ಕೊಪ್ಪಳ: ಮುರುಗೇಶ್ ನಿರಾಣಿ ಆದಷ್ಟು ಬೇಗ ಮುಖ್ಯಮಂತ್ರಿ ಆಗ್ತಾರೆ ಎಂಬ ಹೇಳಿಕೆ ನೀಡಿದ್ದ ಸಚಿವ ಕೆ.ಎಸ್ ಈಶ್ವರಪ್ಪ ಯು ಟರ್ನ್ ಹೊಡೆದಿದ್ದಾರೆ.
ಮುರುಗೇಶ್ ನಿರಾನಿ ಮುಖ್ಯಮಂತ್ರಿ ಆಗ್ತಾರೆ ಎಂಬ ಹೇಳಿಕೆಗೆ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ಸಿಎಂ ಬದಲಾವಣೆ ವಿಚಾರದ ಬಗ್ಗೆ ತಮ್ಮ ಹೇಳಿಕೆಗೆ ಈಶ್ವರಪ್ಪ ಸ್ಪಷ್ಟನೆ ನೀಡಿದ್ದು, “ಚುನಾವಣೆ ಬರೋವರೆಗೂ ಬಸವರಾಜ ಬೊಮ್ಮಾಯಿ ಅವರೇ ಸಿಎಂ. ನಾನು ಬದಲಾಗಬಹುದು ಎಂದು ಹೇಳಿದ್ದೇನೆ ಅಷ್ಟೇ” ಎಂದು ಸಮಜಾಯಿಷಿ ನೀಡಿದ್ದಾರೆ.
ನಿನ್ನೆ ಬೀಳಗಿ ಪಟ್ಟಣದಲ್ಲಿ ಬಿಜೆಪಿ ಓಬಿಸಿ ಘಟಕದ ಕಾರ್ಯಕಾರಿ ಸಭೆಯ ಭಾಷಣದ ವೇಳೆ ಈಶ್ವರಪ್ಪ, ಮುಂದೆ ಮುರುಗೇಶ್ ನಿರಾಣಿ ಮುಖ್ಯಮಂತ್ರಿ ಆಗ್ತಾರೆ, ಅವರಿಗೆ ಶಕ್ತಿ ಇದೆ ಎಂದಿದ್ದರು. ಇವತ್ತಲ್ಲ ನಾಳೆ ಮುಖ್ಯಮಂತ್ರಿ ಆಗಿ, ಹಿಂದುಳಿದ ವರ್ಗದವರಿಗೆ ನ್ಯಾಯ ಕೊಡ್ತಿಯೇನಪ್ಪ ಎಂದು ವೇದಿಕೆ ಮೇಲೆಯೇ ನಿರಾಣಿಗೆ ಪ್ರಶ್ನೆ ಮಾಡಿದ್ದರು. ಈಶ್ವರಪ್ಪ ಮಾತಿಗೆ ನಿರಾಣಿ ಸಕ್ಸಸ್ ಗುರುತು ತೋರಿ ನಕ್ಕಿದ್ದರು..ಈಶ್ವರಪ್ಪ ಮಾತು ರಾಜಕೀಯ ಪಡಸಾಲೆ ಹೊಸ ಚರ್ಚೆಯನ್ನೇ ಹುಟ್ಟು ಹಾಕಿತ್ತು.
ಈಶ್ವರಪ್ಪ ಮಾತಿಗೆ ಗೋವಿಂದ ಕಾರಜೋಳ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾವು ಕೊರೊನಾ, ಪ್ರವಾಹದಂತ ಸಂಕಷ್ಟದಲ್ಲಿದ್ದೇವೆ. ಈಗ ನಾಯಕತ್ವದ ವಿಚಾರಕ್ಕೆ ಹೋಗೋದು ಸರಿಯಲ್ಲ. ಆ ವಿಷಯ ಬಿಟ್ಟು ಹಾಕಿ. ನಾನು ಇಲ್ಲಿ ಮಾತನಾಡಿದ್ರೆ ಅದು ಈಶ್ವರಪ್ಪಗೆ ತಲುಪುತ್ತೆ ಬಿಡಿ ಎಂದು ಖಾರವಾಗಿಯೇ ಕಾರಜೋಳ ಪ್ರತಿಕ್ರಿಯಿಸಿದ್ದಾರೆ.
ದಾವಣಗೆರೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರಚಾರ ನಡೆಸಿದ್ದು, ಮುಂದೆ ಮುರುಗೇಶ್ ನಿರಾಣಿ ಸಿಎಂ ಆಗ್ತಾರೆ ಅನ್ನೋ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ “ಈಶ್ವರಪ್ಪ ತಮಾಷೆ ಮಾಡಿದ್ದಾರೆ” ಎನ್ನುವ ಮೂಲಕ ತೆರೆ ಎಳೆಯಲು ಯತ್ನಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಯಿಂದ ಸಚಿವ ಈಶ್ವರಪ್ಪ ಹಿಂದೆ ಸರಿದಿದ್ದಾರೆ.