ಲಖಿಂಪುರ್ ಖೇರಿ ರೈತರ ಹತ್ಯಾಕಾಂಡ ಪೂರ್ವಯೋಜಿತ ಕೃತ್ಯ : SIT

Prasthutha|

ಉತ್ತರ ಪ್ರದೇಶ : ಕೇಂದ್ರ ಸರಕಾರ ಜಾರಿಗೊಳಿಸಿದ್ದ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿದ್ದ ರೈತರನ್ನು ಅಕ್ಟೋಬರ್ 3 ರಂದು ನಾಲ್ವರು ರೈತರು ಸೇರಿದಂತೆ ಒಟ್ಟು 8 ಜನರ ಅಮಾನುಷ ಸಾವಿಗೆ ಕಾರಣವಾದ ಉತ್ತರ ಪ್ರದೇಶದ ಲಖೀಂಪುರ್ ಖೇರಿ ಹತ್ಯಾಕಾಂಡವು ಯೋಜಿತವಾದ ಮತ್ತು ಉದ್ದೇಶಪೂರ್ವಕ ಕೃತ್ಯವಾಗಿದೆಯೆ ಹೊರತು ನಿರ್ಲಕ್ಷತನದಿಂದ ಆಗಿದ್ದಲ್ಲ ಎಂದು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ತಿಳಿಸಿದೆ.

- Advertisement -

ತನಿಖಾ ತಂಡವು ಕಾರು ಹರಿಸಿ ಕೊಂದ 13 ಆರೋಪಿಗಳ ವಿರುದ್ಧ ಶಸಸ್ತ್ರ ಕಾಯ್ದೆಯಡಿಯಲ್ಲಿ ಕೊಲೆಯತ್ನ ಸೇರಿ ನಾಲ್ಕು ಹೊಸ ಸೆಕ್ಷನ್‌ಗಳನ್ನು ಸೇರಿಸಲು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (CJM) ಮುಂದೆ ಅರ್ಜಿ ಸಲ್ಲಿಸಿದೆ.

ಈಗಾಗಲೇ ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾ ವಿರುದ್ಧ ಕೊಲೆಯತ್ನದ ಪ್ರಕರಣ ದಾಖಲಾಗಿದೆ. ನಂತರದ ತನಿಖೆಯ ಸಂದರ್ಭದಲ್ಲಿ ಹೊಸ ಸಾಕ್ಷ್ಯಗಳು ಸಿಕ್ಕಿದ್ದರಿಂದ ಈಗ ಎಲ್ಲಾ 13 ಆರೋಪಿಗಳ ಮೇಲೆ ಕೊಲೆಯತ್ನ ಪ್ರಕರಣ ಸೇರಿಸಲು ಮನವಿ ಮಾಡಿದೆ. ಜೊತೆಗೆ ಆರೋಪಿಗಳ ವಿರುದ್ಧದ ಮೂರು ಆರೋಪಗಳನ್ನು ಕೈಬಿಡುವಂತೆ ಸಹ ಎಸ್‌ಐಟಿ ನ್ಯಾಯಾಲಯಕ್ಕೆ ಮನವಿ ಮಾಡಿದೆ. ಅವುಗಳೆಂದರೆ ಐಪಿಸಿ ಸೆಕ್ಷನ್‌ 279 (ಸಾರ್ವಜನಿಕ ಮಾರ್ಗದಲ್ಲಿ ದುಡುಕಿನ ಚಾಲನೆ), 338 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕ್ರಿಯೆ) ಮತ್ತು 304 ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ).

- Advertisement -

ಅವುಗಳ ಬದಲಿಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆಯ ಯತ್ನ), 326 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಶಸ್ತ್ರಾಸ್ತ್ರಗಳು ಅಥವಾ ವಿಧಾನಗಳಿಂದ ಗಂಭೀರವಾದ ಗಾಯವನ್ನು ಉಂಟುಮಾಡುವುದು), 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಸೇರಿಸಲು ವಿನಂತಿಸಲಾಗಿದೆ. ರೈತರು ಮತ್ತು ಪತ್ರಕರ್ತನ ಮೇಲೆ ಯೋಜನಾಬದ್ದವಾಗಿ ಮತ್ತು ಕೊಲ್ಲುವ ಉದ್ದೇಶದಿಂದಲೇ ಎಸ್‌ಯವಿ ಕಾರುಗಳು ಹರಿದಿವೆ ಎಂದು ಎಸ್‌ಐಟಿ ತಿಳಿಸಿದೆ

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News



Join Whatsapp