ಸುಳ್ಳು ಸುದ್ದಿಗಳ ಕಣಜ ಬಿಜೆಪಿ ಐಟಿ ಸೆಲ್ ಗೆ ಸಖತ್ ತಿರುಗೇಟು ನಿಡುತ್ತಿರುವ ರೈತರ ಸ್ವಂತ ಐಟಿ ಸೆಲ್!

Prasthutha|

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ಕಾನೂನಗಳನ್ನು ವಿರೋಧಿಸಿ ಸಾವಿರಾರು ಸಂಖ್ಯೆಯಲ್ಲಿ ಬೀದಿಗಿಳಿದು ಕಳೆದ 24 ದಿನಗಳಿಂದ ಕೊರೆವ ಚಳಿಯನ್ನೂ ಲೆಕ್ಕಿಸದೆ, ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಿರತರಾದ ರೈತರ ವಿರುದ್ಧ ಬಿಜೆಪಿ ಐಟಿ ಸೆಲ್ ಸಾಕಷ್ಟು ಅಪಪ್ರಚಾರದಲ್ಲಿ ನಿರವಾಗಿದೆ. ಬಿಜೆಪಿ ಸರಕಾರಗಳ ವಿರುದ್ಧದ ಯಾವುದೇ ಪ್ರತಿಭಟನೆಗಳನ್ನು ಹತ್ತಿಕ್ಕಲು ಪ್ರತಿಭಟನೆಗೆ ಮುಂದಾಗುವ ಸಂಘಟನೆಗಳು ಮತ್ತು ಅವುಗಳ ಮುಖಂಡರ ತೇಜೋವಧೆ ಮಾಡುವ ಬಿಜೆಪಿ ಐಟಿ ಸೆಲ್ ಗೆ ಠಕ್ಕರ್ ನೀಡಲು ಈಗ ಉತ್ತರ ಭಾರತದ ರೈತರು ಸ್ವತಃ ಸ್ವಂತ ಐಟಿ ಸೆಲ್ ಆರಂಭಿಸುವ ಮೂಲಕ ಮಾಧ್ಯಮಗಳ ಗಮನವನ್ನೂ ಸೆಳೆದಿದ್ದಾರೆ.

- Advertisement -

“ನಾವು ಪ್ರತಿದಿನ ಪ್ರತಿಭಟನಾ ಸಭೆಯನ್ನು ಮುಗಿಸಿ ವಿಶ್ರಾಂತಿ ಪಡೆಯುವ ಸಮಯದಲ್ಲಿ ಸಾಮಾಜಿಕ ಜಾಲತಾಣಗಳನ್ನು ಗಮನಿಸುವಾಗ ಬಿಜೆಪಿ ಐಟಿ ಸೆಲ್ ನವರು ನಮ್ಮನ್ನು ನಕ್ಸಲೀಯರು, ಮಾವೊವಾದಿಗಳು, ಭಯೋತ್ಪಾದಕರು ಎಂಬಂತೆ ಬಿಂಬಿಸುತ್ತಿರುವುದನ್ನು ನೋಡುವಾಗ ತುಂಬಾ ನೋವಾಯಿತು. ದೇಶಕ್ಕೆ ಅನ್ನ ನೀಡುವ ರೈತರನ್ನು ಹೀಗೆನ್ನುವವರ ಮನಸ್ಥಿತಿಯವರ ವಿರುದ್ಧ ಏನಾದರೂ ಮಾಡಬೇಕು ಎಂದು ಯೋಚಿಸಿ, ಸತ್ಯವನ್ನು ಪ್ರಸಾರ ಮಾಡಲು ಮತ್ತು ರೈತರ ಹೋರಾಟವನ್ನು ಹತ್ತಿಕ್ಕಲು ಸುಳ್ಳು ಸುದ್ದಿಗಳನ್ನು ಹರಡುವುದನ್ನು ಕೌಂಟರ್ ಮಾಡಲು ನಾವು ನಮ್ಮದೇ ಐಟಿ ಸೆಲ್ ಆರಂಭಿಸಿದೆವು” ಎಂದು ಯುವ ರೈತ ಮುಖಂಡ ಹಾಗೂ ರೈತರ ಐಟಿ ಸೆಲ್ ಮುಖ್ಯಸ್ಥ ಬಲ್ಜೀತ್ ಸಿಂಗ್ ‘ಎನ್ ಡಿಟಿವಿ’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

