ಚಿಕ್ಕಮಗಳೂರಿನ ಇಂದಿರಾನಗರದಲ್ಲಿ ಬಡವರ ಮನೆ ಮೇಲೆ ಬುಲ್ಡೋಜರ್ ಕಾರ್ಯಾಚರಣೆ: SDPIನಿಂದ ಪ್ರತಿಭಟನೆ

Prasthutha|

ಚಿಕ್ಕಮಗಳೂರು: ಚಿಕ್ಕಮಗಳೂರಿನ ಆಶ್ರಯ ಕಾಲೊನಿಯಲ್ಲಿ ಹಲವು ವರ್ಷಗಳಿಂದ ವಾಸವಾಗಿದ್ದ ಬಡವರ ಮನೆಗಳನ್ನು ಬುಲ್ಡೋಜರ್ ಮೂಲಕ ನಗರಸಭೆ ಇಂದು ತೆರವುಗೊಳಿಸಿದ್ದು, ನಗರಸಭೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

- Advertisement -

ಚಿಕ್ಕಮಗಳೂರು ನಗರದ ಹೊರವಲಯದ ಇಂದಿರಾನಗರ ಬಡಾವಣೆಯಲ್ಲಿ ಬಡವರಿಗಾಗಿಯೇ ಮೀಸಲಾಗಿರುವ ಆಶ್ರಯ ಕಾಲೋನಿಯಲ್ಲಿ ಹಲವು ಬಡವರು ಸರ್ಕಾರದಿಂದ ಅನುಮತಿ ಪಡೆದು ಮನೆ ಕಟ್ಟಿಕೊಂಡು ವಾಸಿಸುತ್ತಿದ್ದರು. ಅವರಿಗೆ 2013ರಲ್ಲಿ ಅಂದಿನ ನಗರಸಭೆಯ ಅಧ್ಯಕ್ಷರೂ, ಆಶ್ರಯ ಸಮಿತಿಯ ಅಧ್ಯಕ್ಷರಾಗಿದ್ದ ಮುತ್ತಯ್ಯ ಅವರು ಮನೆಗೆ ಸಂಬಂಧಿಸಿದ ದಾಖಲೆ, ಹಕ್ಕುಪತ್ರ ನೀಡಿದ್ದರು. ಆದರೆ ನಗರಸಭೆ ಶನಿವಾರ ಬೆಳ್ಳಂಬೆಳಗ್ಗೆ ಏಕಾಏಕಿ ಬುಲ್ಡೋಜರ್ ಗಳನ್ನು ತಂದು ಬಡವರ ಮನೆಗಳನ್ನು ಧ್ವಂಸಗೊಳಿಸಿದೆ. ಮನೆಗಳಲ್ಲಿದ್ದ ವಸ್ತುಗಳನ್ನು ಎತ್ತಿಕೊಳ್ಳಲು ಕೂಡ ಅವಕಾಶ ನೀಡಿಲ್ಲ. ಈಗಿನ ನಗರಸಭೆ ಅಧ್ಯಕ್ಷರು ಮತ್ತು ಆಯುಕ್ತರಿಗೆ ದಾಖಲೆ ತೋರಿಸಿದ್ದರೂ, ಮುತ್ತಯ್ಯ ಅವರು ನೀಡಿರುವುದು ನಕಲಿ ದಾಖಲೆ, ಬೇಕಿದ್ದರೆ ಅವರ ವಿರುದ್ಧ ದೂರು ನೀಡಿ ಎಂದು ಬೇಜವಾಬ್ದಾರಿಯಾಗಿ ವರ್ತಿಸಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಹಲವು ವರ್ಷಗಳಿಂದ ಈ ಮನೆಯಲ್ಲಿ ವಾಸಿಸುತ್ತಿದ್ದೆವು. ಇದೀಗ ನಮ್ಮ ಕಣ್ಣೆದುರೇ ನಮ್ಮ ಮನೆಗಳನ್ನು ನೆಲಸಮಗೊಳಿಸಿದ್ದಾರೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.

- Advertisement -

ಸುಮಾರು 35-40ಕ್ಕೂ ಅಧಿಕ ಮನೆಗಳನ್ನು ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ತೆರವುಗೊಳಿಸಿದರು. ಇಲ್ಲಿರುವ ಯಾರು ಕೂಡ ಹೊರಗಿನಿಂದ ಬಂದವರಲ್ಲ. ನಗರದಲ್ಲಿ ರಸ್ತೆ ವಿಭಜನೆ ವೇಳೆ ಮನೆ ಕಳೆದುಕೊಂಡವರಿಗಾಗಿಯೇ ಈ ಪ್ರದೇಶವನ್ನು ಮೀಸಲಿಟ್ಟು ಅವರನ್ನು ಇಲ್ಲಿಗೆ ಸ್ಥಳಾಂತರಿಸಲಾಗಿತ್ತು. ಆದರೆ ಈಗಿನ ನಗರಸಭೆ ಉದ್ದೇಶಪೂರ್ವಕವಾಗಿ ಬುಲ್ಡೋಜರ್ ಕಾರ್ಯಾಚರಣೆ ನಡೆಸಿದೆ ಎಂದು ಸಂತ್ರಸ್ತರು ಆರೋಪಿಸಿದರು.

ಬುಲ್ಡೋಜರ್ ಕಾರ್ಯಾಚರಣೆಯ ವಿಷಯ ತಿಳಿಯುತ್ತಿದ್ದಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್ ಡಿಪಿಐ ಕಾರ್ಯಕರ್ತರು ಇಂದಿರಾನಗರದಿಂದ ನಗರಸಭೆ ಕಚೇರಿವರೆಗೆ ಜಾಥಾ ನಡೆಸಿ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ತಕ್ಷಣ ತೆರವು ಕಾರ್ಯಾಚರಣೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಕಾರರ ಆಗ್ರಹಕ್ಕೆ ಮಣಿದ ಜಿಲ್ಲಾಧಿಕಾರಿ ತಾತ್ಕಾಲಿಕವಾಗಿ ಕಾರ್ಯಾಚರಣೆಯನ್ನು ನಿಲ್ಲಿಸಲು ಸೂಚಿಸಿದ್ದು, ಅಕ್ರಮವಾಗಿ ನೆಲೆಸಿರುವವರು ಅಲ್ಲಿಂದ ತೆರವುಗೊಳ್ಳಲು ಸೋಮವಾರದವರೆಗೆ ಕಾಲಾವಕಾಶ ನೀಡಿದ್ದಾರೆ ಎಂದು ತಿಳಿದುಬಂದಿದೆ.

Join Whatsapp