ಮಡಿಕೇರಿ: ಕಳೆದ ಜುಲೈ 1 ರಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೊಡಗು ಜಿಲ್ಲೆಯ ದಕ್ಷಿಣ ಭಾಗದಲ್ಲಿ ಕಾಫಿ ಬೆಳೆ ನಷ್ಟ ಸಂಬಂಧಿಸಿ ವಿಜ್ಞಾನಿಗಳ ತಂಡ ಸಮೀಕ್ಷೆ ನಡೆಸಿದೆ.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ನಿರ್ದೇಶನದಂತೆ, ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪ ಕೇಂದ್ರದ ವಿಜ್ಞಾನಿಗಳಾದ ಬಾ.ರಾಜೀವ್ ಪಾಟಿ, ಮುಖಾರಿಬ್ ಅವರ ತಂಡವು ಗೋಣಿಕೊಪ್ಪಲಿನ ಕಾಫಿ ಮಂಡಳಿಯ ಉಪ ನಿರ್ದೇಶಕರಾದ ಡಾ.ಶ್ರೀದೇವಿ ಅವರ ಮಾರ್ಗ ದರ್ಶನದಲ್ಲಿ ಮುಂಗಾರು ಭಾಗದ ಹುದಿಕೇರಿ, ಬೇಲೂರು, ಹೈಸೊಡ್ಲೂರು, ಪೆರಾಡು, ಪರ್ಕಟಗೇರಿ, ಬಿರುನಾಣಿ, ಬಾಡಗಕೇರಿ, ಹಾಗೆಯೇ ಕುರ್ಚಿ, ಬೀರುಗ, ಟಿ.ಶೆಟ್ಟಿಗೇರಿ, ತಾವಲಗೇರಿ, ಹರಿಹರ ಮತ್ತಿತರ ಗ್ರಾಮಗಳಿಗೆ ಭೇಟಿ ನೀಡಿ ಕಾಫಿ ಬೆಳೆಯ ನಷ್ಟದ ಸಮೀಕ್ಷೆ ನಡೆಸಿದರು.
ಜಿಲ್ಲೆಯಲ್ಲಿ ವ್ಯಾಪಕ ಮಳೆ ಆಗುತ್ತಿರುವುದರಿಂದ ಕಾಫಿ ಬೆಳೆ ನಷ್ಟ, ಜೊತೆಗೆ ಕೊಳೆ ರೋಗವು ಹರಡುವ ಸಾಧ್ಯತೆ ಇದೆ. ಆ ನಿಟ್ಟಿನಲ್ಲಿ ಕೊಳೆ ರೋಗ ನಿಯಂತ್ರಣ ಮಾಡುವಲ್ಲಿ ಅಗತ್ಯ ಕ್ರಮವಹಿಸಬೇಕಿದೆ ಎಂದು ಡಾ.ಶ್ರೀದೇವಿ ಅವರು ತಿಳಿಸಿದ್ದಾರೆ.