ಸರ್ಕಾರದ ದುರಾಡಳಿತದ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ಜೈಲಿಗಟ್ಟಿದ ಕೊಪ್ಪಳ ಪೊಲೀಸರ ನಡೆ ಖಂಡನೀಯ; ಕ್ಯಾಂಪಸ್ ಫ್ರಂಟ್

Prasthutha|

►ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದಿದ್ದಲ್ಲಿ “ಕೊಪ್ಪಳ ಚಲೋ”

- Advertisement -

ಬೆಂಗಳೂರು: ರಾಜ್ಯ ಸರ್ಕಾರದ ದುರಾಡಳಿತ ಹಾಗೂ ತಾರತಮ್ಯ ಧೋರಣೆಯ ವಿರುದ್ಧ ಪ್ರತಿಭಟಿಸಿದ ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಚಾಂದ್ ಸಲ್ಮಾನ್ ಸೇರಿದಂತೆ ಕೊಪ್ಪಳ ಜಿಲ್ಲೆಯ ಕಾರ್ಯಕರ್ತರ ಬಂಧನ ಖಂಡನೀಯ ಎಂದು ಕ್ಯಾಂಪಸ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಸರ್ಫರಾಝ್ ಗಂಗಾವತಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರವು ಒಂದು ವರ್ಷದಿಂದ ದ್ವೇಷ, ತಾರತಮ್ಯದ ಆಡಳಿತ ನಡೆಸುತ್ತಿದ್ದು, ಇದನ್ನು ವಿರೋಧಿಸಿ ಸಂವಿಧಾನಾತ್ಮಕವಾಗಿ ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ಬಂಧನ ಮಾಡಿ ಹಿಂಸಿಸಿ ಜೈಲಿಗಟ್ಟಿದ ಕೊಪ್ಪಳ ಪೊಲೀಸರ ಕ್ರಮ ಖಂಡನೀಯ. ತಕ್ಷಣ ಬಂಧಿತ ವಿದ್ಯಾರ್ಥಿಗಳ ಮೇಲೆ ದಾಖಲಿಸಿದ ಕೇಸನ್ನು ವಾಪಸು ಪಡೆದು ಬಿಡುಗಡೆಗೊಳಿಸಬೇಕು. ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಪೊಲೀಸರ ಮೇಲೆ ಕ್ರಮ ಕೈಗೊಂಡು ಅಮಾನತ್ತುಗೊಳಿಸಬೇಕೆಂದು ಆಗ್ರಹಿಸುತ್ತಾ ಈ ದಿನ ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆಯನ್ನು ನೀಡಿದ್ದೇವೆ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಕೊಪ್ಪಳ ಚಲೋ ದಂತಹ ಹೋರಾಟಗಳನ್ನು ನಡೆಸಬೇಕಾಗಿತು ಎಂದು ಎಚ್ಚರಿಸಿದರು.

