ಮೋದೀಜಿ ನೀವೆಷ್ಟು ಹೆದರಿರುವಿರಿ? ಟ್ವಿಟ್ಟರ್ ಖಾತೆ ಬ್ಲಾಕ್ ಮಾಡಿದ್ದಕ್ಕೆ ಕಾಂಗ್ರೆಸ್ ಟಾಂಗ್

Prasthutha|

ನವದೆಹಲಿ: ಮೋದಿಯವರೆ, ಈಗ ನೀವು ಅದೆಷ್ಟು ಹೆದರಿದ್ದೀರಿ? ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆ ಬ್ಲಾಕ್ ಆಗುತ್ತಲೇ ಕಾಂಗ್ರೆಸ್ ಪಕ್ಷವು ಇನ್ ಸ್ಟಾಗ್ರಾಂ ಮೂಲಕ ಪ್ರಶ್ನೆಯನ್ನು ಕೇಳಿದೆ.
ದೆಹಲಿಯಲ್ಲಿ ಕಳೆದ ವಾರ ನಡೆದ 9 ವರ್ಷ ಪ್ರಾಯದ ದಲಿತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಳಿಕ ರಾಹುಲ್ ಗಾಂಧಿಯವರು ಆ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದರು. ಈ ಕುರಿತ ಫೋಟೋಗಳು ರಾಹುಲ್ ಸೇರಿದಂತೆ ಇತರ ಐವರ ಟ್ವಿಟ್ಟರ್ ಖಾತೆ ಗಳಲ್ಲಿ ಪ್ರಕಟವಾಗಿತ್ತು. ಇದರಿಂದ ಆ ಖಾತೆಗಳನ್ನು ಟ್ವಿಟ್ಟರ್ ಸಂಸ್ಥೆ ತೆಗೆದು ಹಾಕಿ ಅವರ ಟ್ವಿಟ್ಟರ್ ಲಾಕ್ ಮಾಡಿದೆ.
ಇಂದಿನ ಇನ್ ಸ್ಟಾಗ್ರಾಂ ಪೋಸ್ಟ್ ನಲ್ಲಿ ಟ್ವಿಟ್ಟರ್ ನಿಯಮ ಮುರಿದಿರುವುದರಿಂದ ನಿಮ್ಮ ಖಾತೆ ಲಾಕ್ ಮಾಡಲಾಗಿದೆ ಎಂದಿರುವುದರ ಸ್ಕ್ರೀನ್ ಶಾಟ್ ತೋರಿಸಲಾಗಿದೆ. ಇತರರ ಖಾಸಗಿ ವಿಷಯವನ್ನು ಅನುಮತಿ ಇಲ್ಲದೆ ಅಧಿಕೃತವಲ್ಲದ್ದನ್ನು ಹಾಕುವುದು ನಮ್ಮ ನಿಯಮಕ್ಕೆ ವಿರೋಧವಾದುದು ಎಂದು ಟ್ವಿಟ್ಟರ್ ಹೇಳಿದೆ.
ಕಾಂಗ್ರೆಸ್ ಅಹಿಂಸೆ, ಸತ್ಯ ಮತ್ತು ಜನರ ನಂಬಿಕೆಯ ಮೇಲೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ. ನಾವಾಗ ಗೆದ್ದೆವು, ಈಗಲೂ ಗೆಲ್ಲುತ್ತೇವೆ. ಮೋದಿಯವರೇ ನೀವೇಕೆ ಅಷ್ಟು ಹೆದರಿದ್ದೀರಿ ? ಎಂದು ಇನ್ ಸ್ಟಾಗ್ರಾಂನಲ್ಲಿ ಕಾಂಗ್ರೆಸ್ ಕುಟುಕಿದೆ.
ಟ್ವಿಟ್ಟರ್ ವೆಬ್ ಸೈಟಿನ ಹೆಲ್ಪ್ ವಿಭಾಗದ ಮಾಹಿತಿಯಂತೆ ಲಾಕ್ ಆದ ಎಕೌಂಟಿನಿಂದ ಟ್ವೀಟ್ ಮಾಡುವಂತಿಲ್ಲ. ಆದರೆ ಫಾಲೋವರ್ಸ್ ಗಳಿಗೆ ಪ್ರತ್ಯೇಕವಾಗಿ ಮೆಸೇಜ್ ಕಳುಹಿಸಬಹುದು. ಲಾಕ್ ಎಕೌಂಟಿನಿಂದ ಟ್ವೀಟ್ ಮಾಡಲು, ಮರು ಟ್ವೀಟ್ ಮಾಡಲು, ಅಥವಾ ಲೈಕ್ ಮಾಡಲು ಸಾಧ್ಯವಿಲ್ಲ. ಫಾಲೋವರ್ ಗಳು ಹಳೆಯ ಪೋಸ್ಟ್ ಗಳನ್ನು ನೋಡಬಹುದು. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ರಾಹುಲ್ ಗಾಂಧಿಯವರ ಟ್ವೀಟ್ ಡಿಲೀಟ್ ಮಾಡುವಂತೆ ನೋಟೀಸು ನೀಡಿದ್ದು, ಟ್ವಿಟ್ಟರ್ ಖಾತೆ ಲಾಕ್ ಮಾಡಲು ಒಂದು ಕಾರಣವಾಗಿದೆ.
ಪತಿಪಕ್ಷಗಳ ಸ್ವರ ಅಡಗಿಸಲು ಬಿಜೆಪಿ ಜಾಲ ತಾಣಗಳ ಸೇವೆಯ ಮೇಲೆ ತನ್ನ ಕರಾಳ ಹಸ್ತ ಚಾಚಿದೆ ಎಂದು ಕಾಂಗ್ರೆಸ್ ಆಪಾದಿಸಿದೆ.

Join Whatsapp