ಹಳೇ ನಿಯಮ ಬಿಟ್ಟು ವೈಜ್ಞಾನಿಕ ರೀತಿಯ ಪರಿಹಾರಕ್ಕೆ ಶಾಸಕ ಕುಮಾರಸ್ವಾಮಿ ಆಗ್ರಹ

Prasthutha|

ಹಾಸನ: ಕಳೆದ 40 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಸಕಲೇಶಪುರ-ಆಲೂರು ಭಾಗದಲ್ಲಿ ಸುಮಾರು 350 ಕೋಟಿ ನಷ್ಟವಾಗಿದೆ ಎಂದು ಸ್ಥಳೀಯ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಹೇಳಿದರು.

- Advertisement -

ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೆಲವೆಡೆ ವಾಡಿಕೆ ಮಳೆಗಿಂತ ನಾಲ್ಕುಪಟ್ಟು ಮಳೆಯಾಗಿದೆ. ಪರಿಣಾಮ ನಷ್ಟವೂ ಹೆಚ್ಚಾಗಿದೆ. ಇದಕ್ಕೆ ತುರ್ತಾಗಿ ಸೂಕ್ತ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ರಸ್ತೆ ಕೊಚ್ಚಿ ಹೋಗಿದೆ, ಕೆರೆ ಕಟ್ಟೆ ಏರಿ ಒಡೆದು ಮೆಕ್ಕೆ ಜೋಳ, ಭತ್ತ ಸೇರಿದಂತೆ ಅಪಾರ ಪ್ರಮಾಣದ ಬೆಳೆ ಹಾಳಾಗಿದೆ.

- Advertisement -

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಸ್‌ಡಿಆರ್‌ಎಫ್-ಎನ್‌ಡಿಆರ್‌ಎಫ್ ನಿಯಮಾವಳಿ ಬಿಟ್ಟು ನಷ್ಟಕ್ಕೆ ಸೂಕ್ತವಾದ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಎಸ್‌ಡಿಆರ್‌ಎಫ್-ಎನ್‌ಡಿಆರ್‌ಎಫ್ ನೀತಿ ಬದಲಾಗಬೇಕು, ರೈತರು, ಜನಸಾಮಾನ್ಯರ ದೃಷ್ಟಿಯಿಂದ ಆಮೂಲಾಗ್ರ ಬದಲಾವಣೆ ತರಬೇಕು. ಇದರಡಿ ನೀಡುತ್ತಿರುವ ಪರಿಹಾರ ಯಾವುದಕ್ಕೂ ಸಾಲದು ಎಂದರು.

ಮಲೆನಾಡು ಭಾಗದ ಎರಡೂ ತಾಲೂಕುಗಳಲ್ಲಿ 350 ಕೋಟಿ ನಷ್ಟವಾಗಿದೆ. ಸಕಲೇಶಪುರ ತಾಲೂಕಿನಲ್ಲಿ 123 ಲೋಕೋಪಯೋಗಿ, 60 ಜಿಪಂ ರಸ್ತೆ ಹಾಳಾಗಿವೆ. ಅಂಗನವಾಡಿ, ಕಟ್ಟಡ ಸೇರಿ 210 ಕೊಠಡಿ, 510 ಮನೆ ಕುಸಿದಿವೆ. ಆಲೂರು ತಾಲೂಕಿನಲ್ಲಿ 240 ಮನೆ ಕುಸಿದಿವೆ ಎಂದು ಅಂಕಿ ಅಂಶ ನೀಡಿದರು.

ಅನೇಕ ಕಡೆಗಳಲ್ಲಿ ಶೇ.50 ಕ್ಕೂ ಹೆಚ್ಚು ಹಳೆಯ ಮನೆಗಳಿವೆ. ಒಂದು ಪಂಚಾಯತ್‌ಗೆ 25 ಆಶ್ರಯ ಮನೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ಇದಕ್ಕಾಗಿ ಸರ್ಕಾರ ಅನುದಾನ ಕೊಡಬೇಕು. ಪ್ರತಿ ಗ್ರಾಮಗಳಲ್ಲಿ ಆಶ್ರಯ ಕಾಲೋನಿ ನಿರ್ಮಿಸಬೇಕು, ಮಲೆನಾಡು ಭಾಗದಲ್ಲಿ ಮುರಿದು ಬೀಳುವ ಎಷ್ಟೋ ಮರಗಳಿದ್ದು, ಅರಣ್ಯ ಇಲಾಖೆ ಇವುಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