“ನಾವು ಶಾಂತಿಯುತವಾಗಿ ಹಾಗೂ ಸಂವಿಧಾನಕ್ಕೆ ಬದ್ಧವಾಗಿ ಕಾನೂನು ಹಿಂಪಡೆಯುವವರೆಗೂ ಹೋರಾಟ ಮಾಡುತ್ತೇವೆ. ಪ್ರಧಾನಿ ಮೋದಿಯವರಿಗೆ ರೈತರ ಕಷ್ಟ ಗೊತ್ತಿಲ್ಲ. ಇಲ್ಲಿನ ಚಳಿ ಸಹಿಸಲಾರದೆ ಹಲವಾರು ಮಂದಿ ಮೃತಪಟ್ಟರೂ ಕೂಡ ಅವರಿಗೆ ಚಿಂತೆ ಇಲ್ಲ” ಎಂದು ಬಲ್ಜೀತ್ ಸಿಂಗ್ ಹೇಳಿದ್ದಾರೆ.

- Advertisement -

“ನಮ್ಮ ಐಟಿ ಸೆಲ್ @KisanEktaMorcha ದ ಎಲ್ಲಾ ಟ್ವಿಟರ್, ಇನ್ಸ್ಟಾಗ್ರಾಂ, ಫೇಸ್ ಬುಕ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳನ್ನು ದೇಶದ ಜನರು ಬೆಂಬಲಿಸುತ್ತಿದ್ದಾರೆ. ಈ ಮಧ್ಯೆಯೂ ಕೂಡ ಫೇಕ್ ಅಕೌಂಟ್ ಗಳನ್ನು ಮಾಡಲು ಬಿಜೆಪಿ ಐಟಿ ಸೆಲ್ ಪ್ರಯತ್ನ ಮಾಡುತ್ತಿದೆ. ಆದುದರಿಂದ ಇಂತಹವರ ವಿರುದ್ಧ ದೇಶದ ಜನತೆ ಜಾಗರೂಕರಾಗಿರಬೇಕು” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ತಮ್ಮ ಐಟಿ ಸೆಲ್ ಮೂಲಕ ಸುಳ್ಳು ಸುದ್ದಿಗಳನ್ನು ಹರಡಿ, ಪ್ರತಿರೋಧಿ ಶಕ್ತಿಗಳ ಬಾಯಿ ಮುಚ್ಚಿಸಬಹುದೆಂದು ಭಾವಿಸಿದ್ದ ಬಿಜೆಪಿಗರಿಗೆ ಇದೇ ಮೊದಲ ಬಾರಿ ರೈತರ ಐಟಿ ಸೆಲ್ ದೊಡ್ಡ ಸವಾಲನ್ನೊಡ್ಡಿದೆ. ಹೀಗಾಗಿ, ಬಿಜೆಪಿಗರು ಏನೇ ಅಪಪ್ರಚಾರ, ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದರೂ, ಕಳೆದ 24 ದಿನಗಳಿಂದ ರೈತರ ಪ್ರತಿಭಟನೆಗೆ ದೇಶಾದ್ಯಂತ ದಿನದಿಂದ ದಿನಕ್ಕೆ ಬೆಂಬಲ ಹೆಚ್ಚುತ್ತಿದೆ ಮತ್ತು ಮೋದಿ ಸರಕಾರಕ್ಕೆ ರೈತರ ಬೇಡಿಕೆಯಾದ ಕೃಷಿ ಕಾನೂನುಗಳನ್ನು ಹಿಂಪಡೆಯುವಂತಹ ಒತ್ತಡ ತೀವ್ರಗೊಳ್ಳುತ್ತಿದೆ.  

Join Whatsapp