ಕಾಂಗ್ರೆಸ್ ಮುಖಂಡನ ಕೊಲೆ ಪ್ರಕರಣ: ಆರೋಪಿಯಿಂದ ಮಹಿಳಾ ಪಿಎಸ್ ಐ ಮೇಲೆ ಫೈರಿಂಗ್

Prasthutha|

ಕಲಬುರಗಿ: ಶಹಾಬಾದ್ ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್ ಕಂಬಾನೂರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ವಿಜಯಕುಮಾರ್ ಹಳ್ಳಿ ಎಂಬಾತನನ್ನು ಪಂಚನಾಮೆಗೆ ಕರೆದೊಯ್ದ ಸಂದರ್ಭದಲ್ಲಿ ಶಹಾಬಾದ್ ಪಿಎಸ್ ಐ ಸುವರ್ಣಾ ಅವರತ್ತ ಎರಡು ಸುತ್ತು ಗುಂಡು ಹಾರಿಸಿದ್ದರಿಂದ ಸುವರ್ಣಾ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

- Advertisement -

ಇದಕ್ಕೆ ಪ್ರತಿಯಾಗಿ ಪೊಲೀಸರು ವಿಜಯಕುಮಾರನತ್ತ ಗುಂಡು ಹಾರಿಸಿದ್ದು, ಆತನಿಗೂ ಗಾಯಗಳಾಗಿವೆ. ಇಬ್ಬರನ್ನೂ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇತ್ತೀಚೆಗೆ ಗಿರೀಶ ಕಂಬಾನೂರ ಅವರನ್ನು ದುಷ್ಕರ್ಮಿಗಳ ತಂಡ ತಲವಾರು ದಾಳಿ ನಡೆಸಿ ಕೊಲೆ ಮಾಡಿತ್ತು.    ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಎರಡು ತಂಡಗಳಲ್ಲಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದರು.

- Advertisement -

ತಡ ರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ, ಆರೋಪಿ ವಿಜಯಕುಮಾರ್ ಹಳ್ಳಿ ಹಾಗೂ ಇತರರನ್ನು ಬಂಧಿಸಿತ್ತು. ಶಹಾಬಾದ್ ಬಳಿಯ ತೊನಸನಹಳ್ಳಿ ಗ್ರಾಮದ ಬಳಿ ತಲ್ವಾರ್ ಹಾಗೂ ಬಂದೂಕು ಎಸೆದು ಹೋಗಿದ್ದ ಜಾಗದಲ್ಲಿ ಪಂಚನಾಮೆ ನಡೆಸಲು ಆರೋಪಿಗಳನ್ನು ಕರೆದೊಯ್ಯಲಾಗಿತ್ತು. ಬಂದೂಕು ಎಸೆದಿದ್ದ ಸ್ಥಳವನ್ನು ತೋರಿಸುವ ನಟನೆ ಮಾಡಿದ ವಿಜಯಕುಮಾರ್ ಹಳ್ಳಿ ಅದೇ ಬಂದೂಕಿನಿಂದ ಸುವರ್ಣಾ ಅವರತ್ತ ಗುಂಡು ಹಾರಿಸಿದ್ದಾನೆ. ತಕ್ಷಣ ಎಚ್ಚೆತ್ತ ಸಿಪಿಐ ಪ್ರಕಾಶ್ ಯಾತನೂರ ಅವರು ವಿಜಯಕುಮಾರ್ ನತ್ತಲೂ ಗುಂಡು ಹಾರಿಸಿದ್ದು, ಇದರಿಂದ ಆತನ ಎಡಗಾಲಿಗೆ ಗಾಯವಾಗಿದೆ.

ಈ ಬಗ್ಗೆ ವಿವರ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್, ‘ಇಂದು ಬೆಳಿಗ್ಗೆ ಫೈರಿಂಗ್ ನಡೆದಿದೆ. ಸುವರ್ಣಾ ಅವರಿಗೆ ಗಂಭೀರವಾಗಿ ಗಾಯವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯಕ್ಕೆ ಅವರ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರು ಏನನ್ನೂ ಹೇಳಿಲ್ಲ. ಆರೋಪಿ ವಿಜಯಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ’ ಎಂದು ತಿಳಿಸಿದರು.

Join Whatsapp