ಆಲೂರು-ಸಕಲೇಶಪುರದಲ್ಲಿ ಶೇ. 60 ರಷ್ಟು ಕಾಫಿ ನಷ್ಟವಾಗಿದೆ. ಆದರೂ ಕಾಫಿಗೆ ವಿಮೆ ಸೌಲಭ್ಯ ಇಲ್ಲ. ಕಾಫಿಯನ್ನೂ ವಿಮೆ ವ್ಯಾಪ್ತಿಗೆ ಸೇರಿಸಬೇಕು. ಸಣ್ಣ ಹಿಡುವಳಿದಾರರಿಗೆ ಮಾತ್ರವಲ್ಲದೆ 10 ಹೆಕ್ಟೇರ್ ವರೆಗೂ ಪರಿಹಾರ ನೀಡಬೇಕು. ಮಲೆನಾಡು ಭಾಗದ ತಾಲೂಕುಗಳನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಮಂಜೇಗೌಡ, ನಾಗರಾಜ್ ಇತರರಿದ್ದರು.

ಮಲೆನಾಡು ಭಾಗದಲ್ಲಿ ಮಿತಿ ಮೀರಿರುವ ಕಾಡಾನೆ ಸಮಸ್ಯೆ ತಡೆಗಟ್ಟಲು ಹಲವು ಬಾರಿ ಅರಣ್ಯ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಸದನದಲ್ಲೂ ದನಿ ಎತ್ತಿದ್ದೇನೆ. ಆದರೆ ಯಾವುದೂ ಫಲಪ್ರದವಾಗಿಲ್ಲ. ಸರ್ಕಾರಗಳು ಶಾಶ್ವತ ಪರಿಹಾರ ಕಂಡು ಹಿಡಿಯೋವರೆಗೂ ಸಮಸ್ಯೆ ಹೀಗೆಯೇ ಇರಲಿದೆ. ಈ ವಿಚಾರದಲ್ಲಿ ಮಲೆನಾಡು ಭಾಗದ ಶಾಸಕರು ಒಗ್ಗಟ್ಟಾಗಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮೂಲಕ ಪ್ರಧಾನಿ ಅವರನ್ನು ಭೇಟಿ ಮಾಡುವ ಉದ್ದೇಶವೂ ಈಡೇರಿಲ್ಲ. ನನ್ನ ರಾಜೀನಾಮೆಯಿಂದ ಸಮಸ್ಯೆ ಬಗೆಹರಿಯುವುದಾದರೆ ರಾಜೀನಾಮೆಗೆ ಸಿದ್ಧ.

ಹಾಸನ ಜಿಲ್ಲಾ ಪ್ಲಾಂರ‍್ಸ್ ಅಸೋಸಿಯೇಷನ್ ಅಧ್ಯಕ್ಷ ಸುಬ್ರಹ್ಮಣ್ಯ ಮಾತನಾಡಿ, ವಾಡಿಕೆಗಿಂತ ಅಧಿಕ ಮಳೆಯಾಗಿರುವುದರಿಂದ 500 ಕೋಟಿಗೂ ಅಧಿಕ ಕಾಫಿ ನಷ್ಟವಾಗಿದೆ. ಇದಕ್ಕೆ ಶೀಘ್ರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಒಂದೇ ರೀತಿಯ ಮಾನದಂಡ ಬದಲು, ಖರ್ಚಿಗೆ ತಕ್ಕ ಪರಿಹಾರ ನೀಡಬೇಕು, ಕಾಫಿಯನ್ನೂ ವಿಮೆ ವ್ಯಾಪ್ತಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.

ಮಲೆನಾಡು ಭಾಗದಲ್ಲಿ 3 ದಶಕಗಳಿಂದಲೂ ದೊಡ್ಡ ಸಮಸ್ಯೆಯಾಗಿರುವ ಕಾಡಾನೆ ಸಮಸ್ಯೆಗೆ ಸೂಕ್ತ ಪರಿಹಾರ ಕಂಡು ಹಿಡಿಯಲು ಸರ್ಕಾರಕ್ಕೆ ಒಂದು ವರ್ಷ ಗುಡುವು ನೀಡುತ್ತೇವೆ. ಇದರೊಳಗೆ ಬಗೆ ಹರಿಸದಿದ್ದರೆ, ಮುಂದಿನ ಎಲ್ಲಾ ಚುನಾವಣೆ ಬಹಿಷ್ಕರಿಸಲು ಯೋಚಿಸಿದ್ದೇವೆ ಎಂದರು. ಅಲ್ಲದೆ ಹಾಸನ ಜಿಲ್ಲೆ ಆನೆಗಳ ವಾಸಕ್ಕೆ ಯೋಗ್ಯವಲ್ಲ ಎಂಬ ನ್ಯಾ. ಅಪ್ಪಯ್ಯ ವರದಿ ಅನುಷ್ಠಾನಕ್ಕೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ 15 ದಿನಗಳಲ್ಲಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡುವುದಾಗಿ ತಿಳಿಸಿದರು.

Join Whatsapp