ಕುಮಾರಸ್ವಾಮಿ ಜಾತ್ಯತೀತತೆಯ ಬಗ್ಗೆ ತಿಳಿದುಕೊಳ್ಳಬೇಕಾದ ಅಗತ್ಯವಿದೆ: ಮಹದೇವಪ್ಪ

Prasthutha|

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಜಾತ್ಯತೀತತೆಯ ಬ್ಯಾನರ್ ಹಾಗೂ ಇದರ ವ್ಯಾಪ್ತಿಯ ಬಗ್ಗೆ ತಿಳಿದುಕೊಳ್ಳಬೇಕಾದ ಅಗತ್ಯ ಸಾಕಷ್ಟಿದೆ ಎಂದು ಕಾಂಗ್ರೆಸ್  ಹಿರಿಯ ನಾಯಕ ಮಾಜಿ ಸಚಿವ ಡಾ. ಎಚ್. ಸಿ. ಮಹದೇವಪ್ಪ ಹೇಳಿದ್ದಾರೆ.

- Advertisement -

ಬಿಜೆಪಿಯನ್ನು ಸೋಲಿಸಲು, ತನಗಿಂತ ಹೆಚ್ಚು ಮತ ಹೊಂದಿರುವ ಜೆಡಿಎಸ್ ಅನ್ನು ಕಾಂಗ್ರೆಸ್ ಬೆಂಬಲಿಸಬೇಕು ಎಂಬ ತರ್ಕ ಬಳಸುವ ಕುಮಾರಸ್ವಾಮಿ ಅವರಿಗೆ 2018 ರ ಮೈತ್ರಿಯ ವೇಳೆ ಕಾಂಗ್ರೆಸ್ ಪಕ್ಷವು ಹೆಚ್ಚು ಮತ ಹೊಂದಿತ್ತು ಎಂಬ ಅಂಶವನ್ನು ಬದಿಗೆ ಸರಿಸಿ ತಾವೇ ಮುಖ್ಯಮಂತ್ರಿ ಆಗುತ್ತಾರೆ. ದಿನಕ್ಕೊಮ್ಮೆ ಗಂಟೆಗೊಮ್ಮೆ ಬದಲಾಗುವ ಇವರ ರೀತಿಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಸ್ವತಃ ಜೆಡಿಎಸ್ ಪಕ್ಷದ ಕಾರ್ಯಕರ್ತರೇ ಸೋತಿದ್ದು ಇವರ ಮೇಲೆ ನಂಬಿಕೆ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ ಎಂದರು.

ಮೈತ್ರಿ ಇಲ್ಲದಿದ್ದರೆ ರಾಜ್ಯಸಭೆಯಲ್ಲಿ ಸಂಖ್ಯೆಯ ಆಧಾರಿತವಾಗಿ ಬಿಜೆಪಿಯೇ ಗೆಲ್ಲುತ್ತಿತ್ತು ಎಂಬುದು ಎಲ್ಲರಿಗೂ ಗೊತ್ತಿದ್ದ ವಿಚಾರವಾಗಿತ್ತು. ಆದರೆ ಬಿಜೆಪಿ ಗೆಲ್ಲಲು ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಹೇಳುತ್ತಿರುವ ಕುಮಾರಸ್ವಾಮಿ ಅವರು, ಕಾಂಗ್ರೆಸ್ ಪಕ್ಷದ ಬೆಂಬಲ ಸಿಗಲಿಲ್ಲ ಎಂದು ಅವರ ಮೇಲೆಯೇ ಗೂಬೆ ಕೂರಿಸಲು ಹೊರಟಿರುವುದು ಹಾಸ್ಯಾಸ್ಪದ ಸಂಗತಿ ಎಂದು ಹೇಳಿದರು.

