ಕೊಡಗು: ಸಿದ್ದಾಪುರ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ಆರೋಪ; ಸಿಪಿಎಂ ಪ್ರತಿಭಟನೆ

Prasthutha|

ಮಡಿಕೇರಿ: ಸಿದ್ದಾಪುರ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿ ಸಿಪಿಎಂ ಪಕ್ಷದ ಕಾರ್ಯಕರ್ತರು ಗ್ರಾಮ ಪಂಚಾಯತಿ ಎದುರು ಪ್ರತಿಭಟನೆ ನಡೆಸಿದರು.

- Advertisement -

ಮಾರುಕಟ್ಟೆ ಬಳಿ ಇರುವ ಪಕ್ಷದ ಕಚೇರಿಯಿಂದ ಮೆರವಣಿಗೆ ನಡೆಸಿದ ಕಾರ್ಯಕರ್ತರು ಗ್ರಾಮ ಪಂಚಾಯತಿ ಮುಂದೆ ಜಮಾಯಿಸಿ ಧಿಕ್ಕಾರ ಘೋಷಣೆಗಳನ್ನು ಕೂಗಿದರು.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಹೆಚ್.ಬಿ ರಮೇಶ್ ಮಾತನಾಡಿ, ಗ್ರಾಮ ಪಂಚಾಯತಿ ಹೊಸ ಆಡಳಿತ ಮಂಡಳಿ ಅಧಿಕಾರಕ್ಕೇರಿ ಒಂದೂವರೆ ವರ್ಷ ಕಳೆದರೂ ಮ‌ೂಲಭೂತ ಸೌಲಭ್ಯಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ನಿವೇಶನಕ್ಕಾಗಿ ಹಲವು ಹೋರಾಟಗಳನ್ನು ನಡೆಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಿಯಮಗಳನ್ನು ಮೀರಿ ದೊಡ್ಡ ಮೊತ್ತದ ಕಾಮಗಾರಿಗಳನ್ನು ಟೆಂಡರ್ ಮಾಡದೆ ತಮಗೆ ಬೇಕಾದ ಗುತ್ತಿಗೆದಾರರಿಗೆ ನೀಡುತ್ತಿದ್ದಾರೆ. ಆಡಳಿತ ಮಂಡಳಿ ಹಾಗೂ ಕೆಲವು ಸದಸ್ಯರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇನ್ನೂ  ಕೆಲ ಸದಸ್ಯರು ಪಾನಮತ್ತರಾಗಿ ಸಭೆಗಳಲ್ಲಿ ಹಾಜರಾಗುವ ಮೂಲಕ ಸಭೆಯ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆಂದು ಆರೋಪಿಸಿದರು.

- Advertisement -

ಪ್ರತಿಭಟನಾಕಾರರ ಮನವಿ ಸ್ವೀಕರಿಸಲು ಪಿಡಿಓ ಬರಬೇಕೆಂದು ಒತ್ತಾಯಿಸಿ ಸುಮಾರು ಒಂದು ಗಂಟೆಗಳ ಕಾಲ ಪಂಚಾಯಿತಿ ಕಚೇರಿ ಮುಂದೆ ಕುಳಿತು ಘೋಷಣೆ ಕೂಗಿದರು. ಬಳಿಕ ಆಗಮಿಸಿದ ಪಿಡಿಓ ಮನಮೋಹನ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಪ್ರಮುಖರಾದ ಎನ್.ಡಿ ಕುಟ್ಟಪ್ಪ, ಅನಿಲ್ ಕುಟ್ಟಪ್ಪ, ಸಿ.ಯು ಮುಸ್ತಫ, ಬೈಜು ಸೇರಿದಂತೆ ಮತ್ತಿತರರು ಇದ್ದರು.

Join Whatsapp