ದುಬೈ: ದುಬೈ ಸರ್ಕಾರದ ಕಮ್ಯುನಿಟಿ ಡೆವಲಪ್‌ಮೆಂಟ್ ಅಥಾರಿಟಿ (ಸಿಡಿಎ) ಯಲ್ಲಿ ನೋಂದಾಯಿತ ಸಂಸ್ಥೆಯಾಗಿರುವ ಕರ್ನಾಟಕ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ (ಕೆಎಸ್‌ಸಿಸಿ), ಯುಎಇ, ಆಗಸ್ಟ್ 21 ರಂದು ದುಬೈ ಅಲ್ ನಹದಾದ ಲ್ಯಾವೆಂಡರ್ ಹೋಟೆಲ್‌ನಲ್ಲಿ ಬೇಸಿಗೆ ಶಿಬಿರ-2022 ಅನ್ನು ಯಶಸ್ವಿಯಾಗಿ ಆಯೋಜಿಸಿತು.
ಯುವ ಮನಸ್ಸುಗಳಲ್ಲಿ ಆತ್ಮವಿಶ್ವಾಸ ಮೂಡಿಸುವುದರ ಜೊತೆಗೆ ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಅವರ ಜವಾಬ್ದಾರಿಯನ್ನು ಅರ್ಥಮಾಡಿಸಿಕೊಡುವುದು , ಸೃಜನಶೀಲ ಕೌಶಲ್ಯಗಳಿಗೆ ಒತ್ತು ನೀಡುವುದರ ಜೊತೆಗೆ ಭ್ರಾತೃತ್ವವನ್ನು ಬೆಳೆಸುವುದು ಮತ್ತು ಯುಎಇಯಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಸಮುದಾಯದಲ್ಲಿ ಬಾಂಧವ್ಯವನ್ನು ಬಲಪಡಿಸುವ ಉದ್ದೇಶದೊಂದಿಗೆ 5 ನೇ ತರಗತಿಯಿಂದ 9 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಕಾರ್ಯಕ್ರಮದ ಕುರಿತು ಸಂಘಟಕರು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಕಟಿಸುತ್ತಿದ್ದಂತೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯಿತು.ಹಲವು ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿ, ತಜ್ಞರಿಂದ ವಿವಿಧ ವಿಷಯಗಳ ಕುರಿತು ಮಾಹಿತಿಯನ್ನು ಪಡೆದರು.
ಎ.ಕೆ. ಬಿಲ್ಡಿಂಗ್ ಕಾಂಟ್ರಾಕ್ಟಿಂಗ್ ಇದರ ವ್ಯವಸ್ಥಾಪಕ ನಿರ್ದೇಶಕರಾದ ಮೊಹಮ್ಮದ್ ಶಾಫಿ ಹಾಗು ಲ್ಯಾವೆಂಡರ್ ಹೋಟೆಲ್ ಅಲ್ ನಹ್ದಾ ದುಬೈನ ಕ್ಲಸ್ಟರ್ ಮ್ಯಾನೇಜರ್ ಡೇವಿಡ್ ವಿಲಿಯಮ್ಸ್ ಬೇಸಿಗೆ ಶಿಬಿರವನ್ನು ಉದ್ಘಾಟಿಸಿದರು.
ಉದ್ಯಮಿ ನಾಸಿರ್ ಶೇಖ್ ರವರು ಸಂಪದ್ಭರಿತ ಭಾರತೀಯ ಇತಿಹಾಸವನ್ನು ಮೆಳುಕು ಹಾಕುವ ಮುಖಾಂತರ ಜ್ಞಾನ ಹಂಚಿಕೆ ಅಧಿವೇಶನಕ್ಕೆ ಚಾಲನೆಯನ್ನು ನೀಡಿದ್ದು, ಈ ಶಿಬಿರವು ಶಿಬಿರಾರ್ಥಿಗಳಲ್ಲಿ ಆತ್ಮ ಸ್ಥೈರ್ಯವನ್ನು ತುಂಬುವುದರ ಜೊತೆಗೆ ವೈಯುಕ್ತಿಕ ಜೀವನದಲ್ಲಿ ಸಹಕಾರಿಯಾಗಲಿ ಎಂದು ಶುಭ ಹಾರೈಸಿದರು.
ಪ್ರೈಮ್‌ಕೇರ್ ಸ್ಪೆಷಾಲಿಟಿ ಕ್ಲಿನಿಕ್ಸ್, ದುಬೈ ಇದರ ಡಾ.ಹಫ್ಸಾ ಖಾದಿರ್,ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ಉಪನ್ಯಾಸ ನೀಡುತ್ತಾ, ವೈಯಕ್ತಿಕ ನೈರ್ಮಲ್ಯಕ್ಕೆ ಪ್ರಾಮುಖ್ಯತೆಯನ್ನು ನೀಡಬೇಕೆಂದರು, ಉತ್ತಮ ವೈಯಕ್ತಿಕ ನೈರ್ಮಲ್ಯದಿಂದ ಶೀತ ಮತ್ತು ಜ್ವರದಂತಹ ಸಾಂಕ್ರಾಮಿಕ ರೋಗಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು ಮತ್ತು ರೋಗಗಳು ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ ಎಂದರು.
