ಬೆಂಗಳೂರು: ಕೇರಳ ಮೂಲದ ಯುವತಿಯ ಮೇಲೆ ಅತ್ಯಾಚಾರವೆಸಗಿರುವ ಆರೋಪದಲ್ಲಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಕಳೆದ ನ.24 ರಂದು ಎಲೆಕ್ಟ್ರಾನಿಕ್ ಸಿಟಿ ನಿಲಾದ್ರಿ ನಗರದ ಬಳಿ ಯುವಕರಿಂದ ಯುವತಿಯ ಮೇಲೆ ನಡೆದ ಪೈಶಾಚಿಕ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.
ಅತ್ಯಾಚಾರಕ್ಕೊಳಗಾದ ಸಂತ್ರಸ್ತ ಯುವತಿಯು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ಕೈಗೊಂಡ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.
ಬಿಟಿಎಂ ಲೇಔಟ್ ನ ಸಂಸ್ಥೆಯೊಂದರಲ್ಲಿ ಫ್ರೀಲ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಯುವತಿಯು ನ.24 ರಾತ್ರಿ ರ್ಯಾಪಿಡೋ ಬೈಕ್ ಬುಕ್ಕಿಂಗ್ ಮಾಡಿದ್ದಳು. ರ್ಯಾಪಿಡೋ ಬೈಕ್ ನ ಸವಾರ ಆಕೆಯನ್ನು ಪಿಕ್ ಅಪ್ ಮಾಡುವ ವೇಳೆ ಯುವತಿ ಮದ್ಯಪಾನ ಮಾಡಿದ್ದಳು. ಹೀಗಾಗಿ ನೀಲಾದ್ರಿ ನಗರಕ್ಕೆ ತಲುಪುವ ಹೊತ್ತಿಗೆ ಯುವತಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದಳು.
ಯುವತಿ ಅರೆ ಪ್ರಜ್ಞಾವಸ್ಥೆಯಲ್ಲಿರುವ ವಿಷಯವನ್ನು ಬೈಕ್ ಸವಾರ ತನ್ನ ಸ್ನೇಹಿತನಿಗೆ ತಿಳಿಸಿದ್ದಾನೆ. ನಂತರ ಸ್ನೇಹಿತನ ನೆರವಿನಿಂದ ಆಕೆಯನ್ನು ನಿಶ್ಚಿತ ಜಾಗಕ್ಕೆ ತಲುಪಿಸದೆ, ತನ್ನ ರೂಮಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಇಬ್ಬರು ಯುವಕರು ಸೇರಿಕೊಂಡು ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ.
ಪಾನಮತ್ತಳಾಗಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಯುವತಿಯನ್ನು, ಪ್ರಜ್ಞೆ ಬಂದ ಬಳಿಕ ಯುವಕರು ಬಿಟ್ಟು ಕಳುಹಿಸಿದ್ದಾರೆ. ನಂತರ ಈ ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾರೆ.
ಬೆಳಿಗ್ಗೆ ಸುಧಾರಿಸಿಕೊಂಡು ಸ್ನೇಹಿತರ ಸಲಹೆ ಮೇರೆಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ದೂರು ಆಧರಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.