ರಿಯಾದ್: ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಮೃತಪಟ್ಟ ಕರ್ನಾಟಕದ ಕೊಪ್ಪ ಮೂಲದ ವ್ಯಕ್ತಿಯ ಅಂತ್ಯಕ್ರಿಯೆಗೆ ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ ನೆರವಾಗಿದೆ.
ಸುಮಾರು 8 ವರ್ಷಗಳಿಂದ ರಿಯಾದ್ ನಲ್ಲಿರುವ ಖಾಸಗಿ ಕಂಪೆನಿಯೊಂದರಲ್ಲಿ ಚಾಲಕನಾಗಿ ದುಡಿಯುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ 30 ವರ್ಷ ಪ್ರಾಯದ ಮೊಮಿನ್ ಮುಮ್ತಾಝ್ ಎಂಬವರು ಫೆಬ್ರವರಿ 2 ಬುಧವಾರದಂದು ತನ್ನ ಕಾರಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಆಸ್ಪತ್ರೆಯಲ್ಲಿರುವ ಮೃತದೇಹದ ಅಂತ್ಯಕ್ರಿಯೆ ನೆರವೇರಿಸುವ ಹಿನ್ನೆಲೆಯಲ್ಲಿ ಮೃತರ ಸಂಬಂಧಿಕರಾದ ನೂರ್ ಅಹ್ಮದ್ ಹುಸೈನ್ ಅಬ್ದುಲ್ ರಹಮಾನ್ ಅವರು ಇಂಡಿಯನ್ ಸೋಶಿಯಲ್ ಫೋರಂನ ಸದಸ್ಯರನ್ನು ನೆರವಿಗಾಗಿ ಸಂಪರ್ಕಿಸಿದ್ದರು.
ಇಂಡಿಯನ್ ಸೋಶಿಯಲ್ ಫೋರಂನ ನಿಝಾಮ್ ಬಜ್ಪೆ ಅವರ ನೇತೃತ್ವದ ತಂಡವು ತಕ್ಷಣವೇ ಸ್ಪಂದಿಸಿ ಸೌದಿ ಅರೇಬಿಯಾದ ಕಾನೂನಿನಂತೆ ಸ್ಥಳೀಯ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಮೊಮಿನ್ ಮುಮ್ತಾಝ್ ರ ಮರಣವು ಸಹಜ ಮರಣವೆಂದು ದೃಢೀಕರಣ ಪತ್ರ ಪಡೆಯಲಾಯಿತು. ಬಳಿಕ ಮೃತದೇಹವನ್ನು ಪಡೆಯುಲು ರಿಯಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಊರಿನಲ್ಲಿರುವ ಮೃತರ ಸಂಬಂಧಿಗಳನ್ನು ಸಂಪರ್ಕಿಸಿ ನೂರ್ ಅಹ್ಮದ್ ಹುಸೈನ್ ಅಬ್ದುಲ್ ರಹಮಾನ್ ಅವರ ಹೆಸರಿನಲ್ಲಿ ಅಧಿಕಾರ ಪತ್ರವನ್ನು ಭಾರತೀಯ ರಾಯಭಾರ ಕಚೇರಿಯ ಮೂಲಕ ಪಡೆದು, ಅಂತಿಮವಾಗಿ ಮೃತದೇಹವನ್ನು ಆಸ್ಪತ್ರೆಯಿಂದ ಪಡೆಯಲಾಯಿತು.
ಶುಕ್ರವಾರ, ರಿಯಾದ್ ನ ಅಲ್ ರಾಜಿ಼ ಮಸೀದಿಯಲ್ಲಿ ಮಯ್ಯತ್ ನ ಅಂತಿಮ ವಿಧಿ ವಿಧಾನವನ್ನು ನಿರ್ವಹಿಸಿ, ನಸೀಮ್ ದಫನಭೂಮಿಯಲ್ಲಿ ಇಂಡಿಯನ್ ಸೋಶಿಯಲ್ ಫೋರಂನ ಸದಸ್ಯರು ಮತ್ತು ಮೃತರ ಆಪ್ತರ ಸಮ್ಮುಖದಲ್ಲಿ ಮಯ್ಯತ್ ನಮಾಜ್ ಮಾಡಿ ದಫನ ಕಾರ್ಯ ನಿರ್ವಹಿಸಲಾಯಿತು.
ಇವರ ಅಕಾಲಿಕ ಮರಣಕ್ಕೆ ಇಂಡಿಯನ್ ಸೋಶಿಯಲ್ ಫೋರಂನ ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಸಮಿತಿಯು ಸಂತಾಪ ಸೂಚಿಸಿದೆ. ಇಂಡಿಯನ್ ಸೋಶಿಯಲ್ ಫೋರಂನ ಈ ಸತ್ಕಾರ್ಯಕ್ಕೆ ಮೃತರ ಸಂಬಂಧಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.