ಏಷ್ಯಾ ಕಪ್‌ | ಯುಎಇ ತಂಡಕ್ಕೆ ಕೇರಳದ ರಿಝ್ವಾನ್‌ ರೌಫ್‌ ನಾಯಕ

Prasthutha|

ಆಗಸ್ಟ್‌ 27ರಿಂದ ಆರಂಭವಾಗಲಿರುವ ಏಷ್ಯಾ ಕಪ್‌ ಟಿ20 ಟೂರ್ನಿಯಲ್ಲಿ ಆತಿಥೇಯ ಯುಎಇ ತಂಡವನ್ನು ಕೇರಳದ ರಿಝ್ವಾನ್‌ ರೌಫ್‌ ಮುನ್ನಡೆಸಲಿದ್ದಾರೆ. ಯುಎಇ ಕ್ರಿಕೆಟ್‌ನ ಚರಿತ್ರೆಯಲ್ಲೇ ಇದೇ ಮೊದಲ ಬಾರಿಗೆ ಕೇರಳದ ಯುವಕನೋರ್ವ ತಂಡದ ಸಾರಥ್ಯ ವಹಿಸಲಿದ್ದಾರೆ. ಅದಾಗಿಯೂ ಅಂತಾರಾಷ್ಟ್ರೀಯ ಟಿ20 ಟೂರ್ನಿಗಳಲ್ಲಿ ರಝಾ ಅವರು ಯುಎಇ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ.

- Advertisement -

ಕೇರಳದ ತಲಶ್ಯೇರಿ ಮೂಲದವರಾದ ಆಲ್‌ರೌಂಡರ್‌ ರಿಝ್ವಾನ್‌ ರೌಫ್‌, 2018ರಿಂದಲೂ ಯುಎಇ ತಂಡದ ಭಾಗವಾಗಿದ್ದಾರೆ. ಶನಿವಾರದಿಂದ ಒಮನ್‌ನ ಅಲ್-ಅಮೆರಾತ್‌ನಲ್ಲಿ ಏಷ್ಯಾಕಪ್ ಅರ್ಹತಾ ಸುತ್ತಿನ ಪಂದ್ಯ ಪ್ರಾರಂಭವಾಗಲಿದೆ. ಇದು  ರಿಝ್ವಾನ್‌ಗೆ ಚೊಚ್ಚಲ ನಾಯಕತ್ವದ ಸವಾಲಾಗಿರಲಿದೆ. ಅರ್ಹತಾ ಸುತ್ತಿನಲ್ಲಿ ಗೆಲುವು ಸಾಧಿಸಿದರೆ ಭಾರತ, ಪಾಕಿಸ್ತಾನ ತಂಡಗಳನ್ನೊಳಗೊಂಡ ಏಷ್ಯಾ ಕಪ್‌ನ ಪ್ರಧಾನ ಸುತ್ತಿಗೆ ಯುಎಇ ಅರ್ಹತೆ ಪಡೆಯಲಿದೆ.‌

ರಿಝ್ವಾನ್‌ ಜೊತೆಗೆ ಕೇರಳದ ಇನ್ನಿಬ್ಬರು ಆಟಗಾರರಾದ ಬಾಝಿಲ್ ಹಮೀದ್ ಮತ್ತು ಅಲಿಶನ್ ಶರಾಫು, ಯುಎಇ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ಯುಎಇ ಪರ ಏಳು ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ರಿಝ್ವಾನ್‌, 16.66 ರ ಸರಾಸರಿಯಲ್ಲಿ 100 ರನ್ ಗಳಿಸಿದ್ದಾರೆ.  ಮತ್ತು 101.01 ರ ಸ್ಟ್ರೈಕ್ ರೇಟ್ ಅನ್ನು ಗಳಿಸಿದ್ದಾರೆ. ಸ್ಥಳೀಯ ಕ್ರಿಕೆಟ್‌ ಟೂರ್ನಿಗಳಲ್ಲಿ ತನ್ನ ಆಲ್‌ರೌಂಡರ್‌ ಪ್ರದರ್ಶನದಿಂದಾಗಿ ಮಿಂಚಿದ್ದ ರೌಫ್‌, 2018ರಲ್ಲಿ ಯುಎಇ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರು.

- Advertisement -

ಕಳೆದ ವರ್ಷ ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಆಕರ್ಷಕ ಶತಕ (109)ಗಳಿಸಿ ರಿಝ್ವಾನ್‌ ರೌಫ್‌ ಮಿಂಚಿದ್ದರು. ಇದುವರೆಗೂ 29 ಏಕದಿನ ಪಂದ್ಯಗಳನ್ನಾಡಿರುವ ರೌಫ್‌,. ಒಟ್ಟು 736 ರನ್ ಗಳಿಸಿದ್ದಾರೆ. ಬ್ಯಾಟಿಂಗ್‌ ಜೊತೆಗೆ ಬೌಲಿಂಗ್‌ನಲ್ಲೂ ರೌಫ್‌ ತಂಡಕ್ಕೆ ನೆರವಾಗುತ್ತಿದ್ದಾರೆ.

ಇದಕ್ಕೂ ಮೊದಲು ಕೃಷ್ಣ ಚಂದ್ರನ್, ಲಕ್ಷ್ಮಣ್ ಮತ್ತು ಶನಿಲ್ ಈ ಹಿಂದೆ ಯುಎಇಯ ರಾಷ್ಟ್ರೀಯ ತಂಡ ಪರ ಆಡಿದ್ದಾರೆ. ಇವರಲ್ಲಿ ಕೃಷ್ಣ ಚಂದ್ರನ್ ರಣಿಜಿ ಟ್ರೋಫಿಯಲ್ಲಿ ಕೇರಳ ಪರ ಆಡಿದ ದಾಖಲೆ ಹೊಂದಿದ್ದಾರೆ.

Join Whatsapp