ಕುಂದಾಪುರ ಮೂಲದ ದಂಪತಿಯ ಮಗು ಅದಲು ಬದಲಾಗಿದೆ ಎಂಬ ವಿಷಯ ಬೆಳಕಿಗೆ ಬರುತ್ತಿದ್ದಂತೆ ಹಿರಿಯ ಆರೋಗ್ಯಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದರಿಂದ ಆಸ್ಪತ್ರೆಯ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದು, ಯಾವಾಗಲೂ ಇಲ್ಲದ ಬಿಸಿ ನೀರು, ಸರಿಯಾದ ಸಮಯಕ್ಕೆ ಊಟ ದೊರೆಯುತ್ತಿದೆ ಎಂದು ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳು, ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಹೆಸರು ಹೇಳಲು ಇಚ್ಛಿಸದ ಮಹಿಳೆಯೊಬ್ಬರು ಪ್ರಸ್ತುತ ಪ್ರತಿನಿಧಿಯೊಂದಿಗೆ ಮಾತನಾಡಿ, ನಾನು ಕಳೆದ ಐದು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ಇಲ್ಲಿ ಅವ್ಯವಸ್ಥೆಯ ಆಗರವಾಗಿತ್ತು. ಆದರೆ ಮಗು ಅದಲು ಬದಲು ಆದ ಘಟನೆಯ ಬಳಿಕ ಸಿಬ್ಬಂದಿ ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸುತ್ತಿದ್ದಾರೆ. ಗಬ್ಬುವಾಸನೆ ಬರುತ್ತಿದ್ದ ಶೌಚಾಲಯ ಸ್ವಚ್ಛ ಮಾಡಲಾಗಿದೆ. ಬಂದು ನಾಲ್ಕು ದಿನದಿಂದ ಬಿಸಿ ನೀರು ಸಿಗುತ್ತಿರಲಿಲ್ಲ. ಆದರೆ ಇವತ್ತಿನಿಂದ ಬಿಸಿ ನೀರು ಕೂಡ ಸಿಗುತ್ತಿದೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಮಗು ಅದಲು ಬದಲು ಪ್ರಕರಣದಿಂದ ಲೇಡಿಗೋಷನ್ ನ ಅವ್ಯವಸ್ಥೆ ಸುವ್ಯವಸ್ಥೆಯಾಗಿ ಮಾರ್ಪಟ್ಟಿದೆ ಎಂದರೆ ತಪ್ಪಾಗಲಾರದು. ಆರೋಗ್ಯ ಇಲಾಖೆಯ ಅಧಿಕಾರಿಗಳು ಕನಿಷ್ಠ ಎರಡು ವಾರಕ್ಕೆ ಒಮ್ಮೆಯಾದರೂ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