ಸುರತ್ಕಲ್ ಟೋಲ್ ಹೋರಾಟಗಾರರ ಮನೆಗೆ ರಾತ್ರೋರಾತ್ರಿ ನುಗ್ಗಿದ ಖಾಕಿಪಡೆ

Prasthutha|

►ಮಹಿಳಾ ಹೋರಾಟಗಾರರನ್ನೂ ಬಿಡದ ಪೊಲೀಸರು

- Advertisement -

ಮಂಗಳೂರು: ಸುರತ್ಕಲ್ ಟೋಲ್ ವಿರೋಧಿ ಹೋರಾಟವು ನಿರ್ಣಾಯಕ ಹಂತ ತಲುಪುತ್ತಿದ್ದಂತೆ ಸುರತ್ಕಲ್ ಟೋಲ್ ಹೋರಾಟಗಾರರ ಮನೆಗೆ ಖಾಕಿಪಡೆ ರಾತ್ರೋರಾತ್ರಿ ನುಗ್ಗಿ ದಾಳಿ ನಡೆಸಿದೆ. ಈ ದಾಳಿಯು ಬಿಜೆಪಿಯ ಸರ್ವಾಧಿಕಾರ ಪ್ರೇರಿತ ದಾಳಿ ಎಂದು ಹೋರಾಟಗಾರರು ಟೀಕಿಸಿದ್ದಾರೆ.

ಅಕ್ಟೋಬರ್ 18 ರಂದು ಸುರತ್ಕಲ್ ಟೋಲ್ ತೆರವುಗೊಳಿಸುವ ಉಗ್ರ ಹೋರಾಟಕ್ಕೆ ಹೋರಾಟ ಸಮಿತಿ ಕರೆಕೊಟ್ಟಿದ್ದು, ಬಿಜೆಪಿಯೇತರ ಎಲ್ಲಾ ವಿಪಕ್ಷಗಳು ಇದಕ್ಕೆ ಬೆಂಬಲ ನೀಡಿದ್ದವು. ಈ ಟೋಲ್ ವಿಚಾರವೂ ವಿಧಾನಸೌಧದಲ್ಲೂ ಸದ್ದು ಮಾಡಿದ್ದು, ಆಡಳಿತ ಪಕ್ಷಕ್ಕೆ ತಲೆನೋವು ಉಂಟು ಮಾಡಿತ್ತು. ಆದ್ದರಿಂದ ಜಿಲ್ಲಾಡಳಿತ ಮೂಲಕ ಹೋರಾಟವನ್ನು ಕೈಬಿಡುವಂತೆ ಹೋರಾಟ ಸಮಿತಿಯೊಂದಿಗೆ ಮನವಿಯನ್ನೂ ಮಾಡಲಾಗಿತ್ತು. ಆದರೆ ಅದಕ್ಕೆ ಮಣಿಯದ ಹೋರಾಟಗಾರರ ಮನೆ ಮೇಲೆ ಪೊಲೀಸರು ತಡರಾತ್ರಿ ದಾಳಿ ಮಾಡಿದ್ದು,  ಹೋರಾಟಗಾರರು 2 ಲಕ್ಷದ ಬಾಂಡ್ ಮತ್ತು ಸರ್ಕಾರಿ ಜಾಮೀನಿನೊಂದಿಗೆ ನಾಳೆ ಬೆಳಗ್ಗೆ ಪೊಲೀಸ್ ಕಮೀಷನರ್ ಕಛೇರಿಗೆ ಹಾಜರಾಗುವಂತೆ ತಾಕೀತು ಮಾಡಿದ್ದಾರೆ.

- Advertisement -

 ಕಳೆದ ಆರು ವರ್ಷಗಳಲ್ಲಿ ಟೋಲ್ ತೆರವು ಮಾಡುವ ಭರವಸೆಯನ್ನು ಆಡಳಿತ ಪಕ್ಷ ನೀಡುತ್ತಾ ಬಂದಿದ್ದರೂ ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಆದ್ದರಿಂದ ಅ. 18 ರಂದು ಟೋಲ್ ಗೆ ಮುತ್ತಿಗೆ ಹಾಕಲು ಹೋರಾಟ ಸಮಿತಿ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಹೋರಾಟವನ್ನು ಖಾಕಿ ಪಡೆಯ ಮೂಲಕ ಬಗ್ಗುಬಡಿಯಲು ಮುಂದಾದ ಸರ್ಕಾರ ಮಧ್ಯರಾತ್ರಿ ಪೊಲೀಸರಿಂದ ಮನೆಗೆ ದಾಳಿ ಮಾಡಿಸಿದೆ. ಮಹಿಳಾ ಹೋರಾಟಗಾರ್ತಿ ಪ್ರತಿಭಾ ಕುಳಾಯಿ ಮನೆಗೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ , ಪೊಲೀಸರ ಬೆದರಿಕೆಗೆ ನಾವು ಅಂಜುವುದಿಲ್ಲ, ತುಳುನಾಡ ಜನರು ಎಚ್ಚೆತ್ತುಕೊಂಡಿದ್ದಾರೆ, ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.



Join Whatsapp