- Advertisement -

ರೈತ ವಿರೋಧಿಯಾಗಿದ್ದ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯ ವಿರುದ್ಧ ಸದನದ ಹೊರಗೆ ಪ್ರತಿಭಟಿಸಿ ಸದನದ ಒಳಗೆ ಬೆಂಬಲಿಸುವ ಮೂಲಕ ಮಹಾ ನಾಟಕ ಆಡಿದ್ದ ಜೆಡಿಎಸ್ ನವರು, ನಿರ್ದಿಷ್ಟ ಕೋಮಿನ ಜನರನ್ನು ಟಾರ್ಗೆಟ್ ಮಾಡಿಕೊಂಡು ಈಗಾಗಲೇ ಜಾರಿಯಲ್ಲಿದ್ದರೂ ಮತ್ತೊಮ್ಮೆ ಅದೇ ಕಾನೂನನ್ನು ರೂಪಿಸಲು ಹೊರಟಿದ್ದ ಮತಾಂತರ ನಿಷೇಧ ಕಾಯ್ದೆಯ ವಿರುದ್ಧ ದನಿ ಎತ್ತದೇ ಬೆಂಬಲಿಸಿದರು. ಜೊತೆಗೆ ಅತಿ ಹೆಚ್ಚಿನ ಗೋಮಾಂಸ ರಫ್ತು ಮಾಡುತ್ತಲೇ ಗೋಹತ್ಯೆ ನಿಷೇಧ ಎಂಬ ನಾಟಕವಾಡಿದ ಬಿಜೆಪಿಗರ ದ್ವಿಮುಖ ನೀತಿಯ ವಿರುದ್ದ ಮಾತನ್ನೇ ಆಡದ ಜೆಡಿಎಸ್ ನಲ್ಲಿ ಜಾತ್ಯತೀತತೆ ಮತ್ತು ಜನಪರ ನೀತಿ ಉಳಿದಿದೆ ಎಂದು ನಾವು ಭಾವಿಸುವುದಾದರೂ ಹೇಗೆ ಎಂದು ಕೇಳಿದರು.

ಅಧಿಕಾರ ಪಡೆಯುವದಕ್ಕೆ ಮಾತ್ರ ಜಾತ್ಯತೀತತೆ ಎಂಬ ಪದವನ್ನು ಬಳಸಿಕೊಳ್ಳುವ ಕುಮಾರಸ್ವಾಮಿ ಅವರಿಗೆ, ಜಾತ್ಯತೀತತೆ ಎಂಬುದು ಅಧಿಕಾರವನ್ನು  ಬಿಟ್ಟು ಕೊಡಬೇಕಾದಾಗಲೂ ಕೂಡಾ ಸಮನಾಗಿರುತ್ತದೆ ಎಂಬ ಅಂಶವು ಅರ್ಥ ಅರ್ಥವಾಗಬೇಕಲ್ಲವೇ? ಲೋಕಸಭೆಯಲ್ಲಿ ಸೋತ ದೇವೇಗೌಡರನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸಿ ರಾಜ್ಯಸಭೆಗೆ ಕಳಿಸಿದೆ. 37 ಸ್ಥಾನವಿದ್ದ ಜೆಡಿಎಸ್ ಗೆ ಮುಖ್ಯಮಂತ್ರಿ ಸ್ಥಾನವನ್ನೂ ನೀಡಿದೆ. ಈ ನಡೆಯನ್ನು ಜೆಡಿಎಸ್ ಗೌರವಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸದೇ ಇದ್ದ ಮೇಲೆ, ಅವರು ಯಾವ ಜಾತ್ಯತೀತತೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.

ಜಾತ್ಯತೀತ ರಾಜಕಾರಣ ಎಂಬುದು ಗಂಟೆಗೊಂದು ಸಲ ಬದಲಿಸುವ ಇವರ ಅಧಿಕಾರ ಮೋಹಿ ಮನಸ್ಥಿತಿಗೆ ಬಲಿಯಾಗುತ್ತದೆಯಲ್ಲಾ ಎಂದು ನೆನೆದು ಬೇಸರವಾಗುತ್ತಿದೆ. ಈ ಹಿಂದೆ ಜಾತ್ಯತೀತತೆ ಎಂದರೆ ಏನು ಎಂದು ಕೇಳಿದ್ದ ಕುಮಾರಸ್ವಾಮಿ ಅವರು ಜಾತ್ಯಾತೀತತೆಯ ಬ್ಯಾನರ್ ಮತ್ತು ಅದರ ವ್ಯಾಪ್ತಿಯ ಬಗ್ಗೆ ತಿಳಿದುಕೊಳ್ಳಬೇಕಾದ ಅಗತ್ಯ ಸಾಕಷ್ಟಿದೆ ಎಂದರು.



Join Whatsapp