ಬೆಂಗಳೂರಿನಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್: ಪಾಪ್ಯುಲರ್ ಫ್ರಂಟ್ ಖಂಡನೆ

Prasthutha|

ಬೆಂಗಳೂರು: ಎನ್.ಇ.ಪಿ. ಜಾರಿಗೊಳಿಸುವ ಸರಕಾರದ ಕ್ರಮದ ವಿರುದ್ಧ ರಾಜಧಾನಿಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ನಡೆಸಿರುವ ಕ್ರಮವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಶ ತೀವ್ರವಾಗಿ ಖಂಡಿಸಿದ್ದಾರೆ.


ರಾಜ್ಯದ ಬಿಜೆಪಿ ಸರಕಾರವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಯಾವುದೇ ಚರ್ಚೆ ನಡೆಸದೇ, ಶಿಕ್ಷಣ ತಜ್ಞರ ಅಭಿಪ್ರಾಯವನ್ನೂ ಪಡೆದುಕೊಳ್ಳದೆ ಈ ಕಾಯ್ದೆಯನ್ನು ತರಾತುರಿಯಲ್ಲಿ ಜಾರಿಗೊಳಿಸಲು ಹೊರಟಿದೆ. ಸರಕಾರದ ಈ ಅಸಾಂವಿಧಾನಿಕ ಕ್ರಮದ ವಿರುದ್ಧ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಎಂಬ ವಿದ್ಯಾರ್ಥಿ ಸಂಘಟನೆಯು ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವ ಶಾಂತಿಯುತ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಪ್ರತಿಭಟನೆಯ ಹಕ್ಕು ಪ್ರತಿಯೋರ್ವ ನಾಗರಿಕನ ಮೂಲಭೂತ ಹಕ್ಕು. ಆದರೆ ಪೊಲೀಸರು ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ನಡೆಸಿರುವುದು ಅಕ್ಷಮ್ಯ. ಘಟನೆಯಲ್ಲಿ ಕೆಲ ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದು, ವಿದ್ಯಾರ್ಥಿನಿಯರನ್ನೂ ಎಳೆದಾಡಲಾಗಿದೆ. ಮಾತ್ರವಲ್ಲ, ಪೊಲೀಸರು ಹಲವು ವಿದ್ಯಾರ್ಥಿಗಳನ್ನು ಅಕ್ರಮವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.

- Advertisement -


ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಅಮಾನವೀಯವಾಗಿ ಲಾಠಿಚಾರ್ಜ್ ನಡೆಸಿದ ಪೊಲೀಸರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಬಂಧಿತ ವಿದ್ಯಾರ್ಥಿಗಳನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಶಿಕ್ಷಣವನ್ನು ಕೇಸರೀಕರಣಗೊಳಿಸುವ, ಶಿಕ್ಷಣದ ಬಜಾರೀಕರಣ ನಡೆಸುವ, ರಾಜ್ಯ ಸರಕಾರದ ಅಧಿಕಾರವನ್ನು ಮೊಟಕುಗೊಳಿಸಲುವ, ಶೋಷಿತ ಸಮುದಾಯವನ್ನು ಉನ್ನತ ಶಿಕ್ಷಣದಿಂದ ವಂಚಿತರನ್ನಾಗಿಸುವ ಹೊಸ ಎನ್.ಇ.ಪಿ. ಜಾರಿಗೊಳಿಸುವ ನಿರ್ಧಾರದಿಂದ ರಾಜ್ಯ ಸರಕಾರವು ಹಿಂದೆ ಸರಿಯಬೇಕೆಂದು ನಾಸಿರ್ ಪಾಶ ಒತ್ತಾಯಿಸಿದ್ದಾರೆ.

- Advertisement -