ಕೊಡಗು: ಎಸ್.ಪಿ.ಯನ್ನು ವರ್ಗಾಯಿಸಲು ಬಿಜೆಪಿ ಷಡ್ಯಂತ್ರ; ಅರುಣ್ ಮಾಚಯ್ಯ ಆರೋಪ

Prasthutha|

ಮಡಿಕೇರಿ: ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕ್ಯಾಪ್ಟನ್ ಎಂ.ಎ ಅಯ್ಯಪ್ಪ ಅವರನ್ನು ಜಿಲ್ಲೆಯಿಂದ ವರ್ಗಾಯಿಸಲು ಬಿಜೆಪಿ ವಿವಿಧ ರೀತಿಯ ಷಡ್ಯಂತ್ರಗಳನ್ನು ರೂಪಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಳೆದ ಗುರುವಾರದಂದು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ಶಾಸಕರು ತಮ್ಮ ಹಿಂಬಾಲಕರನ್ನು ಚೂಬಿಟ್ಟು ಪ್ರಾಯೋಜಿಸಿದ್ದ ಪೂರ್ವ ನಿಯೋಜಿತ ಪುಂಡಾಟಿಕೆ ಈ ಷಡ್ಯಂತ್ರದ ಭಾಗವಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚೆಪ್ಪುಡೀರ ಅರುಣ್ ಮಾಚಯ್ಯ ಗಂಭೀರ ಆರೋಪ ಮಾಡಿದ್ದಾರೆ.

- Advertisement -

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೀಗ ಜಿಲ್ಲೆಯಲ್ಲಿ ಅಯ್ಯಪ್ಪ ಅವರಂಥ ದಕ್ಷ ಪೊಲೀಸ್ ಅಧಿಕಾರಿ ಎಸ್ಪಿಯಾಗಿರುವುದು ಬಿಜೆಪಿಗರಿಗೆ ಬಿಸಿ ತುಪ್ಪವಾಗಿದೆ. ಅದರಲ್ಲೂ ಬಿಜೆಪಿಯ ಶಾಸಕ ಬೋಪಯ್ಯ ಅವರು ಎಸ್. ಪಿ. ಯನ್ನು ಹೇಗಾದರೂ ಮಾಡಿ ವರ್ಗಾಯಿಸಬೇಕೆಂದು ಪಣತೊಟ್ಟಿದ್ದಾರೆ. ಇತ್ತೀಚಿಗೆ ಬಿಜೆಪಿ ಪ್ರಮುಖನ ಮಗನೊಬ್ಬ ಕಾವೇರಿ ಮಾತೆಯನ್ನು ಮತ್ತು ಕೊಡವ ಜನಾಂಗವನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳಿನ ಮಾಡಿದ ಪ್ರಕರಣದಲ್ಲಿ ಶಾಸಕರ ಒತ್ತಡಕ್ಕೆ ಎಸ್‌.ಪಿ. ಮಣಿಯದಿರುವುದೇ ಬೋಪಯ್ಯ ಅವರ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಆಪಾದಿಸಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿ ಬಿಜೆಪಿ ಮುಖಂಡನ ಪುತ್ರ ಎಂದು ಬಹಿರಂಗಗೊಳ್ಳುತ್ತಿದ್ದಂತೆ ಅದನ್ನು ಮುಚ್ಚಿ ಹಾಕಲು ಶಾಸಕ ಬೋಪಯ್ಯ ಅವರು ಎಸ್. ಪಿ.ಗೆ ಭಾರಿ ಒತ್ತಡ ಹೇರಿದ್ದರು. ನಿಷ್ಪಕ್ಷಪಾತವಾದ ತನಿಖೆಯ ಮೂಲಕ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಎಸ್‌.ಪಿ. ಅಯ್ಯಪ್ಪ ಅವರ ಪಾತ್ರ ಅತಿ ಮಹತ್ವದ್ದಾಗಿತ್ತು. ಆದ್ದರಿಂದ ತಮ್ಮ ಅಣತಿಯಂತೆ ಎಸ್.ಪಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಸಿಟ್ಟು ಆರಂಭದಿಂದಲೂ ಬೊಪ್ಪಯ್ಯನವರಿಗಿದೆ ಎಂದು ಹೇಳಿರುವ ಅರುಣ್ ಮಾಚಯ್ಯ, ಈ ಕಾರಣದಿಂದ ಎಸ್.ಪಿ. ಯನ್ನು ಜಿಲ್ಲೆಯಿಂದ ಎತ್ತಂಗಡಿಗೊಳಿಸಲು ಬೋಪಯ್ಯ ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಎಸ್ಪಿಯನ್ನು ವರ್ಗಾಯಿಸುವುದೇ ಬೋಪಯ್ಯನವರ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

