ಕೋವಿಡ್-19 | ಹಲವು ರಾಜ್ಯಗಳಲ್ಲಿ ಪತ್ರಕರ್ತರನ್ನು ‘ಮುಂಚೂಣಿಯ ಕಾರ್ಮಿಕರು’ ಎಂದು ಘೋಷಿಸಲು ನಿರ್ಧಾರ

Prasthutha|

ಹೊಸದಿಲ್ಲಿ : ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ಮಧ್ಯೆ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಪತ್ರಕರ್ತರಿಗೆ ‘ಮುಂಚೂಣಿ ಕಾರ್ಮಿಕರ’ ಸ್ಥಾನಮಾನ ನೀಡಲು ಮತ್ತು ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಅವರಿಗೆ ಆದ್ಯತೆ ನೀಡಲು ನಿರ್ಧರಿಸಿದ್ದಾರೆ.

- Advertisement -

ಜಿನೀವಾ ಮೂಲದ ಮಾಧ್ಯಮ ಹಕ್ಕುಗಳ ಸಂಸ್ಥೆಗೆ ಅನುಗುಣವಾಗಿ, ಕೊರೊನಾದಿಂದಾಗಿ ಪತ್ರಕರ್ತರ ಸಾವಿನ ಸಂಖ್ಯೆಯಲ್ಲಿ ಭಾರತ ವಿಶ್ವದ ಅಗ್ರ ಮೂರು ರಾಷ್ಟ್ರಗಳಲ್ಲಿ ಒಂದಾಗಿದೆ.

ಮೇ 2 ರಂದು, 131 ಪತ್ರಕರ್ತರು ದೇಶದಲ್ಲಿ ಕೊರೊನಾಗೆ ಬಲಿಯಾಗಿದ್ದು,, ದಿನಕ್ಕೆ ನಾಲ್ಕಕ್ಕಿಂತ ಹೆಚ್ಚು ಸಾವುಗಳು ಸಂಭವಿಸುತ್ತಿರುವ ಮಾಹಿತಿಯನ್ನು ಪಿಇಸಿ ಗಮನಿಸಿದೆ. ಉಳಿದೆರಡು ಸ್ಥಾನಗಳಲ್ಲಿ ಬ್ರೆಜಿಲ್ (183 ಪತ್ರಕರ್ತರ ಸಾವು) ಮತ್ತು ಪೆರು(140) ಇದೆ.

- Advertisement -

ತೃಣಮೂಲ ಕಾಂಗ್ರೆಸ್ ಪುನರಾಯ್ಕೆಯಾದ ಒಂದು ದಿನದ ನಂತರ, ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸೋಮವಾರ (ಮೇ 3) ಪಶ್ಚಿಮ ಬಂಗಾಳದ ಪತ್ರಕರ್ತರನ್ನು ಕೋವಿಡ್-19 ಯೋಧರೆಂದು ಘೋಷಿಸಿದ್ದಾರೆ ಎಂದು ಸುದ್ದಿ ವರದಿಗಳು ತಿಳಿಸಿವೆ.

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರೂ ಅದೇ ದಿನ, ರಾಜ್ಯ ಸರ್ಕಾರದೊಂದಿಗೆ ಮಾನ್ಯತೆ ಪಡೆದ ಮಾಧ್ಯಮ ವೃತ್ತಿಪರರನ್ನು ‘ಮುಂಚೂಣಿ ಕಾರ್ಮಿಕರು’ ಎಂದು ಘೋಷಿಸಿದರು.

ಕೋವಿಡ್-19 ಸಾಂಕ್ರಾಮಿಕದ ಅಪಾಯಕಾರಿ ಅವಧಿಯಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸುವಾಗ ಪತ್ರಕರ್ತರು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದು, ಸರ್ಕಾರ ಅವರ ಬಗ್ಗೆ ಕಾಳಜಿ ವಹಿಸುತ್ತದೆ ಎಂದು ಅವರು ಹೇಳಿದರು.

