್ನದ ಭಾಷೆಯಾಗಬೇಕು. ಹಾಗಾದರೆ ಮಾತ್ರ ಕನ್ನಡಿಗರಿಗೆ ಗೌರವ, ಉದ್ಯೋಗ ಸಿಗುತ್ತದೆ. ಕನ್ನಡ ಕಲಿತವರಿಗೆ ರಾಜ್ಯದಲ್ಲಿ ಉದ್ಯೋಗ ಖಾತರಿಯಾಗಬೇಕು. ಹಾಗಾದರೆ ಕನ್ನಡ ಮತ್ತು ಕನ್ನಡಿಗ ಬೆಳೆಯುತ್ತಾನೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲು ರಾಜ್ಯೋತ್ಸವದ ಈ ಸಂದರ್ಭದಲ್ಲಿ ಸರ್ಕಾರ ಸಂಕಲ್ಪ ತೊಡಬೇಕಾಗಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!