ಬಿಜೆಪಿಯವರು ನನ್ನನ್ನು ತಿಹಾರ್ ಜೈಲಿಗಾದರೂ ಕಳುಹಿಸಲಿ, ಪರಪ್ಪನ ಅಗ್ರಹಾರಕ್ಕಾದರೂ ಕಳುಹಿಸಲಿ: ಡಿಕೆಶಿ

Prasthutha|

ಶಿವಮೊಗ್ಗ: ಬಿಜೆಪಿ ಸರ್ಕಾರ ಎಲ್ಲಾ ನೇಮಕಾತಿಗಳಲ್ಲಿ ಹಗರಣ ಮಾಡುವ ಮೂಲಕ ರಾಜ್ಯಕ್ಕೆ ಅನ್ಯಾಯ, ಯುವಕರಿಗೆ ದ್ರೋಹ ಬಗೆದಿದೆ. ಸಚಿವ ಅಶ್ವತ್ಥ ನಾರಾಯಣ್ ಅವರು ನಕಲಿ ಸರ್ಟಿಫಿಕೇಟ್ ಕೊಟ್ಟಿರುವ ವಿಚಾರವಾಗಿ ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಇವರ ಎಲ್ಲ ಅಕ್ರಮಗಳನ್ನು ಸರ್ಕಾರ ಬಹಳ ಗೌಪ್ಯವಾಗಿ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.

- Advertisement -

ಇಂದು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪನವರು ಯಾವುದೇ ತಪ್ಪು ಮಾಡಿಲ್ಲ, ಅವರು ನಿರ್ದೋಷಿಯೆಂದು ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿಗಳು ಈಗಾಗಲೇ ಪ್ರಮಾಣಪತ್ರ ನೀಡಿದ್ದಾರೆ. ಸಣ್ಣಪುಟ್ಟ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ವಿರುದ್ಧ ಕ್ರಮ ಕೈಗೊಂಡು ಸಚಿವರ ಎಲ್ಲ ಅಕ್ರಮಗಳನ್ನು ಮುಚ್ಚಿ ಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಬಿಜೆಪಿಯವರು ನನ್ನನ್ನು ತಿಹಾರ್ ಜೈಲಿಗಾದರೂ ಕಳುಹಿಸಲಿ, ಪರಪ್ಪನ ಅಗ್ರಹಾರ ಜೈಲಿಗಾದರೂ ಕಳುಹಿಸಲಿ , ಎಲ್ಲಿಗಾದರೂ ಕಳುಹಿಸಲಿ, ಸಚಿವರು ಅಧಿಕಾರಿಗಳಿಗೆ ಫೋನ್ ಕರೆ ಮಾಡಿ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪಿಗಳ ತನಿಖೆ ನಡೆಸದಂತೆ ಒತ್ತಡ ಹಾಕಿರುವ ಸಂಗತಿಗಳು ಬಹಿರಂಗವಾಗಿವೆ. ಅಕ್ರಮದಲ್ಲಿ ಭಾಗಿಯಾಗಿರುವ ಕೆಲವರನ್ನು ಬಂಧಿಸಿ ವಿಚಾರಣೆ ಮಾಡಿದರೆ, ಮತ್ತೆ ಕೆಲವರನ್ನು ವಿಚಾರಣೆ ಮಾಡದೆ ಬಿಡುಗಡೆ ಮಾಡಲಾಗಿದೆ. ಇನ್ನು ಮಲ್ಲೇಶ್ವರಂ ಕ್ಷೇತ್ರದಲ್ಲಿ ಒಬ್ಬರಿಗೆ ನೆರವು ನೀಡಲು ಸರಕಾರಿ ಆದೇಶವನ್ನೇ ಬದಲಿಸಲಾಗಿದೆ ಎಂದು ಆರೋಪಿಸಿದ್ದಾರೆ.

- Advertisement -

ಕಾಂಗ್ರೆಸ್ ಪಾದಯಾತ್ರೆ, ಪ್ರತಿಭಟನೆಗಳು ಕೇವಲ ಚುನಾವಣೆ ಗಿಮಿಕ್ ಎಂದು ಗೃಹ ಸಚಿವ ಅರಗ ಜ್ಞಾನೆಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ‘ನಮ್ಮ ಪಾದಯಾತ್ರೆ ಗಿಮಿಕ್ ಎನ್ನುವುದಾದರೆ, ಲಾಲಕೃಷ್ಣ ಅಡ್ವಾಣಿ ಅವರು ಮಾಡಿದ ರಥಯಾತ್ರೆಯನ್ನು ಏನೆಂದು ಕರೆಯಬೇಕು? ಯಡಿಯೂರಪ್ಪನವರ ಯಾತ್ರೆಗಳನ್ನು ಏನೆಂದು ಕರೆಯಬೇಕು?’ ಎಂದು ತಿರುಗೇಟು ನೀಡಿದ್ದಾರೆ.

