ಕೊಡಗು – ಕೇರಳ ಗಡಿ ಭಾಗದ ಕೂಟುಹೊಳೆ ಸೇತುವೆ ಉದ್ಘಾಟನೆ

Prasthutha|

ವಿರಾಜಪೇಟೆ: ಕೇರಳ – ಕರ್ನಾಟಕವನ್ನು ಸಂಪರ್ಕ ಕಲ್ಪಿಸುವ ಕೂಟುಹೊಳೆಯಲ್ಲಿ ನಿರ್ಮಿಸಲಾದ ಸೇತುವೆಯನ್ನು ಶಾಸಕ ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಉದ್ಘಾಟನೆ ಮಾಡಿದರು. ಕೇರಳ ಸರಕಾರದ ಅನುದಾನದಲ್ಲಿ ನೂತನವಾಗಿ ನಿರ್ಮಿಸಲಾದ ಸೇತುವೆಯನ್ನು ಉದ್ಘಾಟಿಸಿದ್ದು, ಜನತೆಯ ಬಹುಕಾಲದ ಬೇಡಿಕೆ ಈಡೇರಿದೆ.

- Advertisement -

ಕೊಡಗು ಮತ್ತು ಕೇರಳದ ಕಣ್ಣೂರು ಜಿಲ್ಲೆಗಳ ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಮಾರ್ಗವಾದ ಮಾಕುಟ್ಟ- ಇರಿಟಿ ರಸ್ತೆಯ ಉಭಯ ರಾಜ್ಯಗಳ ಗಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕೂಟುಹೊಳೆ ಸೇತುವೆ ಇದೀಗ ಲೋಕಾರ್ಪಣೆಗೊಂಡಿದೆ. ಇದರಿಂದಾಗಿ ಉಭಯ ರಾಜ್ಯಗಳ ಜನತೆಯ ಬಹುಕಾಲದ ಬೇಡಿಕೆ ಈಡೇರುವ ನಿರೀಕ್ಷೆ ಅಂತಿಮ ಘಟ್ಟ ತಲುಪಿದೆ.

ಕೇರಳ ಸರಕಾರ ಮತ್ತು ಗುತ್ತಿಗೆ ಸಂಸ್ಥೆಯ ನಡುವೆ ನಡೆದ ಒಪ್ಪಂದದಂತೆ ಕಳೆದ 4 ವರ್ಷಗಳ ಹಿಂದೆಯೇ ಈ ನೂತನ ಸೇತುವೆಯ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಕೂಟುಹೊಳೆ ಸೇತುವೆಯ ಕೆಲಸ ಆರಂಭಗೊಂಡ ಕೇವಲ 2 ತಿಂಗಳಲ್ಲೇ ಕರ್ನಾಟಕ ಅರಣ್ಯ ಇಲಾಖೆಯ ಆಕ್ಷೇಪಣೆಯಿಂದಾಗಿ ಕಾಮಗಾರಿ ಸ್ಥಗಿತಗೊಂಡಿತ್ತು. ಬಳಿಕ ಕೇರಳ-ಕರ್ನಾಟಕ ರಾಜ್ಯಗಳ ನಡುವೆ ನಡೆದ ತಾಂತ್ರಿಕ ವ್ಯವಹಾರದ ಬಳಿಕ ಕಾಮಗಾರಿ ಪುನರಾರಂಭಗೊಂಡಿದೆ.

- Advertisement -

ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ನಿರ್ಮಾಣಗೊಂಡು ನೂರಾರು ವರ್ಷದ ಇತಿಹಾಸವಿರುವ ಹಳೆಯ ಕೂಟುಹೊಳೆ ಸೇತುವೆ ತೀರಾ ಶಿಥಿಲಾವಸ್ಥೆಗೆ ತಲುಪಿ ಹತ್ತಾರು ವರ್ಷಗಳೇ ಕಳೆದಿತ್ತು. ಕೇವಲ ಒಂದು ವಾಹನ ಮಾತ್ರ ಏಕಮುಖವಾಗಿ ಸಂಚರಿಸಲು ಸಾಧ್ಯವಿದ್ದ ಹಳೆಯ ಸೇತುವೆಯನ್ನು ದಾಟುವುದೇ ವಾಹನ ಚಾಲಕರಿಗೆ ಸಮಸ್ಯೆಯಾಗಿತ್ತು. ಅಲ್ಲದೆ ಉಭಯ ರಾಜ್ಯಗಳ ನಡುವೆ ಸಂಚರಿಸುತ್ತಿದ್ದ ಬಸ್ಸುಗಳು ಹಳೆಯ ಸೇತುವೆ ದಾಟಲು ದೊಡ್ಡ ಸವಾಲನ್ನು ಎದುರಿಸಬೇಕಾಗಿತ್ತು. ಇದರಿಂದಾಗಿ ಕಣ್ಣೂರು ಜಿಲ್ಲೆಯ ಇರಿಟ್ಟಿ ವ್ಯಾಪ್ತಿಯ ಕೂಟುಹೊಳೆ ಮತ್ತು ಕೊಡಗು ಗಡಿ ಮಾಕುಟ್ಟವನ್ನು ಸಂಪರ್ಕಿಸಲು ವಿರಾಜಪೇಟೆಯಿಂದ 27 ಕಿಲೋಮೀಟರ್ ದೂರದಲ್ಲಿರುವ ಕೂಟುಹೊಳೆಯಲ್ಲಿ ನೂತನ ಸೇತುವೆ ನಿರ್ಮಾಣವಾಗಬೇಕು ಎಂಬುದು ಜನರ ಬಹುಕಾಲದ ಬೇಡಿಕೆಯಾಗಿತ್ತು.

ಜನರ ಬೇಡಿಕೆಯನ್ನು ಮನಗಂಡ ಕೇರಳ ಸರಕಾರ ಕೂಟುಹೊಳೆಯಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ 2017ರಲ್ಲಿ ಮಂಜೂರಾತಿ ನೀಡಿತು. ಇದರಂತೆ ಕೇರಳದ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿರುವ ಕೇರಳ ರಾಜ್ಯ ಸಾರಿಗೆ ಯೋಜನೆಯ ಮೂಲಕ ವಿಶ್ವಬ್ಯಾಂಕ್ ನೆರವಿನಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಯಿತು. ರೂ. 6.75 ಕೋಟಿ ವೆಚ್ಚದ ಈ ಕಾಮಗಾರಿಯನ್ನು ಈಜಿಸ್ ಇಂಡಿಯ ಕನ್ಸಲ್ಟಿಂಗ್ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಎಂಬ ನಿರ್ಮಾಣ ಸಂಸ್ಥೆ ಗುತ್ತಿಗೆ ಪಡೆದುಕೊಂಡಿತು.

ಸದ್ಯ ಸೇತುವೆ ಉದ್ಘಾಟನೆಗೊಂಡಿದೆ. ಈ ವೇಳೆ ಕೇರಳ ಸರ್ಕಾರದ ಲೋಕೋಪಯೋಗಿ ಸಚಿವರು ಸ್ಥಳೀಯ ಶಾಸಕರ ಹಾಗೂ ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಸಂದರ್ಭ ಹಾಜರಿದ್ದರು.

Join Whatsapp