ಲೇವರ್ ಕಪ್‌| ವೃತ್ತಿಜೀವನದ ಅಂತಿಮ ಪಂದ್ಯದಲ್ಲಿ ನಡಾಲ್‌ ಜೊತೆಗೂಡಿ ಆಡಲಿರುವ ರೋಜರ್‌ ಫೆಡರರ್

Prasthutha|

ತಮ್ಮ ವೃತ್ತಿಜೀವನದ ಕೊನೆಯ ಟೂರ್ನಿ ಲೇವರ್ ಕಪ್‌ನಲ್ಲಿ ರೋಜರ್‌ ಫೆಡರರ್, ಸ್ಪೇನ್‌ನ ರಫೆಲ್‌ ನಡಾಲ್‌ ಅವರ ಜೊತೆಗೂಡಿ ಕಣಕ್ಕಿಳಿಯಲಿದ್ದಾರೆ. ಯುರೋಪ್ ತಂಡದ ಪುರುಷರ ಡಬಲ್ಸ್‌ ವಿಭಾಗದಲ್ಲಿ ಇಬ್ಬರು ದಿಗ್ಗಜರು  ಜೊತೆಯಾಗಲಿದ್ದಾರೆ.

- Advertisement -

ಸೆಪ್ಟಂಬರ್‌ 23, ಶುಕ್ರವಾರದಂದು ಲಂಡನ್‌ನ O2 ಅರೆನಾದಲ್ಲಿ ನಡೆಯುವ ಲೇವರ್ ಕಪ್‌ ಟೂರ್ನಿಯ ಮೊದಲ ದಿನದ ಪಂದ್ಯದಲ್ಲಿ ಸ್ವಿಸ್‌-ಸ್ಪೇನ್‌ ಜೋಡಿ, ಟೀಮ್ ವರ್ಲ್ಡ್‌ನ ಫ್ರಾನ್ಸಿಸ್ ಟಿಯಾಫೋ ಮತ್ತು ಜಾಕ್ ಸಾಕ್ ಅವರನ್ನು ಎದುರಿಸಲಿದೆ. ಲೇವರ್ ಕಪ್‌ನ ಸಿಂಗಲ್ಸ್‌ ವಿಭಾಗದಲ್ಲಿ ತಾನು ಪಾಲ್ಗೊಳ್ಳುವುದಿಲ್ಲ ಎಂದು ಫೆಡರರ್‌ ಈಗಾಗಲೇ ತಿಳಿಸಿದ್ದಾರೆ. ಫೆಡರರ್, ಲೇವರ್ ಕಪ್‌ನ ಸಿಂಗಲ್ಸ್ ಪಂದ್ಯಗಳಲ್ಲಿ ಅಜೇಯ 6-0 ದಾಖಲೆಯನ್ನು ಹೊಂದಿದ್ದಾರೆ,

2019ರಲ್ಲಿ ಫೆಡರರ್‌-ನಡಾಲ್‌ ಕೊನೆಯದಾಗಿ ಡಬಲ್ಸ್‌ ವಿಭಾಗದಲ್ಲಿ ಜೊತೆಯಾಗಿ ಆಡಿದ್ದರು. ಈ ಪಂದ್ಯದಲ್ಲಿ ಸ್ಯಾಮ್ ಕ್ವೆರ್ರಿ ಮತ್ತು ಜಾಕ್ ಸಾಕ್ ವಿರುದ್ಧ ಮೂರು ಸೆಟ್‌ಗಳಲ್ಲಿ ಗೆಲುವು ಸಾಧಿಸಿದ್ದರು. 20 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ವಿಜೇತ ಸ್ವಿಜರ್ಲ್ಯಾಂಡ್’ನ ರೋಜರ್ ಫೆಡರರ್‌ ಮತ್ತು 22 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ವಿಜೇತ ಸ್ಪೇನ್‌ನ ರಫೆಲ್‌ ನಡಾಲ್‌ ಒಂದಾಗಿ ಮತ್ತೆ ಮೈದಾನಕ್ಕೆ ಮರಳುವ ಸುದ್ದಿ ಟೆನಿಸ್‌ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.

- Advertisement -

ಟೆನಿಸ್ ಜಗತ್ತಿನ  ಶ್ರೇಷ್ಠ ಆಟಗಾರರಲ್ಲಿ ಓರ್ವರಾದ ರೋಜರ್ ಫೆಡರರ್‌, ಸೆಪ್ಟಂಬರ್‌ 15ರಂದು ನಿವೃತ್ತಿ ಘೋಷಿಸಿದ್ದರು.  ಈ ವೇಳೆ ಲಂಡನ್‌ನಲ್ಲಿ ನಡೆಯಲಿರುವ ಲೇವರ್ ಕಪ್‌, ತನ್ನ ವೃತ್ತಿ ಜೀವನದ ಅಂತಿಮ ಟೂರ್ನಿ ಆಗಿರಲಿದೆ ಎಂದು ಹೇಳಿದ್ದರು.

2021ರ ವಿಂಬಲ್ಡನ್ ಕ್ವಾರ್ಟರ್ ಫೈನಲ್ ಪಂದ್ಯದ ಸೋಲಿನ ಬಳಿಕ ಫೆಡರರ್, ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಂದಿನಿಂದ ರೋಜರ್ ಟೆನಿಸ್ ಅಂಗಳದಿಂದ ದೂರ ಉಳಿದಿದ್ದಾರೆ.

ಲೇವರ್ ಕಪ್ 2022: ತಂಡಗಳು

ಯುರೋಪ್ ತಂಡ: ರೋಜರ್ ಫೆಡರರ್, ರಫೆಲ್ ನಡಾಲ್, ನೊವಾಕ್ ಜೊಕೊವಿಕ್, ಆಂಡಿ ಮುರ್ರೆ, ಸ್ಟೆಫಾನೊಸ್ ಸಿಟ್ಸಿಪಾಸ್, ಕ್ಯಾಸ್ಪರ್ ರೂಡ್

ಟೀಮ್ ವರ್ಲ್ಡ್: ಫೆಲಿಕ್ಸ್ ಆಗರ್-ಅಲಿಯಾಸ್ಸಿಮ್, ಫ್ರಾನ್ಸಿಸ್ ಟಿಯಾಫೊ, ಡಿಯಾಗೋ ಶ್ವಾರ್ಟ್ಜ್‌ಮನ್, ಅಲೆಕ್ಸ್ ಡಿ ಮಿನೌರ್, ಟೇಲರ್ ಫ್ರಿಟ್ಜ್, ಜ್ಯಾಕ್ ಸಾಕ್

ಸೆಪ್ಟಂಬರ್‌ 23ರಂದು ಲಂಡನ್‌ನಲ್ಲಿ ಆರಂಭವಾಗುವ ಲೇವರ್ ಕಪ್‌ ಟೂರ್ನಿ,  ಸೆಪ್ಟಂಬರ್‌ 25 ರಂದು ಕೊನೆಗೊಳ್ಳಲಿದೆ. ಮೊದಲ ದಿನದ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 5 ಗಂಟೆಯಿಂದ ಆರಂಭವಾಗಲಿದೆ.

Join Whatsapp