ಅರಣ್ಯಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿ ಪೊಲೀಸ್ ಬಲೆಗೆ: ಇಬ್ಬರು ನಾಪತ್ತೆ

Prasthutha|

ಚಿಕ್ಕಮಗಳೂರು: ಬಸವನಕೋಟೆ ಅರಣ್ಯಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ.

- Advertisement -

ಅರಣ್ಯಕ್ಕೆ ಬೆಂಕಿ ಬಿದ್ದ ಪರಿಣಾಮ ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಬಸವನಕೋಟೆ ಮೀಸಲು ಅರಣ್ಯದಲ್ಲಿ ನೂರಾರು ಎಕರೆ ಅರಣ್ಯ ನಾಶ ಆಗಿತ್ತು.

ಬಂಧಿತ ಆರೋಪಿಯನ್ನು ರಘು ಎಂದು ಗುರುತಿಸಲಾಗಿದ್ದು, ಇನ್ನುಳಿದ ಇಬ್ಬರು ಆರೋಪಿಗಳಾದ ಕುಮಾರ್ ಹಾಗೂ ವೆಂಕಟೇಶ್ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

ಬಾಳೆಹೊನ್ನೂರು ಸಮೀಪದ ಖಾಂಡ್ಯದ ಕಸ್ಕೆಮನೆಯಲ್ಲಿರುವ ಮೀಸಲು ಅರಣ್ಯ ಸೇರಿ ಅಕ್ಕಪಕ್ಕದ ತೋಟಗಳಿಗೂ ಬೆಂಕಿಯ ಕೆನ್ನಾಲಿಗೆ ಚಾಚಿದ್ದ ಪರಿಣಾಮ ತಡರಾತ್ರಿವರೆಗೂ ಕಾರ್ಯಾಚರಣೆ ನಡೆಸಿದ್ದ ಅಗ್ನಿಶಾಮಕ ದಳದ ಅಧಿಕಾರಿಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದರು. ಬಳಿಕ ಬೆಂಕಿಯ ಕಾವು ತಣ್ಣಗಾಗುವ ವೇಳೆ ಮಧ್ಯರಾತ್ರಿ ಕಳೆದಿತ್ತು.

ಘಟನೆ ಸಂಬಂಧ ಕೂಡಲೇ ಪ್ರಕರಣ ದಾಖಲಿಸಿಕೊಂಡ ಬಾಳೆಹೊನ್ನೂರು ಅರಣ್ಯಾಧಿಕಾರಿಗಳು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ಅದರನ್ವಯ ಮೀಸಲು ಅರಣ್ಯಕ್ಕೆ ಬೆಂಕಿ ಹಚ್ಚಿದ ಓರ್ವನನ್ನು ಬಂಧಿಸಿದ್ದು, ಇಬ್ಬರು ತಲೆ ಮರೆಸಿಕೊಂಡಿದ್ದಾರೆ.

Join Whatsapp