ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದ ಕೊಡಗಿನ ನೆರೆ ಸಂತ್ರಸ್ತರು: ಶಾಸಕ ಕೆ.ಜಿ ಬೋಪಯ್ಯರಿಂದ ದುರ್ವರ್ತನೆ ಆರೋಪ

Prasthutha|

ಮಡಿಕೇರಿ: ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ರಾಜ್ಯ ಸರಕಾರ ಶಾಶ್ವತ ಪರಿಹಾರ ನೀಡುತ್ತಿಲ್ಲವೆಂದು ನೊಂದ ಸಂತ್ರಸ್ತರು ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿರುವ ಘಟನೆ ನಡೆದಿದೆ.

- Advertisement -


ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕೊಯನಾಡು ಭಾಗದ ನಿರಾಶ್ರಿತರು ಪತ್ರ ಬರೆದಿದ್ದಾರೆ.
ಪಯಸ್ವಿನಿ ನದಿ ಉಕ್ಕಿ ಹರಿದಿರುವುದರಿಂದ ಕೊಯನಾಡು ಭಾಗದ ಹಲವು ವಾಸದ ಮನೆಗಳು ಹಾಗೂ ಕೃಷಿ ಫಸಲುಗಳು ಸಂಪೂರ್ಣವಾಗಿ ಕೊಚ್ಚಿ ಹೋಗಿ ನಿರಾಶ್ರಿತರಾಗಿದ್ದು, ಗ್ರಾಮದಲ್ಲಿ ಈ ವರ್ಷ ನಿರ್ಮಿಸಿರುವ ಕಿಂಡಿ ಅಣೆಕಟ್ಟು ಮತ್ತು ಅದಕ್ಕೆ ಹೊಂದಿಕೊಂಡಿರುವ ಸೇತುವೆ ಇದಕ್ಕೆಲ್ಲ ಕಾರಣವಾಗಿದೆ ಎಂದು ಸಂತ್ರಸ್ತರು ದೂರಿದರು.


ಅಣೆಕಟ್ಟು ನಿರ್ಮಿಸಲು ಆರಂಭಿಸುವ ಸಂದರ್ಭದಲ್ಲಿ ಈಗ ನಿರಾಶ್ರಿತರಾಗಿರುವವರು ಹಾಗೂ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿತ್ತಾದರೂ ಅದನ್ನು ಲೆಕ್ಕಿಸದೆ ಸಂಪಾಜೆ ಗ್ರಾಮ ಪಂಚಾಯತಿ ನಿರಾಕ್ಷೇಪಣಾ ಪತ್ರವನ್ನು ನೀಡಿದ್ದರು, ಇದರ ಪರಿಣಾಮ ನಿರ್ಮಿಸಲಾಗಿರುವ ಕಿಂಡಿ ಅಣೆಕಟ್ಟಿನಿಂದ ನಿರಂತರ ಸಮಸ್ಯೆ ಎದುರಾಗಿದೆ ಎಂದು ಆರೋಪಿಸಿದ್ದಾರೆ.
ಇದು ಪ್ರಕೃತಿ ವಿಕೋಪದೊಂದಿಗೆ ಮಾನವ ನಿರ್ಮಿತ ವಿಕೋಪವಾಗಿದೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಶಾಲಾ ಕಟ್ಟಡವು ಕುಸಿದು ಬಿದ್ದಿದೆ. ಇವೆಲ್ಲವನ್ನು ವೀಕ್ಷಿಸಲು ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಂದಿದ್ದರೂ ಪರಿಹಾರ ಸಿಗಲಿಲ್ಲವೆಂದು ಸಂತ್ರಸ್ತರು ಅಳಲನ್ನು ತೋಡಿಕೊಂಡಿದ್ದಾರೆ.

- Advertisement -


ಸ್ಥಳೀಯ ಶಾಸಕ ಕೆ.ಜಿ ಬೋಪಯ್ಯ ನಮ್ಮ ಕಷ್ಟಗಳಿಗೆ ಸ್ಪಂದಿಸದೆ ನಮ್ಮೊಂದಿಗೆ ದುರ್ವರ್ತನೆ ತೋರಿರುವುದಾಗಿ ಸಂತ್ರಸ್ತರು ಆರೋಪಿಸಿದ್ದಾರೆ. ಶಾಸಕರ ಸ್ಪಂದನೆ ಸಿಗದಿದ್ದಾಗ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅವರೆದುರೇ ಅಳಲನ್ನು ತೋಡಿಕೊಂಡರೂ “ನೀವು ಏನಾದರೂ ಮಾಡಿಕೊಳ್ಳಿ” ಎಂದು ಉದ್ದಟತನದಿಂದ ಉತ್ತರಿಸಿ, ನಮ್ಮನ್ನು ಕಡೆಗಣಿಸಿ ಕಾಳಜಿ ಕೇಂದ್ರದಿಂದ ತೆರಳಿದ್ದಾರೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಶಾಸಕರ ಜೊತೆಗಿದ್ದ ಜಿಲ್ಲಾಧಿಕಾರಿಗಳು ಸೇರಿದಂತೆ ಯಾವುದೇ ಅಧಿಕಾರಿಗಳಿಂದ ಶಾಶ್ವತ ಪರಿಹಾರದ ಬಗ್ಗೆ ಭರವಸೆಯನ್ನೂ ನೀಡಿಲ್ಲ ಎಂದಿದ್ದಾರೆ.


ಸರಕಾರದಿಂದ ದೊರೆಯುವ “ಪ್ರಧಾನ ಮಂತ್ರಿ ಆವಾಜ್” ಯೋಜನೆಯಡಿಯಲ್ಲಿ ವಸತಿ ಮತ್ತು ಇನ್ನಿತರ ಸೌಲಭ್ಯಗಳು ಕಲ್ಪಿಸಿಕೊಡಬೇಕಾಗಿ ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದು, ಯಾವುದೇ ವ್ಯವಸ್ಥೆ ನಡೆಯದಿದ್ದಲ್ಲಿ ನಾವು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಬೇಡಿಕೆಗಳು ಈಡೇರದಿದ್ದರೆ ದಯಮಾಡಿ ನಮಗೆ ದಯಾಮರಣಕ್ಕೆ ಅವಕಾಶ ಮಾಡಿಕೊಡಬೇಕೆಂದು ಪತ್ರದಲ್ಲಿ ಕೋರಿಕೊಂಡಿದ್ದಾರೆ.

Join Whatsapp