ಬಿಜೆಪಿ ಸಂಸದನ ದೂರು | ಫೇಸ್ ಬುಕ್ ಗ್ರೂಪ್ ನಲ್ಲಿ ಬೇರೊಬ್ಬ ವ್ಯಕ್ತಿಯ ಕಾಮೆಂಟ್ ಗಾಗಿ ಪತ್ರಕರ್ತನ ಬಂಧನ!

Prasthutha|

ನವದೆಹಲಿ : ಲಡಾಖ್ ನ ಬಿಜೆಪಿ ಸಂಸದ ಜಮ್ಯಂಗ್ ತ್ಸೆರಿಂಗ್ ನಾಮ್ಗ್ಯಾಲ್ ನೀಡಿರುವ ಪೊಲೀಸ್ ದೂರಿನ ಆಧಾರದಲ್ಲಿ, ಜಮ್ಮು ಮೂಲದ ಖ್ಯಾತ ದಿನ ಪತ್ರಿಕೆ ‘ಸ್ಟೇಟ್ ನ್ಯೂಸ್’ನ ಲೇಹ್ ವರದಿಗಾರ ತ್ಸೆವಾಂಗ್ ರಿಗ್ಝಿನ್ ಅವರನ್ನು ಬಂಧಿಸಲಾಗಿದೆ. ಆದರೆ, ಇವರನ್ನು ಬಂಧಿಸಲಾಗಿರುವ ಕಾರಣ ವಿಚಿತ್ರವಾಗಿದೆ. ತಾವು ನಿರ್ವಹಿಸುವ ಫೇಸ್ ಬುಕ್ ಗ್ರೂಪ್ ಒಂದರಲ್ಲಿ ಇನ್ನೊಬ್ಬ ವ್ಯಕ್ತಿ ಬಿಜೆಪಿ ಸಂಸದನ ವಿರುದ್ಧ ಮಾಡಿದ ಪೋಸ್ಟ್ ಗಾಗಿ ರಿಗ್ಝಿನ್ ಅವರನ್ನು ಬಂಧಿಸಲಾಗಿದೆ

- Advertisement -

ರಿಗ್ಝಿನ್ ಅವರು ‘ಲಡಾಕ್ ಇನ್ ದ ಮೀಡಿಯಾ’ ಎಂಬ ಫೇಸ್ ಬುಕ್ ಗ್ರೂಪ್ ನಿರ್ವಹಿಸುತ್ತಿದ್ದಾರೆ. ಗ್ರೂಪ್ ನಲ್ಲಿ 34,000 ಸದಸ್ಯರಿದ್ದಾರೆ. ಸೆ.3ರಂದು ಓರ್ವ ಸದಸ್ಯ ಬಿಜೆಪಿ ಸಂಸದರ ವಿರುದ್ಧ ಕಾಮೆಂಟ್ ಹಾಕಿದ್ದ. ಆ ವ್ಯಕ್ತಿ ಯಾರೆಂಬುದನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಸೆ.5ರಂದು ಪೊಲೀಸರು ರಿಗ್ಝಿನ್ ಅವರನ್ನು ಬಂಧಿಸಿದ್ದಾರೆ. ಆ ಗ್ರೂಪ್ ನ ಅಡ್ಮಿನ್ ಎನ್ನುವ ಕಾರಣಕ್ಕಾಗಿ ರಿಗ್ಝಿನ್ ಅವರನ್ನು ಬಂಧಿಸಲಾಗಿದೆ. ಬಳಿಕ ಅದೇ ದಿನ ಸಂಜೆ ಅವರಿಗೆ ಜಾಮೀನು ದೊರಕಿದೆ.

ಆದರೆ, ಪೊಲೀಸ್ ದೂರಿನ ಪ್ರತಿ ರಿಗ್ಝಿನ್ ಗೆ ಲಭ್ಯವಾಗಿಲ್ಲ. ಐಪಿಸಿ 188ರಡಿ ಪ್ರಕಣ ದಾಖಲಾಗಿದೆ. ಪೊಲೀಸರು ತಮ್ಮ ಗಮನಕ್ಕೆ ತರುವವರೆಗೂ ತಾನು ಆ ಪೋಸ್ಟ್ ನೋಡಿರಲಿಲ್ಲ. ತಾವು ಅದನ್ನು ತಕ್ಷಣವೇ ಡಿಲೀಟ್ ಮಾಡುವೆ ಎಂದಾಗ ಪೊಲೀಸರು, ಹಾಗೆ ಮಾಡಬೇಡಿ, ಸಾಕ್ಷಿ ನಾಶ ಮಾಡಿದಂತಾಗುತ್ತದೆ ಎಂದಿದ್ದರು ಎಂದು ರಿಗ್ಝಿನ್ ಹೇಳುತ್ತಾರೆ. ಆ ನಂತರ ಪೊಲೀಸರು ಬಿಜೆಪಿ ಸಂಸದನ ದೂರಿನ ಆಧಾರದಲ್ಲಿ ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದರು ಎಂದು ಅವರು ಹೇಳಿದ್ದಾರೆ.

- Advertisement -

2019ರ ಮೇನಲ್ಲಿ ನಡೆದ ಲೋಕಸಭಾ ಚುನಾವಣೆಯ ವೇಳೆ, ಪತ್ರಿಕಾಗೋಷ್ಠಿಯೊಂದರಲ್ಲಿ ಬಿಜೆಪಿ ಗೆಲ್ಲುವಂತೆ ಪ್ರಭಾವ ಬೀರಲು ಲಂಚದ ಆಮಿಷವೊಡ್ಡಿದ್ದ ಜಮ್ಮು-ಕಾಶ್ಮೀರ ಬಿಜೆಪಿ ನಾಯಕ ವಿಕ್ರಮ್ ಸಿಂಗ್ ವಿರುದ್ಧ ಲೇಹ್ ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿಯಾಗಿ ರಿಗ್ಝಿನ್ ದೂರು ನೀಡುವುದು ಅನಿವಾರ್ಯವಾಗಿತ್ತು. ಆ ಚುನಾವಣೆಯಲ್ಲಿ ನಾಮ್ಗ್ಯಾಲ್ ಸಂಸದರಾಗಿ ಚುನಾಯಿತರಾಗಿದ್ದರು.

Join Whatsapp