- Advertisement -

ರಾಜ್ಯ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದು, ಅದರಲ್ಲೂ ಬಸವರಾಜ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೇರಿದ ನಂತರ ಆರೆಸ್ಸೆಸ್ ನ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಈ ಒಂದು ವರ್ಷದ ಬೊಮ್ಮಾಯಿ ಆಡಳಿತದಲ್ಲಿ ದಿನನಿತ್ಯ ವಿವಿಧ ವಿವಾದಗಳು ರಾಜ್ಯದಲ್ಲಿ ಕಂಡುಬಂದಿದ್ದು ಗಮನಿಸಬಹುದಾಗಿದೆ. ಶೈಕ್ಷಣಿಕ ರಂಗದಲ್ಲಾಗಲಿ, ಸಾಮಾಜಿಕ ರಂಗದಲ್ಲಾಗಲಿ ಅಭಿವೃದ್ಧಿಯ ವಿಷಯದಲ್ಲಾಗಲಿ ಯಾವುದೇ ಬೆಳವಣಿಗೆಗಳು ಈ ಅವಧಿಯಲ್ಲಿ ಕಂಡುಬಂದಿಲ್ಲ. ಬದಲಾಗಿ 40% ಕಮಿಷನ್ ದಂಧೆ, ಭ್ರಷ್ಟಾಚಾರ, ಹಿಜಾಬ್, ಹಲಾಲ್, ವ್ಯಾಪಾರ ವಹಿವಾಟು ನಿರ್ಬಂಧ, ಪಿಎಸ್ ಐ ಹಗರಣ, ಮೊಟ್ಟೆ ಹಗರಣ, ಸಮವಸ್ತ್ರ ಹಗರಣ, ಪ್ರಚೋದನಾಕಾರಿ ಭಾಷಣಗಳು ಇದೀಗ ಇದನ್ನೆಲ್ಲಾ ಮರೆಮಾಚಲು ಶವ ರಾಜಕೀಯ ನಡೆಸಲು ಬೊಮ್ಮಾಯಿ ಸರ್ಕಾರ ಮುಂದಾಗಿದೆ. ಅದರಲ್ಲೂ ಅಲ್ಪಸಂಖ್ಯಾತರನ್ನು ನೇರವಾಗಿ ಗುರಿಯಾಗಿಸಿದ ಸರ್ಕಾರ ರಾಜ್ಯದ ಅಲ್ಪಸಂಖ್ಯಾತರಿಗೆ ಮುಖ್ಯಮಂತ್ರಿ ಇದ್ದಾರೋ? ಎಂಬ ಸಂಶಯ ಮೂಡಿದೆ ಎಂದು ಸರ್ಫರಾಝ್ ಆರೋಪಿಸಿದರು.

ರಾಜ್ಯ ಕಾರ್ಯದರ್ಶಿ ಅಲ್ತಾಫ್ ಹೊಸಪೇಟೆ ಮಾತನಾಡಿ, ದ.ಕ ಜಿಲ್ಲೆಯಲ್ಲಿ ಮೂರು ಸರಣಿ ಹತ್ಯೆಗಳು ನಡೆದಿದ್ದರೂ ಪರಿಹಾರ ಒದಗಿಸುವುದರಲ್ಲೂ ತಾರತಮ್ಯ ಧೋರಣೆಯನ್ನು ತಾಳಿರುವ ಸಿಎಂ ಬೊಮ್ಮಾಯಿ ಯಾರನ್ನು ಸಂತೋಷ ಪಡಿಸಲು ಹೊರಟಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು. ಆದರೆ ಇದನ್ನೆಲ್ಲಾ ಖಂಡಿಸಿ ಪ್ರಜಾಸತ್ತಾತ್ಮಕವಾಗಿ ಬೀದಿಗಿಳಿಯುವವರ ಧ್ವನಿಯನ್ನು ಅಡಗಿಸುವ ಪ್ರಯತ್ನವನ್ನು ಸರ್ಕಾರ ನಡೆಸುತ್ತಿದೆ. ಈ ಬೊಮ್ಮಾಯಿ ಸರ್ಕಾರದ ದುರಾಡಳಿತ ಕೊನೆಗೊಳ್ಳಬೇಕಾಗಿದೆ. ಸರ್ಕಾರ ತಮ್ಮ ಅಧಿಕಾರವನ್ನು ಎಷ್ಟೇ ದುರುಪಯೋಗಪಡಿಸಿ ಭಿನ್ನಧ್ವನಿಗಳನ್ನು ದಮನಿಸಲು ಪ್ರಯತ್ನಿಸಿದರೂ ರಾಜ್ಯ ಸರ್ಕಾರದ ಈ ದ್ವೇಷ ಆಡಳಿತವನ್ನು ಬೀದಿ ಬೀದಿಗಳಲ್ಲಿ ವಿದ್ಯಾರ್ಥಿ ಸಮೂಹ ಇನ್ನೂ ಕೂಡ ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸಲಿದೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಝುಬೈರ್ ಬೆಂಗಳೂರು ಹಾಗೂ ಬೆಂಗಳೂರು ಜಿಲ್ಲಾಧ್ಯಕ್ಷ ಆಕಿಬ್ ಬೆಂಗಳೂರು ಉಪಸ್ಥಿತರಿದ್ದರು.

Join Whatsapp