ಕಾಮನ್‌ವೆಲ್ತ್ ಗೇಮ್ಸ್ : ಭಾರತಕ್ಕೆ ಮೂರನೇ ಚಿನ್ನದ ಪದಕ ತಂದಿತ್ತ ಅಚಿಂತ ಶಿಯುಲಿ

Prasthutha|

ಬರ್ಮಿಂಗ್‌ಹ್ಯಾಮ್‌ :  22ನೇ ಆವೃತ್ತಿಯ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಶನಿವಾರ (ಜುಲೈ 30) ಎರಡು ಪದಕಗಳನ್ನು ತನ್ನದಾಗಿಸಿಕೊಂಡಿದ್ದ ಭಾರತ, ಸೋಮವಾರ (ಆಗಸ್ಟ್‌ 1) ಮೂರನೇ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ.

- Advertisement -

ವೇಟ್‌ಲಿಫ್ಟಿಂಗ್‌ ಪುರುಷರ 73 ಕೆಜಿ ವಿಭಾಗದಲ್ಲಿ ಭಾರತದ ಅಚಿಂತ ಶಿಯುಲಿ ಚಿನ್ನಕ್ಕೆ ಕೊರಳೊಡ್ಡುವ ಮೂಲಕ ಭಾರತಕ್ಕೆ ವೇಟ್​ಲಿಫ್ಟಿಂಗ್​ನಲ್ಲಿ 3ನೇ ಚಿನ್ನ ದೊರೆತಿದೆ. ಒಟ್ಟಾರೆಯಾಗಿ 6ನೇ ಪದಕ ದೊರೆತಂತಾಗಿದೆ.

ಸ್ನ್ಯಾಚ್‌ ಮತ್ತು ಕ್ಲೀನ್‌ ಮತ್ತು ಜರ್ಕ್‌ನಲ್ಲಿ ಒಟ್ಟು 313 ಕೆ.ಜಿ ತೂಕ ಎತ್ತಿದ ಅಚಿಂತ, ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ದಾಖಲೆಯೊಂದಿಗೆ ಚಿನ್ನ ಗೆದ್ದರು. ಕೆನಡಾ, ಆಸ್ಟ್ರೇಲಿಯಾದ ಸ್ಪರ್ಧಿಗಳು ಭಾರತದ ಸ್ಪರ್ಧಿಯ ಎದುರು ಮಂಕಾದರು. ಸ್ನ್ಯಾಚ್‌ನ ಮೊದಲ ಪ್ರಯತ್ನದಲ್ಲಿ 143 ಕೆ.ಜಿ ಭಾರ ಎತ್ತಿದ್ದ ಅಚಿಂತ, ಕ್ಲೀನ್ ಮತ್ತು ಜರ್ಕ್ ಪ್ರಯತ್ನದಲ್ಲಿ ಮೊದಲಿಗೆ 166 ಕೆಜಿ ಎತ್ತಿ ದಾಖಲೆ ಮಾಡಿದರು. ಬಳಿಕ ಮತ್ತೊಂದು ಪ್ರಯತ್ನ ಮುಂದುವರಿಸಿ 170 ಕೆಜಿ ಎತ್ತಲು ಪ್ರಯತ್ನಿಸಿದರಾದರೂ ಯಶಸ್ವಿಯಾಗಲಿಲ್ಲ. ಆದರೆ ಕೆಲ ನಿಮಿಷಗಳ ಬಳಿಕದ ಪ್ರಯತ್ನದಲ್ಲಿ 170 ಕೆ.ಜಿ ಭಾರವನ್ನು ನಿರಾಯಾಸವಾಗಿ ಎತ್ತಿದರು.

- Advertisement -

ಮೊದಲ ಕಾಮನ್​ವೆಲ್ತ್​ ಕ್ರೀಡಾಕೂಟದಲ್ಲಿಯೇ ಪಶ್ಚಿಮ ಬಂಗಾಳದ ಬಲಾಢ್ಯ ಕ್ರೀಡಾಪಟು ದಾಖಲೆ ಬರೆದರು. 20 ವರ್ಷದ ಅಚಿಂತ, ತಮ್ಮ ಮೊದಲ ಕಾಮನ್‌ವೆಲ್ತ್‌ ಕೂಟದಲ್ಲೇ ಸ್ಮರಣೀಯ ಸಾಧನೆ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಅಚಿಂತ ಶಿಯುಲಿ ಬಡತನದಲ್ಲಿ ಬೆಳೆದವರು. ಕಳೆದ ವರ್ಷ ತಾಷ್ಕೆಂಟ್​​ನಲ್ಲಿ ನಡೆದ ಜೂನಿಯರ್​ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಬಂಗಾರ ಗೆದ್ದಿದ್ದರು. ಇದೀಗ ಕಾಮನ್​ವೆಲ್ತ್​ನಲ್ಲೂ ಚಿನ್ನದ ಸಾಧನೆ ಮಾಡಿದ್ದಾರೆ.

ಬರ್ಮಿಂಗ್‌ಹ್ಯಾಮ್‌ನಲ್ಲಿ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್‌ಗಳು ಇದುವರೆಗೂ ಒಟ್ಟು ಆರು ಪದಕಗಳನ್ನು ಗೆಲ್ಲುವಲ್ಲಿ ಸಫಲರಾಗಿದ್ದಾರೆ. ವಿಶೇಷವೆಂದರೆ ಎಲ್ಲಾ ಆರು ಪದಕಗಳೂ ವೇಟ್‌ಲಿಫ್ಟಿಂಗ್‌ನಲ್ಲೇ ಬಂದಿವೆ.  ಶನಿವಾರ ಒಂದು ಚಿನ್ನ, ಒಂದು ಬೆಳ್ಳಿ, ಒಂದು ಕಂಚಿನ ಪದಕ ಗೆದ್ದಿದ್ದ ಭಾರತ, ಭಾನುವಾರ ಪುರುಷರ 67 ಕೆಜಿ ವಿಭಾಗದಲ್ಲಿ 19 ವರ್ಷದ ಜೆರೆಮಿ ಲಾಲ್‌ರಿನುಂಗ ಹಾಗೂ ಮಹಿಳೆಯರ 55 ಕೆಜಿ ತೂಕ ವಿಭಾಗದಲ್ಲಿ ಬಿಂದ್ಯಾರಾಣಿ ದೇವಿ ಬೆಳ್ಳಿ  ಪದಕ ಸಾಧನೆ ಮಾಡಿದ್ದರು

Join Whatsapp