ಪ್ರಮುಖ ಭಾಷಣಕಾರರಾಗಿ ಆಗಮಿಸಿದ್ದ ದುಬೈ ಆದಮ್ ಮೆಡಿಕಲ್ ಸೆಂಟರ್ ಇದರ ತಜ್ಞ ವೈದ್ಯರಾದ ಡಾ. ಸಲೀಲ್ ಅಬ್ದುಲ್ ಕಲಾಂ, ವೈದ್ಯಕೀಯ ಕ್ಷೇತ್ರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಮುಖ ಪಾತ್ರದ ಕುರಿತು ವಿವರಿಸಿದರು. ವಿದ್ಯಾರ್ಥಿಗಳಿಗೆ ಮೌಲ್ಯಯುತ ವಿಜ್ಞಾನ ಶಿಕ್ಷಣವನ್ನು ನೀಡುವುದು ಬಹುದೊಡ್ಡ ಸವಾಲಾಗಿದೆ, ವಿಜ್ಞಾನವನ್ನು ಕಲಿಸಲು ಶಿಕ್ಷಕರು ಹೇಗೆ ಸಿದ್ಧರಾಗಿದ್ದಾರೆ ಮತ್ತು ವಿಜ್ಞಾನ ಶಿಕ್ಷಣವನ್ನು ಎಲ್ಲಿ ಪ್ರಾರಂಭಿಸಬೇಕು.ಇವುಗಳು ನಾವು ಕಾಳಜಿವಹಿಸಬೇಕಾದ ಪ್ರಶ್ನೆಗಳಾಗಿವೆ. ಮೌಲ್ಯಯುತ ಶಿಕ್ಷಣವು ಪ್ರಾಥಮಿಕ ಶಿಕ್ಷಣವನ್ನು ಅವಲಂಬಿಸಿರುವುದರಿಂದ ಶಾಲಾ ಶಿಕ್ಷಣದ ಪ್ರಾರಂಭದಲ್ಲಿಯೇ ವಿಜ್ಞಾನ ಶಿಕ್ಷಣವನ್ನು ಪ್ರಾರಂಭಿಸಲು ಒತ್ತನ್ನು ನೀಡುವುದು ಮುಖ್ಯವಾಗಿದೆ ಎಂದರು.
ನ್ಯೂಮೆರೊ ಯುನೊ ಟ್ರೈನಿಂಗ್ ಕನ್ಸಲ್ಟಿಂಗ್ ಅಬುಧಾಬಿ ಇದರ ತರಬೇತುದಾರರಾದ ಜನಾಬ್ ರಿಜ್ವಾನ್ ಅಹ್ಮದ್ ಅವರು ಸಾಮಾಜಿಕ ಸಮುದಾಯದಲ್ಲಿ ಭ್ರಾತೃತ್ವವನ್ನು ಎತ್ತಿಹಿಡಿಯುವ ಪಠ್ಯ ಮತ್ತು ಪಠ್ಯತರ ವಿಷಯಗಳ ಜೊತೆಗೆ ಮೋಜಿನ ಆಟಗಳೊಂದಿಗೆ ಮಕ್ಕಳ ಮನರಂಜಿಸುತ್ತಾ ಕಾರ್ಯಕ್ರಮದುದ್ದಕ್ಕೂ ಮಕ್ಕಳು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪ್ರೇರಣೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಜನಾಬ್ ಅಬ್ದುಲ್ಲಾ ಹುಸೇನ್ ಅಲ್ ಮಲಿಕ್, ಯುರೋಟೆಕ್ ಗ್ಯಾಸ್ ಸರ್ವಿಸಸ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕರಾದ ಪೌಲ್ ಪ್ರಭಾಹರ್, ಜನಾಬ್ ನವೀಲ್ ರಶೀದ್ , ದೀನ್ ಬ್ಯುಸಿನೆಸ್ ಸರ್ವಿಸಸ್ ವ್ಯವಸ್ಥಾಪಕ ನಿರ್ದೇಶಕರಾದ ಅನ್ವರ್ , ಜನಾಬ್ ನಾಸಿರ್ ಅಬ್ದುಲ್ ಖಾದರ್, ಸಯ್ಯದ್ ಇಫ್ತಿಕಾರ್, ಮಾಸ್ಟರ್ ರಾಹಿಲ್ ಮುಂತಾದವರು ಉಪಸ್ಥಿತರಿದ್ದರು.