ಮಂಗಳೂರು: ನಗರದಲ್ಲಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಓರ್ವ ಕಾರ್ಮಿಕ ಸಾವನ್ನಪ್ಪಿ, ಮತ್ತೋರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡ ದುರ್ಘಟನೆಯನ್ನು ತನಿಖೆಗೊಳಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕಾಗಿದೆ ಎಂದು SDTU ರಾಜ್ಯ ಕಾರ್ಯದರ್ಶಿ ಖಾದರ್ ಫರಂಗಿಪೇಟೆ ಸರಕಾರವನ್ನು ಆಗ್ರಹಿಸಿದ್ದಾರೆ.
ನಗರದ ಹೃದಯ ಭಾಗದಲ್ಲಿ ನಿರ್ಮಾಣ ಕಾಮಗಾರಿ ವೇಳೆ ಈ ರೀತಿಯ ದುರ್ಘಟನೆ ನಡೆಯುವುದಾದರೆ ಕಟ್ಟಡ ಕಾರ್ಮಿಕರಿಗೆ ಯಾವ ರೀತಿಯ ಸುರಕ್ಷಾ ಕ್ರಮ ವಹಿಸಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಕಡಿಮೆ ಸಂಬಳ ಪಡೆದು ಉತ್ತರ ಭಾರತದವರು ಹೊಟ್ಟೆ ಪಾಡಿಗಾಗಿ ನಮ್ಮ ರಾಜ್ಯಕ್ಕೆ ಬಂದು ದುಡಿಯುವಾಗ ಅವರ ಜೀವಕ್ಕೆ ಬೆಲೆ ಕಲ್ಪಿಸಬೇಕಾಗಿದೆ. ಈ ದುರ್ಘಟನೆಯನ್ನು ತನಿಖೆಗೊಳಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕಾಗಿದೆ. ರಾಜ್ಯ ಸರಕಾರ ಮೃತ ಮತ್ತು ಗಾಯಗೊಂಡವರಿಗೆ ನ್ಯಾಯೋಚಿತ ಪರಿಹಾರ ನೀಡಬೇಕು. ಕಟ್ಟಡ ಕಾರ್ಮಿಕರಿಗೆ ಸೂಕ್ತ ಸುರಕ್ಷಾ ಕ್ರಮ ವಹಿಸಿ ಕಾಮಗಾರಿ ನಡೆಸಲು ಸರಕಾರ ಸೂಕ್ತ ಸುತ್ತೋಲೆ ಹೊರಡಿಸಬೇಕು ಎಂದು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.