ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಪಡೆದ ಆರೋಪ ಸಂಬಂಧ ಬಿಹಾರ ರಾಜದಾನಿ ಪಾಟ್ನಾದಲ್ಲಿ ನಿನ್ನೆ ಮಾಜಿ ಮುಖ್ಯಮಂತ್ರಿ ರಾಬ್ರೀದೇವಿಯವರ ವಿಚಾರಣೆಯ ಬಳಿಕ ಇಂದು ಅವರ ಪತಿ, ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರನ್ನು ಕೇಂದ್ರೀಯ ತನಿಖಾ ದಳ- ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದರು.
ಮಾರ್ಚ್ 7ರ ಬೆಳಿಗ್ಗೆ ಸಿಬಿಐ ಅಧಿಕಾರಿಗಳು ಪಂಡಾರ ರಸ್ತೆಯಲ್ಲಿರುವ ಲಾಲೂ ಅವರ ಮಗಳು ಮೀಸಾ ಭಾರತಿಯವರ ಮನೆಯಲ್ಲಿ ಈ ವಿಚಾರಣೆ ನಡೆಸಿದರು. ಪುತ್ರಿಯರಾದ ಮೀಸಾ ಮತ್ತು ಹೇಮಾ ಅವರ ಹೆಸರು ಕೂಡ ಈ ಉದ್ಯೋಗಕ್ಕಾಗಿ ಭೂಮಿ ಪ್ರಕರಣದಲ್ಲಿ ಸೇರಿಸಲಾಗಿದೆ. 2004-09ರ ಅವಧಿಯಲ್ಲಿ ಕೇಂದ್ರದ ರೈಲು ಮಂತ್ರಿಯಾಗಿದ್ದ ಲಾಲೂ ಪ್ರಸಾದ್ ಯಾದವ್ ಉದ್ಯೋಗ ಕೊಡಲು ದಿಲ್ಲಿಯಲ್ಲಿ ಕಡಿಮೆ ಬೆಲೆಗೆ ಭೂಮಿ ಪಡೆದಿದ್ದರು ಎಂದು ಆಪಾದಿಸಲಾಗಿದೆ.
2022ರ ಮೇ ತಿಂಗಳಲ್ಲಿ ಎಫ್’ಐಆರ್ ದಾಖಲಾಗಿದ್ದು ಲಾಲೂ, ಅವರ ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಸೇರಿ 12 ಮಂದಿಯ ಹೆಸರು ಈ ಎಫ್’ಐಆರ್’ನಲ್ಲಿದೆ. ಈ ಮೊಕದ್ದಮೆ ಸಂಬಂಧ ಲಾಲೂ ಸಚಿವರಿದ್ದಾಗ ಒಎಸ್’ಡಿ- ವಿಶೇಷ ಕರ್ತವ್ಯಾಧಿಕಾರಿ ಆಗಿದ್ದ ಭೋಲಾ ಯಾದವ್ ಅವರನ್ನು ಕಳೆದ ಜೂನ್’ನಲ್ಲಿ ಸಿಬಿಐನವರು ಬಂಧಿಸಿದ್ದಾರೆ.
“ನಮ್ಮ ತಂದೆಗೆ ಸುಮ್ಮನೆ ಕಿರುಕುಳ ನೀಡಲಾಗುತ್ತಿದೆ, ನನ್ನ ತಂದೆಗೆ ಏನಾದರೂ ಆದರೆ ನಾನು ಯಾರನ್ನೂ ಸುಮ್ಮನೆ ಬಿಡುವವಳಲ್ಲ” ಎಂದು ಲಾಲೂ ಅವರ ಮಗಳು ರೋಹಿಣಿ ಆಚಾರ್ಯ ಎಚ್ಚರಿಸಿದ್ದಾರೆ. ಸಿಂಗಾಪುರದಲ್ಲಿ ಕೆಲಸದಲ್ಲಿರುವ ಗಂಡ ಮಕ್ಕಳ ಜೊತೆಗೆ ಇರುವ ರೋಹಿಣಿಯವರು ಕೆಲವು ತಿಂಗಳ ಹಿಂದೆ ತಮ್ಮ ಒಂದು ಮೂತ್ರ ಪಿಂಡವನ್ನು ತಂದೆಗೆ ದಾನ ಮಾಡಿದ್ದರು.
ಉದ್ದೇಶಪೂರ್ವಕವಾಗಿ ತಂದೆಗೆ ಕಿರುಕುಳ ನೀಡುತ್ತಿದ್ದಾರೆ ಎನ್ನುತ್ತಾರೆ ರೋಹಿಣಿ.
ಪ್ರತಿಪಕ್ಷಗಳನ್ನು ಹಣಿಯಲು ಕೇಂದ್ರೀಯ ತನಿಖಾ ಏಜೆನ್ಸಿಗಳನ್ನು ದುರುಪಯೋಗ ಮಾಡುವುದು ಸರಿಯಲ್ಲ ಎಂದು ಎರಡು ದಿನಗಳ ಹಿಂದೆ ಎಂಟು ವಿರೋಧ ಪಕ್ಷಗಳವರು ಜಂಟಿಯಾಗಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದರು. ಹಾಗೆ ಪತ್ರ ಬರೆದವರಲ್ಲಿ ಲಾಲೂ ದಂಪತಿಯ ಮಗ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಸಹ ಸೇರಿದ್ದಾರೆ. ಅದರಲ್ಲಿ ಲಾಲೂ ಪ್ರಸಾದರ ಬಗೆಗಿನ ನಿರಂತರ ವಿಚಾರಣೆ ಇತ್ಯಾದಿ, ಈ ಕೇಂದ್ರೀಯ ತನಿಖಾ ಸಂಸ್ಥೆಗಳು ಕೇಂದ್ರ ಸರಕಾರದ ಕೈಗೊಂಬೆಗಳಾಗಿ ಕೆಲಸ ಮಾಡುವ ಸಂಶಯ ಬರುತ್ತಿದೆ ಎಂದೂ ಪತ್ರದಲ್ಲಿ ವಿವರಿಸಲಾಗಿತ್ತು.
ಸಿಬಿಐ ಸ್ವತಂತ್ರ ಸಂಸ್ಥೆಯಾಗಿದೆ, ಅದು ತನ್ನ ಕೆಲಸವನ್ನು ತಾನು ಮಾಡುತ್ತಿದೆ ಎಂದು ಬಿಹಾರದ ಬಿಜೆಪಿ ನಾಯಕರು ಹೇಳಿದ್ದರು.
ಮುಂಬೈ, ಜಬಲ್’ಪುರ, ಕೊಲ್ಕತ್ತ, ಜೈಪುರ, ಹಾಜಿಪುರಗಳಲ್ಲಿ ರೈಲ್ವೆ ಉದ್ಯೋಗ ಪಡೆದ ಕೆಲವರಿಂದ ಹಣದ ಬದಲು ಕಡಿಮೆ ಬೆಲೆಗೆ ಭೂಮಿ ಪಡೆಯಲಾಗಿದೆ ಎಂಬುದು ಈ ಪ್ರಕರಣವಾಗಿದ್ದು, ಕಳೆದ ವರ್ಷ ಎಫ್ಐಆರ್ ದಾಖಲಾಗಿದೆ.