ತಿರುವನಂತಪುರ: ರಾಜ್ಯಪಾಲ ಮತ್ತು ಸರಕಾರದ ನಡುವೆ ನಡೆಯುತ್ತಿರುವ ತಿಕ್ಕಾಟದ ನಡುವೆ, ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರ ಕೊನೆಗೂ ರಾಜ್ಯ ವಿಶ್ವವಿದ್ಯಾಲಯಗಳ ಕುಲಾಧಿಪತಿ ಹುದ್ದೆಯಿಂದ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರನ್ನು ತೆಗೆದುಹಾಕಿ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ರಾಜಭವನಕ್ಕೆ ಕಳುಹಿಸಿದೆ.
ರಾಜ್ಯದ ಎಲ್ಲಾ ಒಂಬತ್ತು ವಿಶ್ವವಿದ್ಯಾಲಯಗಳ ಕುಲಪತಿಗಳ ರಾಜೀನಾಮೆಯನ್ನು ರಾಜ್ಯಪಾಲರು ಕೋರಿದ ನಂತರ ರಾಜ್ಯ ಸಚಿವ ಸಂಪುಟವು ಈ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿತ್ತು. ಕುಲಾಧಿಪತಿಗಳ ಸ್ಥಾನದಲ್ಲಿ ಶಿಕ್ಷಣ ತಜ್ಞರನ್ನು ನಿಯೋಜಿಸಲು ಸರಕಾರ ಮುಂದಾಗಿದೆ.
ವಿವಿಧ ವಿಶ್ವವಿದ್ಯಾಲಯಗಳ ಕುಲಾಧಿಪತಿ ಹುದ್ದೆಯಿಂದ ರಾಜ್ಯಪಾಲರನ್ನು ತೆಗೆದುಹಾಕುವ ಸುಗ್ರೀವಾಜ್ಞೆಯನ್ನು ರಾಜ್ಯ ಸರಕಾರ ರಾಜ್ಯ ಭವನಕ್ಕೆ ಕಳುಹಿಸಿಕೊಟ್ಟಿದೆ ಎಂದು ಕೇರಳ ರಾಜಭವನ ಶನಿವಾರ ದೃಢಪಡಿಸಿದೆ.
ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರನ್ನು ಕುಲಾಧಿಪತಿ ಹುದ್ದೆಯಿಂದ ತೆಗೆದುಹಾಕಲು ಕೇರಳ ಸಚಿವ ಸಂಪುಟ ಬುಧವಾರ ನಿರ್ಧರಿಸಿತ್ತು.