ಸಮಾಜಸೇವೆಗಳೆಂದರೆ ಸಂಘಪರಿವಾರಕ್ಕೆ ಅಲರ್ಜಿಯೇನೋ ನಿಜ. ಆದರೆ ಇತರರು ಮಾಡುವ ಸಮಾಜಸೇವೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸದಿದ್ದರೂ ಕನಿಷ್ಟ ಪಕ್ಷ ಮೌನ ಪಾಲಿಸುವ ವಿವೇಕವೂ ಸಂಘಪರಿವಾರದ ಸದಸ್ಯರಿಗೆ ಇಲ್ಲವಾಗಿದೆ. ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನಲ್ಲಿ ಪಾಪ್ಯುಲರ್ ಫ್ರಂಟ್ ಸಂಘಟನೆ (PFI) ಕೋವಿಡ್ ಭಾದಿತ ಮೃತದೇಹಗಳ ವಿಲೇವಾರಿಗೆ ತಲಾ ರೂ.25,000 ಗಳಂತೆ ಹಣ ಸ್ವೀಕರಿಸಿದ್ದಾರೆ ಎಂದು ತಾಲೂಕಿನಾದ್ಯಂತ ಸಾಮಾಜಿಕ ತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ PFI ವಿರುದ್ಧ ಅಪಪ್ರಚಾರ ನಡೆಸಿದ್ದರು. ಇದು ಸಂಘಪರಿವಾರದ ಸದಸ್ಯರ ಕೃತ್ಯವೆನ್ನಲಾಗಿದ್ದು, PFI ಬಗ್ಗೆ ಜನರಿಗೆ ತಪ್ಪು ಸಂದೇಶ ನೀಡುವುದು ಇದರ ಹಿಂದಿರುವ ಅವರ ಉದ್ದೇಶವಾಗಿತ್ತು.
ಆದರೆ ಈ ಕುರಿತು ಕೆ ಆರ್ ಪೇಟೆ ತಾಲೂಕಿನ ತಹಶೀಲ್ದಾರ್ ಎಂ ಶಿವಮೂರ್ತಿಯವರು ಸ್ಪಷ್ಟೀಕರಣ ನೀಡಿದ್ದು, PFI ಮೇಲಿನ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದಾರೆ. PFI ಸಂಘಟನೆಯ ಸದಸ್ಯರು ತಮ್ಮ ಸ್ವಂತ ಖರ್ಚಿನಲ್ಲಿ ಮೃತದೇಹಗಳ ಅಂತ್ಯಸಂಸ್ಕಾರ ನಡೆಸಿದ್ದಾರೆ ಎಂದು ಅವರು ಈ ವೇಳೆ ಹೇಳಿದ್ದಾರೆ. PFI ಸಂಘಟನೆಯ ಕುರಿತು ಅಪಪ್ರಚಾರ ನಡೆಸುತ್ತಿದ್ದ ಸಂಘಪರಿವಾರಕ್ಕೆ ಇದರಿಂದಾಗಿ ತೀವ್ರ ಮುಖಭಂಗವಾದಂತಾಗಿದೆ.
PFI ಸಂಘಟನೆಯ ಮೇಲಿನ ಅಪವಾದಕ್ಕೆ ಪಟ್ಟಣದ ಮಿನಿ ವಿಧಾನಸೌಧದಲ್ಲಿ ವರದಿಗಾರರೊಂದಿಗೆ ಮಾತನಾಡಿದ ತಹಶೀಲ್ದಾರ್ ಶಿವಮೂರ್ತಿ, “ ಕೋವಿಡ್ ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಆರಂಭದಲ್ಲಿ ಯಾರೂ ತಯಾರಿರಲಿಲ್ಲ. ಅಂತಹಾ ಸಮಯದಲ್ಲಿ ಸಂಘಟನೆಯ ಸದಸ್ಯರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. 25,000 ರೂಪಾಯಿಗಳ ಅಪಪ್ರಚಾರ ಕಟ್ಟುಕಥೆಯಾಗಿದ್ದು, ಸತ್ಯಕ್ಕೆ ದೂರವಾದ ಮತ್ತು ಆಧಾರ ರಹಿತ ಸುದ್ದಿಯಾಗಿದೆ” ಎಂದು ಅವರು ಸ್ಪಷ್ಟಪಡಿಸಿದರು. ತಾಲೂಕು ಕಚೇರಿಯಾಗಲೀ, ಆರೋಗ್ಯಾಧಿಕಾರಿಗಳ ಕಡೆಯಿಂದಾಗಲೀ PFI ಸಂಘಟನೆಯವರ ಸಮಾಜಸೇವೆಗೆ ಹಣ ನೀಡಿರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಸಂಕಷ್ಟದ ಸಮಯದಲ್ಲಿ ತಾಲೂಕು ಆಡಳಿತದ ಜೊತೆಗೆ ಕೈಜೋಡಿಸಿ, ಅವರ ಸ್ವಂತ ಖರ್ಚಿನಲ್ಲಿ ವಾಹನಕ್ಕೆ ಡೀಸೆಲ್ ಹಾಕಿ ಸೇವೆ ಮಾಡುತ್ತಾ ಬಂದಿರುವ ಪಾಪ್ಯುಲರ್ ಫ್ರಂಟ್ ಸಂಘಟನೆ ನಿಜಕ್ಕೂ ಒಂದು ಪ್ರಾಮಾಣಿಕ ಸಂಘಟನೆ. ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಂಘಟನೆಯ ಕುರಿತು ವದಂತಿ ಸೃಷ್ಟಿ ಸಲ್ಲದು. PFI ಸದಸ್ಯರು ಇತರರ ವದಂತಿಗಳಿಗೆ ಕಿವಿಗೊಡದೆ ನಿಮ್ಮ ಸೇವೆಯನ್ನು ಸುದೀರ್ಘವಾಗಿ ಮುಂದುವರೆಸಿಕೊಂಡು ಹೋಗಿ” ಎಂದು ಸಲಹೆ ನೀಡಿದ್ದಾರೆ.