ಶಿವಮೊಗ್ಗ ಜಿಲ್ಲೆಗೆ ವಿಶೇಷ ಭೇಟಿ ನೀಡಲಾಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಖಂಡಿತವಾಗಿಯೂ ಇದು ವಿಶೇಷ ಭೇಟಿ, ರಾಜ್ಯದ ಜನತೆಯ ಭಾವನೆ, ಶಿವಮೊಗ್ಗ ಜನರ ನೋವನ್ನು ಆಲಿಸಿ, ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗುವುದು. ಮಲೆನಾಡಿನ ಈ ಭಾಗದ ಜನರು ಸಾಕಷ್ಟು ವಿದ್ಯಾವಂತರು, ಬುದ್ಧಿವಂತರಾಗಿದ್ದು, ನಾವು ಅವರ ಜೊತೆಗಿದ್ದು ರಕ್ಷಣೆ ನೀಡುತ್ತೇವೆ ಎಂದು ಹೇಳಲು ಇಲ್ಲಿಗೆ ಬಂದಿದ್ದೇವೆ ಎಂದು ಹೇಳಿದ್ದಾರೆ.

ಬಿಜೆಪಿಯವರ ಅಧಿಕಾರದಲ್ಲಿ ಏನಾಗಿದೆ ಎಂದು ಜನ ನೋಡಿದ್ದಾರೆ. ಶಿವಮೊಗ್ಗದಲ್ಲಿ ಸೆಕ್ಷನ್ 144 ಯಾಕೆ ಜಾರಿಗೆ ಬಂದಿತು? ಶಿವಮೊಗ್ಗದಲ್ಲಿ ಮತ್ತೊಂದು ಕೋಮು ಗಲಭೆ ಸೃಷ್ಟಿಗೆ ನಡೆಸಲಾಗಿದ್ದ ಪ್ರಯತ್ನವನ್ನು ಪೊಲೀಸ್ ಅಧಿಕಾರಿಗಳು ತಡೆದಿದ್ದು, ಎಲ್ಲವೂ ಬಹಿರಂಗವಾಗಿದೆ. ರಾಜ್ಯ ಸರ್ಕಾರ ಶಿವಮೊಗ್ಗದಲ್ಲಿ ಸೆಕ್ಷನ್ 144 ಜಾರಿ ಮಾಡಿದ ನಂತರ ಇಲ್ಲಿ ಆಗಿದ್ದು ಏನು? ಈಗ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಮಾಡಲಿ. ಯಡಿಯೂರಪ್ಪ ಹಾಗೂ ಈಶ್ವರಪ್ಪ ನವರ ನೇತೃತ್ವದಲ್ಲಿ ಈ ಸಮಾವೇಶ ನಡೆಯಲಿ. ಆ ಮೂಲಕ ಶಿವಮೊಗ್ಗದಲ್ಲಿ ಮುಚ್ಚಲಾಗುತ್ತಿರುವ ಕೈಗಾರಿಕೆಗಳು ಹಾಗೂ ಹೊಸ ಕೈಗಾರಿಕೆಗಳು ಆರಂಭವಾಗುವಂತೆ ಮಾಡಲಿ’ ಎಂದು ಸವಾಲೆಸೆದಿದ್ದಾರೆ.

ಆಜಾನ್ ವಿಚಾರದಲ್ಲಿ ಉತ್ತರಪ್ರದೇಶ ಮಾದರಿಯನ್ನು ರಾಜ್ಯದಲ್ಲಿ ಜಾರಿಗೆ ತರುತ್ತೇವೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಧರ್ಮದ ಆಚರಣೆ ವಿಚಾರವಾಗಿ ಸುಪ್ರೀಂಕೋರ್ಟ್ ಈಗಾಗಲೇ ತೀರ್ಮಾನ ಕೈಗೊಂಡಿದ್ದು, ಅದಕ್ಕೆ ಕಾನೂನು ಇದೆ. ಮೊದಲ ಕಾನೂನು ಕಾಪಾಡಿಕೊಂಡು, ಈ ಕಾನೂನಿನ ಉಲ್ಲಂಘನೆ ಮಾಡುತ್ತಿರುವ ಬಿಜೆಪಿ ಪಕ್ಷದ ಅಂಗ ಸಂಸ್ಥೆಗಳು ವಿರುದ್ಧ ಕಠಿಣ ಕ್ರಮ ಕೈಗೊಂಡು ಅವರನ್ನು ಒಳಗೆ ಹಾಕಲಿ ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಶಿವಮೊಗ್ಗ ಜಿಲ್ಲೆಯಲ್ಲಿ ಏಳಕ್ಕೆ ಏಳು ಕ್ಷೇತ್ರಗಳಲ್ಲಿಯೂ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Join Whatsapp