ಕೆಜಿಎಫ್ ಕೃತಿಚೌರ್ಯ : ರಾಹುಲ್ ಗಾಂಧಿ ಹಾಗೂ ಇತರ ಕಾಂಗ್ರೆಸ್ ನಾಯಕರ ವಿರುದ್ಧದ ಎಫ್ ಐಆರ್ ಗೆ ಹೈಕೋರ್ಟ್ ತಡೆ

Prasthutha|

ಬೆಂಗಳೂರು: ಭಾರತ್ ಜೋಡೋ ಯಾತ್ರೆಯ ಪ್ರಚಾರ ವೀಡಿಯೋಗೆ ಕೆಜಿಎಫ್-2 ಕನ್ನಡ ಸಿನಿಮಾದ ಮುದ್ರಿತ ಸಂಗೀತವನ್ನು ಬಳಕೆ ಮಾಡುವ ಮೂಲಕ ಕೃತಿಚೌರ್ಯ ಎಸಗಲಾಗಿದೆ ಎಂದು ಆರೋಪಿಸಿ ಎಂಆರ್ ಟಿ ಮ್ಯೂಸಿಕ್ ಸಂಸ್ಥೆಯು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಜೈರಾಮ್ ರಮೇಶ್ ಮತ್ತು ಸುಪ್ರಿಯಾ ಶ್ರೀನಾಥ್ ವಿರುದ್ಧ ಬೆಂಗಳೂರಿನ ಯಶವಂತಪುರ ಠಾಣೆಯಲ್ಲಿ ದಾಖಲಿಸಿರುವ ಎಫ್ ಐಆರ್ ನ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

- Advertisement -

ಕಾಂಗ್ರೆಸ್ ನಾಯಕರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠವು ಪ್ರಕರಣದ ಮುಂದಿನ ವಿಚಾರಣೆಯವರೆಗೆ ಎಫ್ಐಆರ್ ಆಧರಿಸಿ ತನಿಖೆ ನಡೆಸದಂತೆ ತಡೆ ನೀಡಿ ಆದೇಶಿಸಿದೆ.

ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಎ ಎಸ್ ಪೊನ್ನಣ್ಣ ಅವರು “ಹೈಕೋರ್ಟ್’ನ ವಿಭಾಗೀಯ ಪೀಠಕ್ಕೆ ನೀಡಿದ ಭರವಸೆಯಂತೆ ಕಾಂಗ್ರೆಸ್ ಪಕ್ಷದ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಕೆಜೆಎಫ್-2 ಗೀತೆ ಒಳಗೊಂಡ ವಿಡಿಯೊವನ್ನು ತೆಗೆಯಲಾಗಿದೆ. ಎಂಆರ್ ಟಿ ಮ್ಯೂಸಿಕ್ ದಾವೆ ಆಧರಿಸಿ ವಾಣಿಜ್ಯ ನ್ಯಾಯಾಲಯವು ಕಾಂಗ್ರೆಸ್ ಮತ್ತು ಭಾರತ್ ಜೋಡೋ ಸಾಮಾಜಿಕ ಜಾಲತಾಣ ಖಾತೆಗಳನ್ನು ನಿರ್ಬಂಧಿಸುವಂತೆ ಆದೇಶಿಸಿತ್ತು. ಈ ಆದೇಶವನ್ನು ವಿಭಾಗೀಯವು ತಡೆ ಹಿಡಿದಿತ್ತು” ಎಂದರು.

- Advertisement -

ಎಂಆರ್ ಟಿ ಮ್ಯೂಸಿಕ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಎಸ್ ಶ್ಯಾಮಸುಂದರ್ ಅವರು “ಅರ್ಜಿಯನ್ನು ತುರ್ತಾಗಿ ಆಲಿಸುವ ಅಗತ್ಯವಿಲ್ಲ. ಚಳಿಗಾಲದ ರಜೆ ಮುಗಿದ ಬಳಿಕ ವಿಚಾರಣೆ ನಡೆಸಬಹುದಾಗಿದೆ. ಆಕ್ಷೇಪಾರ್ಹವಾದ ವೀಡಿಯೋ ತೆಗೆಯುವ ಸಂಬಂಧ ನ್ಯಾಯಾಲಯಕ್ಕೆ ಭರವಸೆ ನೀಡಿರುವ ಹೊರತಾಗಿಯೂ ಅವುಗಳನ್ನು ತೆಗೆಯಲಾಗಿಲ್ಲ. ಹೀಗಾಗಿ, ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲಾಗಿದೆ” ಎಂದು ವಿವರಿಸಿದರು.

ಕೃತಿ ಸ್ವಾಮ್ಯ ಉಲ್ಲಂಘಿಸಿ ಕಾಂಗ್ರೆಸ್ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಬಳಸಿರುವ ಕೆಜಿಎಫ್-2 ಸಿನಿಮಾದ ಮುದ್ರಿತ ಸಂಗೀತವನ್ನು ತೆರವುಗೊಳಿಸಲು ನಿರ್ದೇಶಿಸಿದ್ದ ಹೈಕೋರ್ಟ್ ನ ವಿಭಾಗೀಯ ಪೀಠದ ಆದೇಶವನ್ನು ಪಾಲಿಸಿಲ್ಲ ಎಂದು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಪಕ್ಷದ ಮುಖಂಡರಿಗೆ ಡಿ.2 ರಂದು ನೋಟಿಸ್ ಜಾರಿ ಮಾಡಿತ್ತು.

(ಕೃಪೆ: ಬಾರ್ & ಬೆಂಚ್)



Join Whatsapp