ಪ್ರತಿಭಟನೆಗೆ ಮುಂದಾದ ರೈತರಿಗೆ 50 ಲಕ್ಷ ರೂ. ವೈಯಕ್ತಿಕ ಬಾಂಡ್ ಸಲ್ಲಿಸಲು ನೋಟಿಸ್!

Prasthutha|

ಸಂಭಾಲ್ (ಉ.ಪ್ರ.) : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿ ವಿರುದ್ಧ ಉತ್ತರ ಭಾರತದಲ್ಲಿ ಬೀದಿಗಿಳಿದಿರುವ ರೈತರ ಹೋರಾಟವನ್ನು ಹತ್ತಿಕ್ಕಲು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರ ಇರುವ ಉತ್ತರ ಪ್ರದೇಶದಲ್ಲಿ ಮೋದಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾದ ರೈತರಿಗೆ 50 ಲಕ್ಷ ರೂ. ವೈಯಕ್ತಿಕ ಬಾಂಡ್ ಸಲ್ಲಿಸಲು ನೋಟಿಸ್ ನೀಡಿದ ವಿಲಕ್ಷಣಕಾರಿ ಘಟನೆ ನಡೆದಿದೆ.

- Advertisement -

ಬಾಂಡ್ ಮೊತ್ತ ದೊಡ್ಡದಾಗಿರುವ ಬಗ್ಗೆ ರೈತರು ಕೋರಿಕೊಂಡ ಬಳಿಕ, ಆ ಮೊತ್ತವನ್ನು ರೂ.50,000ಕ್ಕೆ ಇಳಿಕೆ ಮಾಡಲಾಗಿದೆ. ಈ ಸಂಬಂಧ ಸಂಭಾಲ್ ಜಿಲ್ಲೆಯ ಆರು ರೈತ ಮುಖಂಡರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.

ಭಾರತೀಯ ಕಿಸಾನ್ ಯೂನಿಯನ್ ಜಿಲ್ಲಾಧ್ಯಕ್ಷ ರಾಜ್ ಪಾಲ್ ಸಿಂಗ್ ಯಾದವ್ ಮತ್ತು ರೈತ ನಾಯಕರಾದ ಜೈವೀರ್ ಸಿಂಗ್, ಬ್ರಹ್ಮಚಾರಿ ಯಾದವ್, ಸತೇಂದ್ರ ಯಾದವ್, ರಾವ್ದಾಸ್, ವೀರ್ ಸಿಂಗ್ ಮುಂತಾದವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.

- Advertisement -

ಮೋದಿ ಸರಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಸಂಭಾಲ್ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲು ಈ ನಾಯಕರು ಸಿದ್ಧತೆ ನಡೆಸುತ್ತಿದ್ದರು.

“ಕೆಲವು ವ್ಯಕ್ತಿಗಳು ರೈತರನ್ನು ಉದ್ರಿಕ್ತರನ್ನಾಗಿಸುತ್ತಿದ್ದಾರೆ, ಅದರಿಂದಾಗಿ ಶಾಂತಿ, ಸುವ್ಯವಸ್ಥೆ ಹದಗೆಡುವ ಸಾಧ್ಯತೆಯಿದೆ. ಹೀಗಾಗಿ ಅವರಿಗೆ ತಲಾ 50 ಲಕ್ಷ ರೂ. ವೈಯಕ್ತಿಕ ಬಾಂಡ್ ಜಾರಿಗೊಳಿಸಬೇಕೆಂಬ ಮಾಹಿತಿ ನಮಗೆ ಹಯಾತ್ ನಗರ ಪೊಲೀಸ್ ಠಾಣೆಯಿಂದ ಬಂದಿತ್ತು” ಎಂದು ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್ ದೀಪೇಂದ್ರ ಯಾದವ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಬಾಂಡ್ ಮೊತ್ತ ತುಂಬಾ ದೊಡ್ಡದಾಗಿದೆ ಎಂದು ರೈತರು ಹೇಳಿದ ಬಳಿಕ, ಪೊಲೀಸ್ ಠಾಣಾಧಿಕಾರಿ ಮತ್ತೊಂದು ವರದಿ ನೀಡಿ, ಅವರಿಂದ ತಲಾ 50,000 ರೂ. ವೈಯಕ್ತಿಕ ಬಾಂಡ್ ಕೇಳುವಂತೆ ಸೂಚಿಸಿದ್ದಾರೆ ಎಂದು ದೀಪೇಂದ್ರ ಯಾದವ್ ತಿಳಿಸಿದ್ದಾರೆ.

ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ಕಲಂ 111ರ ಪ್ರಕಾರ ನೋಟಿಸ್ ನೀಡಲಾಗಿದೆ ಎಂದು ಪೊಲೀಸ್ ವರದಿಯಲ್ಲಿ ತಿಳಿಸಲಾಗಿದೆ. ಈ ಕಲಂ ಅನ್ವಯ ಯಾವುದೇ ವ್ಯಕ್ತಿ ಶಾಂತಿ ಕದಡುವ ಸಾಧ್ಯತೆಯನ್ನು ಮನಗಂಡು, ಮ್ಯಾಜಿಸ್ಟ್ರೇಟರು ಆದೇಶ ಜಾರಿಗೊಳಿಸಬಹುದಾಗಿದೆ.     

ನಾವು ಯಾವುದೇ ಕಾರಣಕ್ಕೂ ಬಾಂಡ್ ಸಲ್ಲಿಸುವುದಿಲ್ಲ. ಅವರು ಬೇಕಾದರೆ ನಮ್ಮನ್ನು ಗಲ್ಲಿಗೇರಿಸಲಿ ಅಥವಾ ಜೈಲಿಗೆ ಕಳುಹಿಸಲಿ. ನಾವು ರೈತರ ಪರವಾಗಿ ಹೋರಾಡುತ್ತಿದ್ದೇವೆ ಎಂದು ಬಿಕೆಯು ನಾಯಕ ರಾಜ್ ಪಾಲ್ ಸಿಂಗ್ ಯಾದವ್ ತಿಳಿಸಿದ್ದಾರೆ.

ನಾವು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೇವೆ. ರೈತ ಮುಖಂಡರು ಅಥವಾ ಅವರ ಕುಟುಂಬದ ಯಾವುದೇ ಸದಸ್ಯರು ಬಾಂಡ್ ಗೆ ಸಹಿ ಮಾಡಿಲ್ಲ ಎಂದು ಬಿಕೆಯು ವಲಯ ಅಧ್ಯಕ್ಷ ಸಂಜೀವ್ ಗಾಂದಿ ಹೇಳಿದ್ದಾರೆ.

ಪ್ರತಿಭಟನೆ ನಡೆಸುವುದು ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟೇ ಆದೇಶ ನೀಡಿದ್ದರೂ, ತಮ್ಮನ್ನು ವಿರೋಧಿಸುವವರನ್ನು ಬಾಯಿಮುಚ್ಚಿಸಲು ಬಿಜೆಪಿ ಸರಕಾರಗಳು ದೇಶಾದ್ಯಂತ ಕಾನೂನಿನ ಅವಕಾಶಗಳನ್ನು ದುರ್ಬಳಕೆ ಮಾಡುತ್ತಿರುವುದನ್ನು ನಾವು ವ್ಯಾಪಕವಾಗಿ ಗಮನಿಸುತ್ತಿದ್ದೇವೆ.  

Join Whatsapp