ಮಂಗಳೂರು: ಅಪಾಯಕಾರಿ ಪ್ರವಾಸಿ ತಾಣಗಳಲ್ಲಿ ಫೋಟೋ, ಸೆಲ್ಫಿ ತೆಗೆಯುತ್ತಾರೆ. ನಿಯಮ ಉಲ್ಲಂಘಿಸಿದ್ರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಚ್ಚರಿಕೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ, ಪ್ರಾಕೃತಿಕ ವಿಕೋಪ ವಿಚಾರವಾಗಿ ಜಿಲ್ಲಾಡಳಿತ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪಾಯಕಾರಿ ಪ್ರವಾಸಿ ತಾಣಗಳಲ್ಲಿ ಫೋಟೋ, ಸೆಲ್ಫಿ ತೆಗೆಯುತ್ತಾರೆ. ಇಂಥ ಜಾಗಗಳಲ್ಲಿ ನಿಷೇಧದ ಆದೇಶಗಳನ್ನು ನಾವು ಮಾಡಿದ್ದೇವೆ. ಎಂಟು ಬೀಚ್ ಗಳಲ್ಲಿ 24 ಜನ ಹೋಂ ಗಾರ್ಡ್ಸ್ ಗಳನ್ನ ನೇಮಿಸಿದ್ದೇವೆ. ಟ್ರೆಕ್ಕಿಂಗ್ ಪಾಯಿಂಟ್, ಕುಕ್ಕೆ ಬಳಿಯ ಕಾಡು ಪ್ರವೇಶ ಕೂಡ ನಿಷೇಧಿಸಿದ್ದು, ಇದನ್ನ ಮೀರಿದರೆ ನಾವು ಖಂಡಿತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಸದ್ಯ ನಾಲ್ಕು ದಾರಿಯಿದ್ದು, ಇದರಲ್ಲಿ ಎರಡು ದಾರಿ ಬಂದ್ ಆಗಿದೆ. ಹೀಗಾಗಿ ಆದಷ್ಟು ಕುಕ್ಕೆ ಸುಬ್ರಹ್ಮಣ್ಯ ಪ್ರವಾಸ ಮುಂದೂಡಿ. ಹೊರಗಿನ ಪ್ರವಾಸಿಗರು ಅಪಾಯಕಾರಿ ಜಲಪಾತ, ನೀರಿಗೆ ಇಳಿಯುವಂತ್ತಿಲ್ಲ. ದೇವಸ್ಥಾನ ಭೇಟಿಗೆ ಬಂದವರು ದೇವರ ದರ್ಶನ ಅಷ್ಟೇ ಮಾಡಿ. ರೆಡ್ ಅಲರ್ಟ್ ಇರುವ ಈ ರಸ್ತೆಗಳಲ್ಲಿ ಪ್ರಯಾಣ ಸೂಕ್ತವಲ್ಲ. ಯಾವುದೇ ರಸ್ತೆ ಬಿರುಕು ಬಿಟ್ಟಲ್ಲಿ 112 ನಂಬರ್ಗೆ ಮಾಹಿತಿ ನೀಡಿ ಎಂದರು.
ಈ ಬಾರಿಯ ಮಳೆಗೆ ಸದ್ಯ ಏಳು ಪ್ರಾಣ ಹಾನಿ ಸಂಭವಿಸಿದೆ. ಸಿಎಂ ಸಿದ್ಧರಾಮಯ್ಯ ಅವರು ಹಲವಾರು ನಿರ್ದೇಶನ ನೀಡಿದ್ದಾರೆ. ಸಾವು ಸಂಭವಿಸದಂತೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ. ಈ ಬಾರಿ ಪ್ರತೀ ಗ್ರಾಮ ಪಂಚಾಯತಿ ನಗರಸಭೆ, ಪಾಲಿಕೆ ಸೇರಿ 296 ಪ್ರಾಕೃತಿಕ ವಿಕೋಪ ನಿಯಂತ್ರಣ ತಂಡ ಮಾಡಿದ್ದೇವೆ. ಇದಕ್ಕೆ ಸಂಬಂಧಿಸಿದ ಅನುದಾನ, ಅಧಿಕಾರ ಎಲ್ಲವನ್ನೂ ಅವರಿಗೆ ಕೊಡಲಾಗಿದೆ. ಎಲ್ಲವನ್ನೂ ಡಿಸಿ ಕಚೇರಿ ಮೂಲಕ ನಿಯಂತ್ರಣ ಮಾಡಲಾಗುತ್ತದೆ ಎಂದು ಹೇಳಿದರು.