ಪತ್ರಕರ್ತರನ್ನು ‘ಮುಂಚೂಣಿ ಯೋಧರು’ ಎಂದು ಘೋಷಿಸಿದ ಮುಖ್ಯಮಂತ್ರಿಗಳ ಪಟ್ಟಿಗೆ ಸೋಮವಾರ ಪಂಜಾಬ್‌ನ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೂಡಾ ಸೇರಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಆಸ್ಪತ್ರೆಗಳು ಮತ್ತು ಇತರ ಸಂಸ್ಥೆಗಳಿಗೆ ವಿದ್ಯುತ್ ಸೇವೆಗಳನ್ನು ಒದಗಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿರುವ ವಿದ್ಯುತ್ ನಿಗಮ ನೌಕರರಿಗೆ ರಕ್ಷಣೆ ನೀಡಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ. ಒಂದು ದಿನದ ಹಿಂದೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪತ್ರಕರ್ತರಿಗೆ ಆದ್ಯತೆಯ ಮೇರೆಗೆ ಕೋವಿಡ್-19 ಲಸಿಕೆ ನೀಡಲಾಗುವುದು ಎಂದು ಘೋಷಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

‘ರಾಜ್ಯ ಮಟ್ಟದಲ್ಲಿ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯೊಂದಿಗೆ ಮಾನ್ಯತೆ ಪಡೆದ ಎಲ್ಲಾ ಪತ್ರಕರ್ತರು ಮತ್ತು ಮುದ್ರಣ, ಎಲೆಕ್ಟ್ರಾನಿಕ್ ಮತ್ತು ವೆಬ್ ಮಾಧ್ಯಮಗಳಿಂದ ಜಿಲ್ಲಾ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಿಂದ ದೃಢೀಕರಿಸಲ್ಪಟ್ಟ ಮಾನ್ಯತೆ ಪಡೆಯದ ಲೇಖಕರನ್ನು ಮುಂಚೂಣಿ ಕೆಲಸಗಾರರೆಂದು ಪರಿಗಣಿಸಲಾಗುತ್ತದೆ” ರಾಜ್ಯ ಸರ್ಕಾರ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಭಾನುವಾರ ರಾಜ್ಯದ ಪತ್ರಕರ್ತರನ್ನು ಮುಂಚೂಣಿಯ ಕೋವಿಡ್-19 ಯೋಧರು ಎಂದು ಘೋಷಿಸಿದ್ದಾರೆ. ಜೊತೆಗೆ ಕೋವಿಡ್-19 ಸೋಂಕಿಗೆ ಬಲಿಯಾದ ಪತ್ರಕರ್ತನ ಸಂಬಂಧಿಕರಿಗೆ ಮುಂದಿನ 15 ಲಕ್ಷ ರೂ ನೀಡುವುದಾಗಿ ಭರವಸೆ ನೀಡಿದ್ದಾರೆ.

ಏಪ್ರಿಲ್ 14 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಪತ್ರಕರ್ತರನ್ನು ‘ಮುಂಚೂಣಿ ಕೆಲಸಗಾರರು’ ಎಂದು ಪರಿಗಣಿಸಿ ಅವರಿಗೆ ಆದ್ಯತೆ ನೀಡಿ ಲಸಿಕೆ ಹಾಕುವಂತೆ ದೆಹಲಿ ಸರ್ಕಾರ ಕೇಂದ್ರವನ್ನು ಒತ್ತಾಯಿಸುತ್ತದೆ ಎಂದು ಟ್ವೀಟ್ ಮಾಡಿದ್ದರು.

ಏಪ್ರಿಲ್ 3 ರಂದು ಉತ್ತರಾಖಂಡ ಸರ್ಕಾರ ಪತ್ರಕರ್ತರನ್ನು ‘ಮುಂಚೂಣಿ ಕಾರ್ಮಿಕರು’ ಎಂದು ಘೋಷಿಸಿ, ಎಲ್ಲರಿಗೂ ಯಾವುದೇ ವಯಸ್ಸಿನ ನಿರ್ಬಂಧವಿಲ್ಲದೆ ಕೋವಿಡ್-19 ಲಸಿಕೆ ಘೋಷಿಸಿದೆ ಎಂದು ತಿಳಿದು ಬಂದಿದೆ.

ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ಪ್ರಕಟಿಸಿದ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ 2021 ರ ಪ್ರಕಾರ, ಭಾರತವು 180 ದೇಶಗಳಲ್ಲಿ 142 ನೇ ಸ್ಥಾನದಲ್ಲಿದೆ ಇದು ತನ್ನ ನೆರೆಯ ಪಾಕಿಸ್ತಾನ (145) ಮತ್ತು ಬಾಂಗ್ಲಾದೇಶ (152) ಗಳಿಗಿಂತ ಕೆಟ್ಟ ಪರಿಸ್ಥಿತಿ ಹೊಂದಿದ್ದು, ಭಾರತ ವಿಶ್ವದ ಅತ್ಯಂತ ಅಸುರಕ್ಷಿತ ದೇಶಗಳ ಪಟ್ಟಿಯಲ್ಲಿದೆ ಎನ್ನಲಾಗಿದೆ.



Join Whatsapp