ಬಹುಮತದ ಕೊರತೆ: ಪರಿಷತ್ ನಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡಿಸಲು ಧೈರ್ಯ ತೋರದ ಬಿಜೆಪಿ ಸರ್ಕಾರ

Prasthutha|


ಬೆಳಗಾವಿ: ವಿವಾದಿತ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ- 2021 ಅನ್ನು ಬಹುಮತವಿಲ್ಲದ್ದರಿಂದ ವಿಧಾನ ಪರಿಷತ್ ನಲ್ಲಿ ಮಂಡನೆ ಮಾಡಲು ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿಲ್ಲ.

- Advertisement -


2022ರ ಬಜೆಟ್ ಅಧಿವೇಶನದಲ್ಲಿ ಈ ವಿಧೇಯಕ ಚರ್ಚೆಗೆ ಬರುವ ಸಾಧ್ಯತೆ ಇದೆ.
ಗುರುವಾರ ವಿಪಕ್ಷಗಳ ವಿರೋಧದ ನಡುವೆಯೂ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಗಿತ್ತು. ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ಚರ್ಚೆ ಬರಬೇಕಾಗಿತ್ತು. ಆದರೆ, ಪರಿಷತ್ ನಲ್ಲಿ ಪೂರ್ಣ ಬಹುಮತವಿಲ್ಲದ್ದರಿಂದ ಅಲ್ಲಿ ಮಂಡಿಸುವ ಧೈರ್ಯವನ್ನು ಬಿಜೆಪಿ ತೋರಲಿಲ್ಲ.


ಇತ್ತೀಚೆಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ 11 ಸ್ಥಾನಗಳನ್ನು ಪಡೆದು ಪರಿಷತ್ ನಲ್ಲಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ನೂತನ ಸದಸ್ಯರ ಪ್ರಮಾಣವಚನ ಸ್ವೀಕಾರ ಇನ್ನೂ ನಡೆದಿಲ್ಲ. ಮುಂದಿನ ಅಧಿವೇಶನದ ಹೊತ್ತಿಗೆ ನೂತನ ಸದಸ್ಯರು ಪರಿಷತ್ ಪ್ರವೇಶಿಸಿರುತ್ತಾರೆ. ಇದನ್ನು ಮನಗಂಡ ರಾಜ್ಯ ಬಿಜೆಪಿ ಸರ್ಕಾರ ಈಗ ಪರಿಷತ್ ನಲ್ಲಿ ವಿಧೇಯಕ ಮಂಡಿಸಲು ಮುಂದಾಗಿಲ್ಲ ಎನ್ನಲಾಗಿದೆ. ಮಾತ್ರವಲ್ಲ ಪರಿಷತ್ ನಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಕೂಡ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಸರ್ಕಾರ ಈ ನಿಲುವು ತಾಳಿದೆ.

- Advertisement -


ಶುಕ್ರವಾರ ಮಧ್ಯಾಹ್ನ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ವಿದಾಯ ಭಾಷಣ ನೆರವೇರಿಸಿದರು. ಪರಿಷತ್ ಉಪಸಭಾಪತಿ ಪ್ರಾಣೇಶ್ ಅನಿರ್ದಿಷ್ಟಾವಧಿಗೆ ಕಲಾಪ ಮುಂದೂಡಿದರು.

Join Whatsapp