ಸಾರಿಗೆ ನೌಕರರ ಮುಷ್ಕರ ಅಂತ್ಯ | ಬಸ್ ಸಂಚಾರ ಆರಂಭ; ನಾಳೆಯಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ

Prasthutha|

ಬೆಂಗಳೂರು : ತಾವು ಸಲ್ಲಿಸಿದ್ದ 10 ಬೇಡಿಕೆಗಳಲ್ಲಿ 9 ಬೇಡಿಕೆಗಳನ್ನು ಈಡೇರಿಸುವ ಲಿಖಿತ ಭರವಸೆ ದೊರೆತ ಬಳಿಕ ಸಾರಿಗೆ ನೌಕರರು ಮುಷ್ಕರ ಕೊನೆಗೊಳಿಸಲು ನಿರ್ಧರಿಸಿದ್ದಾರೆ. ಇಂದು ಮುಂಜಾನೆಯೇ ರೈತ ಮುಖಂಡ, ಸಾರಿಗೆ ನೌಕರರ ಚಳವಳಿಯ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಮುಷ್ಕರ ಇಂದು ಕೊನೆಗೊಳ್ಳುವ ಮುನ್ಸೂಚನೆ ನೀಡಿದ್ದರು.

- Advertisement -

ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಇಂದಿಗೆ ನಾಲ್ಕನೇ ದಿನಕ್ಕೆ ಕಾಲಿಟ್ಟಿತ್ತು. ಸಾರ್ವಜನಿಕರು ಸೇರಿದಂತೆ ಎಲ್ಲೆಡೆಯಿಂದ ಮುಷ್ಕರ ಕೊನೆಗೊಳಿಸಲು ಒತ್ತಡ ಹೆಚ್ಚುತಿತ್ತು. ಆದರೆ, ತಮ್ಮನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿ ಮುಷ್ಕರಕ್ಕೆ ಚಾಲನೆ ನೀಡಿದ್ದ ಸಾರಿಗೆ ನೌಕರರು, ತಮ್ಮ ಬೇಡಿಕೆ ಈಡೇರಿಸುವಂತೆ ಪಟ್ಟು ಹಿಡಿದಿದ್ದರು.
ಈ ನಡುವೆ ಸರಕಾರದ ಉನ್ನತ ಮಟ್ಟದ ಸಚಿವರು, ಅಧಿಕಾರಿಗಳ ಮಾತುಕತೆಯ ಬಳಿಕ ನೌಕರರ 10 ಬೇಡಿಕೆಗಳಲ್ಲಿ 9 ಬೇಡಿಕೆಗಳನ್ನು ಒಪ್ಪಲು ತೀರ್ಮಾನಿಸಲಾಯಿತು. ಆದರೆ, ಇದನ್ನು ಲಿಖಿತವಾಗಿ ಸಾರಿಗೆ ಸಚಿವ ಲಕ್ಷ್ಮಣ್ ಸವದಿಯವರೇ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ನೀಡಬೇಕೆಂಬ ಒತ್ತಾಯ ಕೇಳಿಬಂದಿತ್ತು.

ಆದರೆ, ಬಳಿಕ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಅವರನ್ನು ಕಳುಹಿಸಿ, ಲಿಖಿತ ಪತ್ರವನ್ನು ನೌಕರರ ಮುಖಂಡರಿಗೆ ಸರಕಾರ ಒಪ್ಪಿಸಿತು. ಈ ಹಿನ್ನೆಲೆಯಲ್ಲಿ, ತಮ್ಮ ಪಟ್ಟನ್ನು ಸಡಿಲುಗೊಳಿಸಿದ ನೌಕರ ಮುಖಂಡರು, ಮೂರು ತಿಂಗಳೊಳಗೆ ಈ ಬೇಡಿಕೆಗಳು ಈಡೇರಿಸಬೇಕೆಂಬ ಷರತ್ತಿನೊಂದಿಗೆ, ಪ್ರತಿಭಟನೆ ಕೈಬಿಡಲು ಮುಂದಾದರು.

- Advertisement -

ಹೀಗಾಗಿ, ಇಂದು ಈಗಾಗಲೇ ಕೆಲವು ಬಸ್ ಗಳು ಸಂಚಾರ ಆರಂಭಿಸಿದ್ದು, ನಾಳೆಯಿಂದ ಪೂರ್ಣ ಪ್ರಮಾಣದಲ್ಲಿ ಸಾರಿಗೆ ಬಸ್ ಗಳು ರಸ್ತೆಗಿಳಿಯಲಿವೆ ಎಂದು ವರದಿಗಳು ತಿಳಿಸಿವೆ.

Join Whatsapp