ಹೆಚ್ಚಿದ ಕುಸಿತ ಭೀತಿ; ದೋಣಿಗಾಲ್ ಬಳಿ ಜಾರಿದ ಸಾವಿರಾರು ಲೋಡ್ ಮಣ್ಣು

Prasthutha|

ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯಾಘಾತ ಭೂಮಿ ಹಾಗೂ ಮನೆ ಕುಸಿತ ಭೀತಿಯನ್ನು ಹೆಚ್ಚು ಮಾಡಿದೆ.

- Advertisement -

ಸಕಲೇಶಪುರ ತಾಲೂಕಿನ ದೋಣಿಗಾಲ್ ಸಮೀಪ ಘಟನೆ ಭಾರೀ ಪ್ರಮಾಣದಲ್ಲಿ ಭೂಮಿ ಕುಸಿದಿದೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಕಾಮಗಾರಿಗಾಗಿ ಸುಮಾರು 5 ಸಾವಿರ ಲೋಡ್ ಮಣ್ಣು ಸುರಿಯಲಾಗಿತ್ತು.ಆದರೆ ನೀರು ಹರಿಯಲು ಪೈಪ್ ಅಳವಡಿಸದೆ ಅವೈಜ್ಞಾನಿಕವಾಗಿ ಮಣ್ಣು ಲೋಡ್ ಮಾಡಿದ್ದರಿಂದ ಅದೆಲ್ಲವೂ ಇಂದು ಮುಂಜಾನೆ ಜಾರಿ ಸಮೀಪದ ತೋಟ ತುಂಬಿಕೊಂಡಿದೆ.

ಇದರಿಂದ ದೊಡ್ಡಕೆರೆಯೂ ಒಡೆದು ನೀರು-ಮಣ್ಣು ಹರಿದು ಸುಮಾರು 50 ಎಕರೆಯಲ್ಲಿದ್ದ ಕಾಫಿ, ಭತ್ತ, ಅಡಕೆ ಮರಗಿಡ ಬುಡಮೇಲಾಗಿವೆ. ಸ್ಥಳಕ್ಕೆ ತಹಸೀಲ್ದಾರ್ ಜೈಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದಕ್ಕೆ ಕಾರಣರಾದ ರಾಜ್‌ಕಮಲ್ ಕಂಪೆನಿ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದರು.

- Advertisement -

ದೋಣಿಗಾಲ್ ಬಳಿ ಮಣ್ಣು ಕುಸಿದಿರುವುದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಾರಣ ಎಂದು ಆರೋಪಿಸಿ ಸ್ಥಳೀಯರು ರಸ್ತೆ ರಾಷ್ಟ್ರೀಯ ಹೆದ್ದಾರಿ 75ನ್ನು ಸುಮಾರು ಅರ್ಧಗಂಟೆ ಕಾಲ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರ ಮನವೊಲಿಸಲು ಪೊಲೀಸರು ಹರಸಾಹಸ ಪಟ್ಟರು. ಆದರೂ ಹೋರಾಟ ಕೈ ಬಿಡಲ್ಲ ಎಂದು ಪೊಲೀಸರ ಜೊತೆ ವಾಗ್ವಾದ ನಡೆಸಿದರು. ಮೇಲಧಿಕಾರಿಗಳು ಸ್ಥಳಕ್ಕೆ ಬರೋವರೆಗೂ ಹೋರಾಟ ಕೈ ಬಿಡಲ್ಲ ಎಂದು ಪಟ್ಟು ಹಿಡಿದರು. ಇದರಿಂದ ಪ್ರಯಾಣಿಕರು ಹಾಗೂ ವಾಹನ ಸವಾರರು ಪರದಾಡಿದರು. ಕಿಲೋ ಮೀಟರ್‌ಗಟ್ಟಲೆ ವಾಹನ ಸಾಲುಗಟ್ಟಿದ್ದವು.

ಸಕಲೇಶಪುರ ತಾಲೂಕಿನ ವೆಂಕಟಹಳ್ಳಿ- ಜಂಬರಡಿ ರಸ್ತೆ ಮೇಲೆ ಚಿತ್ತನಹಳ್ಳಿ ಹಳ್ಳ ತುಂಬಿ ಹರಿಯುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದರಿಂದ ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು ಪರದಾಡುವಂತಾಗಿದೆ. ಜೆಸಿಬಿ ಬಕೆಟ್ ಮೇಲೆ ನಿಂತು ಜೀವ ಕೈಯಲ್ಲಿ ಹಿಡಿದು ಶಾಲಾ ಮಕ್ಕಳು ಹಳ್ಳ ದಾಟಿದರು.

ಬೇಲೂರು ತಾಲೂಕಿನಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಕೆರೆ ಕಟ್ಟೆ ತುಂಬಿ ಹರಿಯುತ್ತಿವೆ. 8 ಗ್ರಾಮಗಳ ಕೆರೆ ಕೋಡಿ ಬಿದ್ದಿದ್ದರೆ, ನಿಡಗೋಡು, ಕೆರೆಗಳ ಹೆಚ್ಚುವರಿ ನೀರು ಭತ್ತದ ಗದ್ದೆಗಳ ಮೇಲೆ ನುಗ್ಗಿ ಹತ್ತಾರು ಎಕರೆ ಬೆಳೆ ಕೊಚ್ಚಿ ಹೋಗಿದೆ.

ಬೇಲೂರು ತಾಲೂಕು ಹೆಬ್ಬಾಳು ಗ್ರಾಮದಲ್ಲಿ ನಂಜೇಶ ಎಂಬುವರ ವಾಸದ ಮನೆ ಹಾಗೂ ದನದ ಕೊಟ್ಟಿಗೆ ಕುಸಿದಿವೆ. ಗೋಡೆ ಕುಸಿದಿದ್ದರಿಂದ ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿಯಾಗಿಲ್ಲ.

ಇನ್ನು ಭಾರೀ ಮಳೆಯಿಂದ ಆಲೂರು ತಾಲೂಕು ಬೆಳಮೆ ಗ್ರಾಮದ ಸಮೀಪ ಕೆರೆಯ ಕೆರೆ ಬಿರುಕು ಬಿಟ್ಟಿದ್ದು, ಒಡೆಯುವ ಆತಂಕ ಎದುರಾಗಿದೆ. ಮಡಬಲು-ಬೆಳಮೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೆರೆಯ ಏರಿ ರಸ್ತೆ ಕುಸಿದರೆ ನೂರಾರುಎಕರೆ ಪ್ರದೇಶ ಜಲಾವೃತವಾಗಲಿದೆ. ಪ್ರಸ್ತುತ ಪ್ರದೇಶಗಳಿಗೆ ಎಇಇ ನರಸಿಂಹಯ್ಯ, ಗ್ರಾಪಂ ಅಧ್ಯಕ್ಷರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

Join Whatsapp