ಕೊಲ್ಕತಾ : ಪ್ರವಾದಿ ಮುಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ದೇಶದಾದ್ಯಂತ ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಗಿ ಇದೀಗ ತಲೆಮರೆಸಿಕೊಂಡಿರುವ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಕೋಲ್ಕತ್ತಾ ಪೊಲೀಸರು ಲುಕೌಟ್ ನೋಟಿಸ್ ಜಾರಿಗೊಳಿಸಿದ್ದಾರೆ.
ಕೋಲ್ಕತ್ತಾ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಇದಕ್ಕಿಂತ ಮೊದಲು ನರ್ಕೇಲ್ದಂಗ ಪೊಲೀಸ್ ಠಾಣೆಯಿಂದ ಶರ್ಮಾಗೆ ಸಮನ್ಸ್ ಕಳುಹಿಸಿ ಜೂನ್ 20ರಂದು ಹಾಜರಾಗುವಂತೆ ಹೇಳಲಾಗಿತ್ತು. ಇದಾದ ನಂತರ ಆಮ್ಹೆಸ್ಟ್ ಪೊಲೀಸ್ ಠಾಣೆ ಸಮನ್ಸ್ ಕಳುಹಿಸಿ ಜೂನ್ 25ರಂದು ಹಾಜರಾಗಲು ಹೇಳಿತ್ತು. ಜೀವಕ್ಕೆ ಅಪಾಯವಿದೆ ಎಂದು ಹೇಳಿ ಶರ್ಮಾ ಅವರು ಎರಡೂ ಸಮನ್ಸ್ ಗೆ ಹಾಜರಾಗಲಿಲ್ಲ. ಹಾಗಾಗಿ ಕೊಲ್ಕತ್ತಾ ಪೊಲೀಸರು ಲುಕೌಟ್ ನೋಟಿಸ್ ಜಾರಿ ಮಾಡಿದ್ದಾರೆ
ಟಿವಿ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ಶರ್ಮಾ ಪ್ರವಾದಿ ಮುಹಮ್ಮದ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಇದಕ್ಕೆ ಜಾಗತಿಕ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಕತಾರ್, ಪಾಕಿಸ್ತಾನ, ಅಫ್ಘಾನಿಸ್ತಾನ ಸೇರಿದಂತೆ 14 ಕ್ಕೂ ಹೆಚ್ಚು ದೇಶಗಳು ಭಾರತವನ್ನು ತೀವ್ರವಾಗಿ ಖಂಡಿಸಿದ್ದವು. ದೇಶದಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದು, ಜನರು ನೂಪುರ್ ಶರ್ಮಾ ಬಂಧನಕ್ಕೆ ಒತ್ತಾಯಿಸಿದ್ದರು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕೆ ನೂಪುರ್ ಶರ್ಮಾ ವಿರುದ್ಧ ಹೈದರಾಬಾದ್, ಪುಣೆ ಮತ್ತು ಮುಂಬೈನಲ್ಲಿ ಪ್ರಕರಣ ದಾಖಲಾಗಿದೆ.