ಐಎಎಸ್ ಜಗಳ: ಇಬ್ಬರು ಅಧಿಕಾರಿಗಳ “ಬಾಯಿಗೆ ಬೀಗ” ಹಾಕುವಂತಹ ಧೈರ್ಯವನ್ನಾದರೂ ಸರ್ಕಾರ ತೋರಲಿ: ಎಚ್‌ಡಿಕೆ

Prasthutha|

ಮೈಸೂರಿನಲ್ಲಿ ಅಧಿಕಾರಿಗಳಿಬ್ಬರ ನಡುವಣ ಸಂಘರ್ಷ ಐದಾರು ತಿಂಗಳಿಂದ ನಡೆಯುತ್ತಿದೆ. ಮುಖ್ಯಮಂತ್ರಿ ಅಥವಾ ಸರ್ಕಾರದ ದೌರ್ಬಲ್ಯದ ಕಾರಣದಿಂದಲೇ ಅಧಿಕಾರಿಗಳು ಸೂಪರ್ ಮ್ಯಾನ್ ಗಳಂತೆ ವರ್ತಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

- Advertisement -

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಇಬ್ಬರು ಐಎಎಸ್ ಅಧಿಕಾರಿಗಳ ಜಟಾಪಟಿಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ 24 ಮಂದಿಯ ಜೀವ ಬಲಿ ಪಡೆಯಲಾಯಿತು. ಅಂತಹದೇ ಪರಿಸ್ಥಿತಿ ಮೈಸೂರಿನಲ್ಲೂ ನಿರ್ಮಾಣವಾಗಿದೆ. ಅಮಾಯಕರನ್ನು ಬಲಿ ಪಡೆಯುವ ದೊಡ್ಡ ಅನಾಹುತ ಸಂಭವಿಸುವ ಮೊದಲು ಸರ್ಕಾರ ತನ್ನ ಜವಾಬ್ದಾರಿ ಪ್ರದರ್ಶಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೂಡಲೇ ಸರಕಾರ ಇಬ್ಬರೂ ಅಧಿಕಾರಿಗಳ “ಬಾಯಿಗೆ ಬೀಗ” ಹಾಕುವಂತಹ ಧೈರ್ಯವನ್ನಾದರೂ ತೋರಲಿ. ಇಲ್ಲದಿದ್ದರೆ, ನಾಳೆ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಮಾನ ಮರ್ಯಾದೆ ಹರಾಜಾದರೆ ಅದಕ್ಕೆ ಈಗಿನ ಸರಕಾರವೇ ಕಾರಣವಾಗಲಿದೆ. ಮಹಿಳಾ ಅಧಿಕಾರಿಗಳ ಜಗಳದಲ್ಲಿ ಜನಪ್ರತಿನಿಧಿಗಳು ಪರ ವಿರೋಧದ ಹೇಳಿಕೆಗಳನ್ನು ನೀಡಿ ತಮ್ಮ ಬಾಯಿಚಪಲ ತೀರಿಸಿ ಕೊಳ್ಳುತ್ತಿದ್ದಾರೆ. ಆದರೆ ಸರ್ಕಾರ ದಿವ್ಯ ಮೌನಕ್ಕೆ ಶರಣಾಗಿದೆ ಎಂದು ಎಚ್ ಡಿಕೆ ಕಿಡಿಕಾರಿದ್ದಾರೆ.

- Advertisement -

ಹೀಗೆ ಅಧಿಕಾರಿಗಳ ನಡುವೆ ಸಮನ್ವಯ ಇಲ್ಲದೆ ಪರಸ್ಪರ ಕಿತ್ತಾಡಿಕೊಂಡರೆ ಬೇರೆ ಬೇರೆ ಇಲಾಖೆಯಲ್ಲಿರುವವರು ನಾಳೆ ಇದೇ”ಹಾದಿ” ತುಳಿದರೆ ರಾಜ್ಯದ ಪರಿಸ್ಥಿತಿ ಏನಾಗಬಾರದು?. ಈ ಇಬ್ಬರು ಐಎಎಸ್ ಅಧಿಕಾರಿಗಳು ಇಷ್ಟೊಂದು ಬಹಿರಂಗವಾಗಿ ಪರಸ್ಪರ ಆರೋಪ-ಪ್ರತ್ಯಾರೋಪ ನಡೆಸುತ್ತ ಸರಕಾರಕ್ಕೆ ಮುಜುಗರ ಸೃಷ್ಟಿಸುತ್ತಿದ್ದರೂ ರಾಜ್ಯದ ಮುಖ್ಯಮಂತ್ರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಏನು ಮಾಡುತ್ತಿದ್ದಾರೆ?. ಸಾಂಸ್ಕೃತಿಕ ನಗರಿ ಮೈಸೂರಿನ ಜಿಲ್ಲಾಧಿಕಾರಿ ಹಾಗೂ ಅಲ್ಲಿನ ಪಾಲಿಕೆ ಆಯುಕ್ತರ ನಡುವೆ ನಡೆಸುತ್ತಿರುವ ಹಾದಿ- ಬೀದಿ ಜಗಳ ನೋಡಿದರೆ, ರಾಜ್ಯದಲ್ಲಿ ಸರಕಾರ ಅಸ್ತಿತ್ವದಲ್ಲಿದಿಯೋ ಇಲ್ಲವೋ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

Join Whatsapp