ದ.ಕ. ಜಿಲ್ಲೆಯಲ್ಲಿ ಮಾಸ್ಕ್, ಗ್ಲೌಸ್ ಕೊರತೆ: ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಿಎಂ ಬೊಮ್ಮಾಯಿ

Prasthutha|

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾಸ್ಕ್, ಗ್ಲೌಸ್ ಕೊರತೆ ಇರುವುದನ್ನು ಗಮನಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಜಿಲ್ಲಾಧಿಕಾರಿ, ಆರೋಗ್ಯಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

- Advertisement -


ಗುರುವಾರ ಮಂಗಳೂರಿನಲ್ಲಿ ಕೋವಿಡ್ -19 ಪರಿಶೀಲನಾ ಸಭೆ ನಡೆಸಿದ ಮುಖ್ಯಮಂತ್ರಿಯವರು ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ ತೆಗೆದುಕೊಂಡ ಕ್ರಮಗಳ ಬಗ್ಗೆ ಪರಾಮರ್ಶೆ ನಡೆಸಿದರು.
ಸಭೆಯಲ್ಲಿ ಮಾಜಿ ಸಚಿವ ಖಾದರ್ ಅವರು ಜಿಲ್ಲೆಯ ಆರೋಗ್ಯ ಕಾರ್ಯಕರ್ತರಿಗೆ ಮಾಸ್ಕ್, ಗ್ಲೌಸ್ ಕೊರತೆ ಬಗ್ಗೆ ಧ್ವನಿ ಎತ್ತಿದ್ದರು.
ಆಗ ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಮುಖ್ಯಮಂತ್ರಿ ಸಮಗ್ರ ಮಾಹಿತಿ ಕೋರಿದರು. ಆದರೆ ಜಿಲ್ಲೆಗೆ ಎಷ್ಟು ಮಾಸ್ಕ್ ಖರೀದಿಸಲಾಗಿದೆ. ಎಷ್ಟು ಕೊರತೆಯಿದೆ ಎಂಬುದರ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳು ವಿಫಲರಾದಾಗ ಕೆಂಡಾಮಂಡಲರಾದ ಮುಖ್ಯಮಂತ್ರಿ, ಮಾಸ್ಕ್, ಗ್ಲೌಸ್ ಇಲ್ಲದೇ ಏನ್ ಆಡಳಿತ ಮಾಡ್ತೀರಾ ಇಲ್ಲಿ?. ಆರೋಗ್ಯ ಸಿಬ್ಬಂದಿಗೆ ಬೇಕಾದ ಸವಲತ್ತು ಕೊಡೋಕೆ ನಿಮ್ಮಿಂದ ಆಗಲ್ವಾ?. ಅಷ್ಟು ಕಾಮನ್ ಸೆನ್ಸ್ ಇಲ್ಲದೇ ಏನ್ರೀ ಮಾಡ್ತೀರಾ ನೀವು ಇಲ್ಲಿ ಎಂದು ತುಂಬಿದ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.

ಎಸ್ ಡಿಆರ್ ಎಫ್ ಫಂಡ್ ಪಡೆದು ಇವತ್ತೇ ಖರೀದಿ ಮಾಡಿ, ಎಲ್ಲವನ್ನೂ ಇಲ್ಲೇ ಸ್ಥಳೀಯವಾಗಿಯೇ ಖರೀದಿಸಿ ಸಂಜೆಯೊಳಗೆ ವರದಿ ಸಲ್ಲಿಸುವಂತೆ ತಾಕೀತು ಮಾಡಿದರು.

- Advertisement -

ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಗೂ ತರಾಟೆಗೆ ತೆಗೆದುಕೊಂಡ ಬೊಮ್ಮಾಯಿ, ಏನಯ್ಯ, ನೀನ್ ಏನ್ ಮಾಡ್ತಾ ಇದ್ದೀಯಾ ಇಲ್ಲಿ ?. ನಿನ್ನತ್ರ ಏನು ಸಮಸ್ಯೆ ಇದೆ. ಅದರ ಬಗ್ಗೆ ಡಿಸಿ ಗಮನಕ್ಕೆ ತರೋಕೆ ಗೊತ್ತಿಲ್ವಾ?. ಮೋಸ್ಟ್ ಸೀನಿಯರ್ ಹೆಲ್ತ್ ಆಫೀಸರ್ ಆಗಿದ್ರೂ ನೀನ್ ಏನ್ ನಿದ್ದೆ ಮಾಡ್ತಾ ಇದೀಯಾ ? ಮಾಸ್ಕ್, ಗ್ಲೌಸ್ ಎಷ್ಟು ಕೊರತೆ ಇದೆ ಅನ್ನುವ ಲೆಕ್ಕ ಇಡೋಕೆ ಆಗಲ್ವಾ ನಿಂಗೆ ? ನಿಮ್ಮ ಯಾವುದೇ ಸಮರ್ಥನೆ ನಂಗೆ ಬೇಡ, ಸಂಜೆಯೊಳಗೆ ನಂಗೆ ರಿಪೋರ್ಟ್ ಕೊಡಿ ಎಂದು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಜಿಲ್ಲೆಯ ಸಂಸದರು, ಸಚಿವರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Join Whatsapp