- Advertisement -

ಕೆ.ಜಿ ಬೋಪಯ್ಯ ಅವರಿಂದ ತರಬೇತಿ ಪಡೆದುಕೊಂಡರೆ ಒಡೆದು ಆಳುವ ನೀತಿಯಲ್ಲಿ  ತಜ್ಞರಾಗಬಹುದು. ಜಿಲ್ಲೆಯ ಎರಡು ಪ್ರಮುಖ ಜನಾಂಗದವರನ್ನು ಎತ್ತಿ ಕಟ್ಟುವುದರಲ್ಲಿ ಶಾಸಕ ಬೋಪಯ್ಯ ಅವರು ಹೆಚ್ಚು ಪರಿಣಿತರಾಗಿದ್ದಾರೆ. ಬೇತ್ರಿ ಹೊಳೆಯಿಂದ ಈಚೆಗೊಂದು ಆಚೆಗೊಂದು ಮುಖವಾಡ ಧರಿಸುತ್ತಾ ಜನಾಂಗೀಯವಾಗಿ ಎತ್ತಿ ಕಟ್ಟುವ ರಾಜಕಾರಣ ಬೋಪಯ್ಯನವರಿಗೆ ಹೊಸದೇನಲ್ಲ. ಈ ಕಾರಣದಿಂದಲೇ ಅವರು ಇದುವರೆಗೂ ಗೆಲುವು ಸಾಧಿಸುತ್ತಾ ಬಂದಿದ್ದಾರೆ ಎಂದು ನೇರ ಆರೋಪ ಮಾಡಿರುವ ಅರುಣ್ ಮಾಚಯ್ಯ,  ಇದೀಗ ಗ್ರಾ. ಪಂ.ಗಳಿಗೆ ಯಾವುದೇ ಅನುದಾನ ಬಿಡುಗಡೆಯಾಗುತ್ತಿಲ್ಲ. ವಸತಿರಹಿತರಿಗೆ ಮನೆ ನಿರ್ಮಾಣವಾಗುತ್ತಿಲ್ಲ. ಇದ್ಯಾವುದನ್ನು ಪರಿಗಣಿಸದೆ ಕೇವಲ 40% ಕಮಿಷನ್ ವ್ಯವಹಾರದತ್ತ ಮಾತ್ರ ಗಮನಹರಿಸುತ್ತಿರುವ ಶಾಸಕ ಬೋಪಯ್ಯ ಅವರು ಜನರನ್ನು ಜನಾಂಗೀಯವಾಗಿ ಎತ್ತಿಕಟ್ಟಿ ಲಾಭಗಳಿಸುವ ಕಪಟ ರಾಜಕೀಯಕ್ಕೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪೊನ್ನಂಪೇಟೆ ತಾಲೂಕು ರಚನೆ ಸಂಬಂಧ ಹೋರಾಟಗಳು ಆರಂಭಗೊಂಡಾಗ ಅದನ್ನು ಕೆ. ಜಿ. ಬೋಪಯ್ಯ ಅವರು ಆರಂಭದಿಂದಲೇ ತೀವ್ರವಾಗಿ ವಿರೋಧಿಸಿದ್ದರು. ತಮ್ಮ ಇಚ್ಛಾಶಕ್ತಿ ತೋರಿದ್ದರೆ ಅವರು ಸ್ಪೀಕರ್ ಆಗಿದ್ದ ಸಂದರ್ಭದಲ್ಲೇ ಹೊಸ ಪೊನ್ನಂಪೇಟೆ ತಾಲೂಕನ್ನು  ಘೋಷಿಸಬಹುದಿತ್ತು. ಬಹುದಿನದ ಹೋರಾಟದ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪೊನ್ನಂಪೇಟೆ ತಾಲೂಕು ಘೋಷಣೆಯಾದಾಗ  ತಾಲೂಕು ರಚನೆಗಾಗಿ ಹೋರಾಡಿದ ಪ್ರಮುಖರನ್ನು ಕತ್ತಲೆಯಲ್ಲಿಟ್ಟು ಉದ್ಘಾಟನಾ ಕಾರ್ಯಕ್ರಮ ಆಯೋಜಿಸಿದ್ದ ಕೆ.ಜಿ.ಬೋಪಯ್ಯ ಕೀಳುಮಟ್ಟದ ರಾಜಕೀಯಕ್ಕೆ ಪ್ರಸಿದ್ಧಿಯಾಗಿದ್ದಾರೆ ಎಂದು ಅರುಣ್ ಮಾಚಯ್ಯ ದೂರಿದರು.

ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದ ಪ್ರಕರಣದಲ್ಲಿ ಬಂಧಿತನಾಗಿರುವ ಬಿಜೆಪಿ ಕಾರ್ಯಕರ್ತನೊಬ್ಬನಿಂದ ತಾನು ಕಾಂಗ್ರೆಸ್ ಕಾರ್ಯಕರ್ತ ಎಂದು ಶಾಸಕ ಅಪ್ಪಚ್ಚು ರಂಜನ್ ಅವರ ಒತ್ತಡದಿಂದ ಬಲವಂತವಾಗಿ ಹೇಳಿಸಲಾಗಿದೆ. ಕಾಂಗ್ರೆಸ್ ಕಾರ್ಯಕರ್ತನಾಗಿದ್ದರೆ ಬಂಧನಕ್ಕೊಳಗಾದಾಗ ಈತನ ಪರವಾಗಿ ಅಪ್ಪಚ್ಚು ರಂಜನ್ ಕುಶಾಲನಗರ ಪೊಲೀಸ್ ಠಾಣೆಗೆ ತೆರಳಿದ್ದೇಕೆ? ಎಂದು ಖಾರವಾಗಿ ಪ್ರಶ್ನಿಸಿರುವ ಅರುಣ್ ಮಾಚಯ್ಯ, ಇದು ಹೇಗಾದರೂ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಮಸಿ ಬಳಿಯಬೇಕು ಎಂಬ ಬಿಜೆಪಿಯ ಮತ್ತೊಂದು ಹುನ್ನಾರದ ಭಾಗವಾಗಿದೆ ಎಂದು ಹೇಳಿದರು.

ವಿಪಕ್ಷ ನಾಯಕರ ಕಾರಿಗೆ ಮೊಟ್ಟೆ ಎಸೆದ ಹೀನ ಘಟನೆಯನ್ನು ಮುತ್ಸದಿ ರಾಜಕಾರಣಿ ಯಡಿಯೂರಪ್ಪ, ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ರಾಜ್ಯದ ಬಹುತೇಕ ಮುಖಂಡರು ಖಂಡಿಸಿದ್ದಾರೆ. ಆದರೆ ಕೊಡಗಿನ ಇಬ್ಬರು ಶಾಸಕರು ಈ ಘಟನೆಯನ್ನು ಖಂಡಿಸುವ ಕನಿಷ್ಠ ಸೌಜನ್ಯತೆ ತೋರದಿರುವುದು ಅವರ ರಾಜಕೀಯ ಅಪ್ರಬುದ್ಧತೆಗೆ ಸಾಕ್ಷಿಯಾಗಿದೆ. ಘಟನೆಯನ್ನು ಖಂಡಿಸುವ ಬದಲು ಹಿಂಬಾಲಕರಿಗೆ ಪ್ರಚೋದನೆ ನೀಡಿ ಗೂಂಡಾಗಿರಿ ನಡೆಸುತ್ತಾ ಉಡಾಫೆ ಮಾತುಗಳ ಮೂಲಕ ಜನರನ್ನು ಕೆರಳಿಸುವಂತೆ ಮಾಡುತ್ತಿರುವ ಈ ಶಾಸಕರ ಅಸಂಸ್ಕೃತಿ ಶೋಭೆಯಲ್ಲ. ಇನ್ನಾದರೂ ಇವರು ರಾಜಕೀಯ ಪ್ರೌಢಿಮೆ ಬೆಳೆಸಿಕೊಳ್ಳುವಂತೆ ಅರುಣ್ ಮಾಚಯ್ಯ ಸಲಹೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದ ವತಿಯಿಂದ ಇದೇ ತಿಂಗಳ 26ರಂದು ಮಡಿಕೇರಿಯಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನಾ ಕಾರ್ಯಕ್ರಮದಂದೆ ಅದನ್ನು ಹತ್ತಿಕ್ಕಲು ಇದೀಗ ಬಿಜೆಪಿ ಜನಜಾಗೃತಿ ಎಂಬ ಹೆಸರಿನಲ್ಲಿ ಜನದ್ರೋಹ ಸಮಾವೇಶವನ್ನು ಹಮ್ಮಿಕೊಳ್ಳುವ ಹುನ್ನಾರ ನಡೆಸಿದೆ. ಕಾಂಗ್ರೆಸ್ ಪಕ್ಷ ಮೊದಲೇ ಈ ಕಾರ್ಯಕ್ರಮ ನಿಗದಿಪಡಿಸಿದ್ದರಿಂದ ಅಂದು ಬಿಜೆಪಿಯವರಿಗೆ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಬಿಜೆಪಿಯ ಯಾವುದೇ ತಂತ್ರಕ್ಕೂ ಮಣಿಯಬಾರದು. ಬಿಜೆಪಿ ಕಾರ್ಯಕ್ರಮದ ನೆಪವೊಡ್ಡಿ ಕಾಂಗ್ರೆಸ್ ಪ್ರತಿಭಟನೆಯನ್ನು ತಡೆಯುವ ಕೆಲಸವನ್ನು ಮಾಡಬಾರದು ಎಂದು ಆಗ್ರಹಿಸಿರುವ ಅರುಣ್ ಮಾಚಯ್ಯ, ಒಂದು ವೇಳೆ ಬಿಜೆಪಿಯವರಿಗೆ ಅನುಮತಿ ನೀಡಿದರೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯೇ ಸಂಘರ್ಷಕ್ಕೆ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಅರುಣ್ ಮಾಚಯ್ಯ ಅವರು ಎಚ್ಚರಿಸಿದ್ದಾರೆ.

Join Whatsapp