ಬಿಜೆಪಿ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಸೋಮಾರಿ ಜಮೀನ್ದಾರರಂತೆ ವರ್ತಿಸುತ್ತಿದೆ: ಮಮತಾ ಗಂಭೀರ ಆರೋಪ
Prasthutha: December 14, 2021

ನವದೆಹಲಿ: ದೇಶಾದ್ಯಂತ ಬಿಜೆಪಿಯನ್ನು ಸೋಲಿಸಲು ಪ್ರಯತ್ನಿಸದೇ ಕಾಂಗ್ರೆಸ್ ಸೋಮಾರಿ ಜಮೀನ್ದಾರರಂತೆ ವರ್ತಿಸುತ್ತಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.
ದಕ್ಷಿಣ ಗೋವಾದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಹಾಲಿ ಶಾಸಕ, ಮಾಜಿ ಮುಖ್ಯಮಂತ್ರಿ ಚರ್ಚಿಲ್ ಅಲೆಮಾವೊ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಬ್ಯಾನರ್ಜಿ, ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಟಿಎಂಸಿ ಮೈತ್ರಿಕೂಟಕ್ಕೆ ಬೆಂಬಲ ಸೂಚಿಸಲಿ ಎಂದು ಕಾಂಗ್ರೆಸ್ ಅನ್ನು ಒತ್ತಾಯಿಸಿದರು.
ಬಿಜೆಪಿ ಗೋವಾ ಸೇರಿದಂತೆ ದೇಶದೆಲ್ಲೆಡೆ ವಿಜಯದ ನಾಗಾಲೋಟವನ್ನು ಮುಂದುವರಿಸಿ ದೇಶವನ್ನು ಹತೋಟಿಗೆ ತರಲು ಯೋಜನೆ ರೂಪಿಸುತ್ತಿದೆ. ಮಾತ್ರವಲ್ಲ ಬಿಜೆಪಿ ಅನೇಕ ಸ್ಥಳಗಳಲ್ಲಿ ಇತಿಹಾಸ ಬದಲಾಯಿಸಿದೆ ಎಂದು ಅವರು ಟೀಕಿಸಿದರು.
ಆಡಳಿತಾರೂಢ ಬಿಜೆಪಿ ವಿರುದ್ಧದ ಎಲ್ಲಾ ವಿರೋಧ ಪಕ್ಷಗಳನ್ನು ಒಟ್ಟಾಗಿಸಿ ಹೋರಾಟ ರೂಪಿಸುವುದರಲ್ಲಿ ಕಾಂಗ್ರೆಸ್ ನ ಕೊಡುಗೆ ಶೂನ್ಯ ಎಂದು ತಿಳಿಸಿದ ಬ್ಯಾನರ್ಜಿ, ಕೆಲವು ರಾಜಕೀಯ ಪಕ್ಷಗಳು ತಮ್ಮನ್ನು ಜಮೀನ್ದಾರರು ಎಂಬಂತೆ ಪರಿಗಣಿಸಿದಂತಿದೆ ಎಂದು ಕಾಂಗ್ರೆಸ್ ಅನ್ನು ಗುರಿಯಾಗಿಸಿ ತೀವ್ರ ವಾಗ್ದಾಳಿ ನಡೆಸಿದರು.
ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News
