ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದಿರುವುದು, ಬಿಜೆಪಿ ಪೋಷಿತ ಗೂಂಡಾಗಳ ಕೃತ್ಯ: ಜೆ.ಡಿ.ಎಸ್

Prasthutha|

ಮಡಿಕೇರಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಮೊಟ್ಟೆ ಎಸೆದು ಅವಮಾನಿಸಿರುವುದು ಖಂಡನೀಯ, ಇದು ಬಿಜೆಪಿ ಪೋಷಿತ ಗೂಂಡಾಗಳ ಕೃತ್ಯ ಎಂದು ಸೋಮವಾರಪೇಟೆ ತಾಲೂಕು ಜೆಡಿಎಸ್ ಅಸಮಧಾನ ವ್ಯಕ್ತಪಡಿಸಿದೆ.

- Advertisement -

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್ ಸುರೇಶ್, ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಲು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಬಂದಾಗ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಅಎದು ಅವಮಾನ ಮಾಡಿರುವುದು, ಜಿಲ್ಲೆಯ ಜನತೆಗೆ ಹಾಗು ರೈತರಿಗೆ ಮಾಡಿದ ಅವಮಾನ ಎಂದು ಹೇಳಿದ್ದಾರೆ.

ಪ್ರತಿವರ್ಷ ಮಳೆಗಾಲದಲ್ಲಿ ಭಾರೀ ಪ್ರಮಾಣದ ಹಾನಿ ಸಂಭವಿಸುತ್ತಿದೆ. ಸರಿಯಾದ ಪರಿಹಾರವೂ ಸಿಗುತ್ತಿಲ್ಲ. ಈ ವರ್ಷವೂ ಮಳೆಹಾನಿಯಾಗಿದ್ದು ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಲು ವಿಧಾನಸಭೆಯಲ್ಲಿ ಹೋರಾಟ ಮಾಡಲೇಬೇಕಾದ ಅನಿವಾರ್ಯತೆ ಒದಗಿದೆ. ಈ ಸಂದರ್ಭದಲ್ಲಿ  ಮೊಟ್ಟೆ ಎಸೆದು ಅವಮಾನ ಮಾಡಿರುವುದನ್ನು ಪಕ್ಷದ ವತಿಯಿಂದ ತೀವ್ರವಾಗಿ ಖಂಡಿಸುವುದಾಗಿ ಹೇಳಿದರು.

- Advertisement -

ಸರ್ಕಾರದಲ್ಲಿ ವಿರೋಧ ಪಕ್ಷದ ನಾಯಕರಿಗೆ ರಕ್ಷಣೆ ಇಲ್ಲ ಅಂದರೆ ಇನ್ನು ಸಾಮಾನ್ಯ ಜನರ ಪಾಡೇನು ಎಂದು ಪ್ರಶ್ನಿಸಿದ ಅವರು, ಬಿಜೆಪಿ ಸರ್ಕಾರದ ಕುಮ್ಮಕ್ಕಿನಿಂದಲೇ ವಿರೋಧ ಪಕ್ಷದ ನಾಯಕರ ಮೇಲೆ ಮೊಟ್ಟೆ ಹೊಡೆದು, ಕಪ್ಪುಬಟ್ಟೆ ಪ್ರದರ್ಶಿಸಲಾಗಿದೆ ಎಂದು ದೂರಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಶೇ 40 ರ ಸರ್ಕಾರ ಎಂದು ಕುಖ್ಯಾತಿ ಪಡೆದಿದೆ. ನಡೆದ ಕಾಮಗಾರಿ ಕಳಪೆಯಾಗಿವೆ. ಕಳಪೆ ರಸ್ತೆಗಳು ಮಳೆಯಲ್ಲಿ ಕೊಚ್ಚಿ ಹೋಗಿವೆ. ಇವುಗಳನ್ನೆಲ್ಲಾ ವಿರೋಧ ಪಕ್ಷದ ನಾಯಕರು ನೋಡಿ, ಸರ್ಕಾರದ ಅನ್ಯಾಯದ ಬಗ್ಗೆ ಮಾತನಾಡುತ್ತಾರೆ ಎಂಬ ಭಯದಿಂದ, ಅವಮಾನ ಮಾಡುವ ಕೃತ್ಯಕ್ಕೆ ಕೈಹಾಕಿದೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಯುವ ಜನತಾದಳ ಅಧ್ಯಕ್ಷ ತ್ರಿಶೂಲ್, ನಗರ ಅಧ್ಯಕ್ಷ  ಕಮಲ್ ಜಯಾನಂದ, ಮುಖಂಡರಾದ ಅನಿಲ್, ಪ್ರವೀಣ್ ಮುಂತಾದವರು ಉಪಸ್ಥಿತರಿದ್ದರು.

Join Whatsapp